ಮುದ್ರಿತ ಸಾಹಿತ್ಯದಿಂದ ಹೊರಬಂದರೆ ಹೊಸ ಗ್ರಹಿಕೆ ಸಾಧ್ಯ

ರಹಮತ್ ತರೀಕೆರೆ
ರಹಮತ್ ತರೀಕೆರೆ
Published on
ಶಿವಮೊಗ್ಗ: ಮುದ್ರಿತ ಸಾಹಿತ್ಯದಿಂದ ಆಚೆ ಬಂದಾಗ ಮಾತ್ರ ಹೊಸ ಗ್ರಹಿಕೆ ಸಾಧ್ಯ ಎಂದು ಸಂಸ್ಕೃತಿ ಚಿಂತಕ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ. ರಹಮತ್ ತರೀಕೆರೆ ಹೇಳಿದರು.
ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಂದರ್ಶಕ ಪ್ರಾಧ್ಯಾಪಕರ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಾಹಿತ್ಯ ಓದು ಸಂಸ್ಕೃತಿ ಅನುಸಂಧಾನದ ಮಾದರಿಗಳು’ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಓದಿಗೆ ವ್ಯಾಪಕವಾದ ಅರ್ಥ ಇದೆ. ಓದು ಎಂದರೆ ಕೇವಲ ಗ್ರಂಥ ಭಾಷೆ ಮಾತ್ರ ಅಲ್ಲ. ಮುದ್ರಣದ ವಿಷಯಗಳನ್ನು ಬಿಟ್ಟು ಆಚೆ ನೋಡುವುದೇ ಓದು. ಇದು ಕೇವಲ ಓದುವುದು ಮಾತ್ರ ಅಲ್ಲ. ಕೇಳುವುದು, ನೋಡುವುದೂ ಆಗಬಹುದು. ಅಲ್ಲದೆ ಸೀಮಿತ ಗ್ರಹಿಕೆಯನ್ನು ಒಡೆದುಹಾಕುತ್ತದೆ ಎಂದರು.
ಸಾಹಿತ್ಯ ಕೇವಲ ಅಕ್ಷರಗಳ ರೂಪವಲ್ಲ. ಅದು ಒಂದು ಪರಂಪರೆ, ಇತಿಹಾಸ. ಜಾನಪದ ಹಾಡೂ ಸಹ ಹೌದು. ಸಂಗೀತ ಕೂಡ ಸಾಹಿತ್ಯವೇ. ಮಂಟೆಸ್ವಾಮಿಯಂತಹ ಹಾಡುಗಳು ಸಾಹಿತ್ಯಕ್ಕಿಂತ ಮೊದಲೇ ಇದ್ದಿದ್ದು. ಹಾಗಾಗಿ ಸಾಹಿತ್ಯ ದೃಶ್ಯಗಳ ಮೂಲಕವೂ ಸಾಗಿ ಅದು ಒಂದು ಪ್ರಜ್ಞಾ ಸ್ಥಿತಿಯನ್ನು ತಲುಪುತ್ತದೆ ಎಂದರು.
ಸಂಸ್ಕೃತಿಗೆ ಹಲವು ಅರ್ಥಗಳಿವೆ. ಸಮುದಾಯ, ನೈತಿಕ ಮೌಲ್ಯಗಳು, ಕಲೆ, ಆಲೋಚನೆಗಳು, ಚಿಂತನೆ, ವರ್ತನೆ ಇವೆಲ್ಲವೂ ಸಂಸ್ಕೃತಿಯ ಬೇರೆ ಬೇರೆ ರೂಪದ ಅರ್ಥಗಳೇ ಆಗಿವೆ. ಬದುಕಿನ ಚಿಂತನ ಕ್ರಮವನ್ನು ನಾವು ಸಂಸ್ಕೃತಿಯೆಂದೇ ಕರೆಯುತ್ತಿದ್ದೇವೆ. ಸಂಸ್ಕೃತಿಯಲ್ಲಿ ಮಾರಕವಾದದ್ದು ಇರುತ್ತದೆ. ಭೂತ ಕಾಲದ ಸಂಸ್ಕೃತಿಯನ್ನು ನಾವು ಕೇವಲ ನೋಡುವುದಷ್ಟೇ ಅಲ್ಲ. ಅದನ್ನು ವರ್ತಮಾನಕ್ಕೆ ತರಬೇಕು. ಆಗ ಹೊಸ ಆಲೋಚನಾ ಕ್ರಮ ನಮ್ಮ ಮುಂದೆ ಬರುತ್ತದೆ ಎಂದು ಹೇಳಿದರು.
ಸಾಹಿತ್ಯ ನಮ್ಮನ್ನು ಡಿಸ್ಟರ್ಬ್ ಮಾಡುವಂತಿರಬೇಕು. ಎಷ್ಟೋ ಸಾಹಿತ್ಯವು ನಮ್ಮ ಮನಸ್ಸನ್ನು ಕದಡುವುದು ನಿಜ. ಲಂಕೇಶ್ ಅವರ ಅವ್ವ ಕವಿತೆಯನ್ನು ಇಟ್ಟುಕೊಂಡು ಸಾಹಿತ್ಯ ಮತ್ತು ಸಂಸ್ಕೃತಿ ಸೇರಿ ಇತರೆ ಆಯಾಮಗಳನ್ನು ಇಟ್ಟುಕೊಂಡು ವಿದ್ಯಾರ್ಥಿಗಳೊಂದಿಗೆ ಅನುಸಂಧಾನ ಮಾಡಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಡಾ. ಸಣ್ಣರಾಮ, ಪಠ್ಯಪುಸ್ತಕಗಳ ಆಚೆ ನಿಂತು ನಾವು ನೋಡಬೇಕಿದೆ. ಪ್ರೀತಿ, ವಿಶ್ವಾಸಗಳಿಗೆ ತೆರೆದುಕೊಳ್ಳಬೇಕಾಗಿದೆ. ಮನುಷ್ಯತ್ವವೇ ಮುಖ್ಯ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕಾಗಿದೆ. ಸಾಹಿತಿ ಕೇವಲ ಒಂದು ವಿಷಯಕ್ಕೆ ಮಾತ್ರ ಸೀಮಿತವಾಗಬಾರದು. ಆತ ಮನೋವಿಜ್ಞಾನಿಯೂ ಆಗಿರಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್.ಸಿರಾಜ್ ಅಹಮ್ಮದ್ ಮಾತನಾಡಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್.ಮಂಜುನಾಥ್, ಐಕ್ಯೂಎಸಿ ಸಂಚಾಲಕ ಡಾ. ಎಚ್.ಪಿ.ಮಂಜುನಾಥ್, ಕಾರ್ಯಕ್ರಮದ ಸಂಚಾಲಕರಾದ ಡಾ. ಕೆ.ಎಂ.ಮಹದೇವಸ್ವಾಮಿ, ಡಾ. ಹಾಲಮ್ಮ, ಮೇಟಿ ಮಲ್ಲಿಕಾರ್ಜುನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net