ಕೊಲೆ ಪ್ರಕರಣದ ಆರೋಪಿ ಬಂಧನ | crime

ರಾಘವೇಂದ್ರ
ರಾಘವೇಂದ್ರ
Published on
ಶಿರಾಳಕೊಪ್ಪ: ಬಿಳಿಕಿ ಗ್ರಾಮದ ಅಂಗನವಾಡಿ ಅಡುಗೆ ಸಹಾಯಕಿ ಪ್ರೇಮಾ (52) ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ಕೋಡಿಹಳ್ಳಿ ಗ್ರಾಮದ ರಾಘವೇಂದ್ರ (26) ಎಂಬುವನನ್ನು ಶಿರಾಳಕೊಪ್ಪ ಪೊಲೀಸರು ಬಂಧಿಸಿದ್ದಾರೆ.
ಫೆ.13ರ ರಾತ್ರಿ ಪ್ರೇಮಾ ಅವರು ಅಕ್ಕಪಕ್ಕದ ಮನೆಯವರೊಂದಿಗೆ ಮಾತನಾಡಿ, ಟಿವಿ ವೀಕ್ಷಿಸಿ ಮನೆಗೆ ಮರಳಿ ಊಟ ಮಾಡಿ ಮಲಗಿದ್ದರು. ಮರು ದಿನ ಬೆಳಗ್ಗೆ ಅಂಗನವಾಡಿ ಶಿಕ್ಷಕಿ ಕರೆ ಮಾಡಿದರೂ ಪ್ರೇಮಾ ಅವರು ಮೊಬೈಲ್ ಕರೆ ಸ್ವೀಕರಿಸದ ಹಿನ್ನೆಲೆ, ಎದುರು ಮನೆಯವರಿಗೆ ಕರೆ ಮಾಡಿ ವಿಚಾರಿಸಲು ತಿಳಿಸಿದ್ದಾರೆ. ಮನೆಯ ಗೇಟ್‌ಗೆ ಬೀಗ ಹಾಕಿರುವುದನ್ನು ನೋಡಿ ಅನುಮಾನಗೊಂಡ ಅಕ್ಕಪಕ್ಕದವರು ಹಿಂಬದಿ ಬಾಗಿಲಿನ ಮೂಲಕ ಒಳಗೆ ಪ್ರವೇಶಿಸಿದಾಗ ಪ್ರೇಮಾ ಅವರ ಶವ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪರಿಶೀಲನೆ ನಡೆಸಿ, ಮೃತಳ ಪುತ್ರ ನೀಡಿದ ದೂರಿನ ಮೇರೆಗೆ ಅತ್ಯಾಚಾರ, ಕೊಲೆ ಪ್ರಕರಣ ದಾಖಲಿಕೊಂಡು ತನಿಖೆ ಆರಂಭಿಸಿದ್ದರು. ಆ ದಿನ ರಾತ್ರಿ ಸುಮಾರು 11.20ರ ಸುಮಾರಿಗೆ ಅವರ ಮನೆಯ ಹಿಂಭಾಗದಿಂದ ಬೈಕ್ ಸವಾರನೊಬ್ಬ ಆತುರವಾಗಿ ತೆರಳಿದ್ದನ್ನು ಪಕ್ಕದ ಮನೆಯ ನಿವಾಸಿಯೊಬ್ಬರು ಗಮನಿಸಿದ್ದರು. ಆತ ಪ್ರೇಮಾ ಅವರಿಗೆ ಪರಿಚಿತನಾಗಿದ್ದ ಕಾರಣ ಹೆಚ್ಚಿನ ಅನುಮಾನ ವ್ಯಕ್ತಪಡಿಸಿರಲಿಲ್ಲ. ಆದರೆ ಪೊಲೀಸರು ಈ ದಿಕ್ಕಿನಲ್ಲಿ ತನಿಖೆ ನಡೆಸಿದಾಗ ಪ್ರೇಮಾ ಅವರ ದೂರದ ಸಂಬಂಧಿ ರಾಘವೇಂದ್ರನೇ ಆರೋಪಿ ಎಂದು ಪರಿಗಣಿಸಿ ಬಂಧಿಸಿದ್ದಾರೆ. ಬಂಧಿತ ರಾಘವೇಂದ್ರ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ.
ವೃತ್ತ ನಿರೀಕ್ಷಕ ಸಂತೋಷ ಪಾಟೀಲ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದ್ದು, ಶಿರಾಳಕೊಪ್ಪ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net