ಹಿಂದುತ್ವದ ಪರ ಹೋರಾಟ ಮಾದರಿ | Dr. Shyamaprasad Mukherjee
ಡಾ. ಶ್ಯಾಮಾಪ್ರಸಾದ್ ಮುಖರ್ಜಿ ಅವರ ಪುಣ್ಯಸ್ಮರಣೆ ಅಂಗವಾಗಿ ಸೊರಬದಲ್ಲಿ ಆಯೋಜಿಸಿದ್ದ ಪಂಜಿನ ಮೆರವಣಿಗೆಯಲ್ಲಿ ಡಾ. ಜ್ಞಾನೇಶ್, ಪ್ರಕಾಶ್ ಅಗಸನಹಳ್ಳಿ, ಪಾಣಿ ರಾಜಪ್ಪ, ಮೋಹನ್ ಇತರರಿದ್ದರು.
ಸೊರಬ: ದೇಶದ ಐಕ್ಯತೆಗಾಗಿ ಜೀವನವನ್ನು ಮುಡಿಪಾಗಿಟ್ಟು ಹಾಗೂ ದೇಶದಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಂದಾಗ ಪ್ರಾಣವನ್ನೇ ಸಮರ್ಪಿಸಿದ ಧೀಮಂತ ನಾಯಕ ಡಾ. ಶ್ಯಾಮಾಪ್ರಸಾದ್ ಮುಖರ್ಜಿ ಎಂದು ದಂತ ವೈದ್ಯ ಜ್ಞಾನೇಶ್ ಹೇಳಿದರು.
ಪಟ್ಟಣದಲ್ಲಿ ಬುಧವಾರ ಡಾ. ಶ್ಯಾಮಾಪ್ರಸಾದ್ ಮುಖರ್ಜಿ ಅವರ ಬಲಿದಾನದ ದಿನದ ಅಂಗವಾಗಿ ತಾಲೂಕು ಬಿಜೆಪಿಯಿಂದ ಪಂಜಿನ ಮೆರವಣಿಗೆ ನಡೆಸಿ ಮಾತನಾಡಿದರು.
ಮುಖರ್ಜಿ ಅವರು ರಾಜಕಾರಣಿ, ನ್ಯಾಯವಾದಿ, ಶಿಕ್ಷಣ ತಜ್ಞ, ಕೈಗಾರಿಕೋದ್ಯಮ ಮತ್ತು ಸರಬರಾಜು ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಜಗತ್ತಿನಲ್ಲಿ ಭಾರತವನ್ನು ಪ್ರಬಲ ರಾಷ್ಟ್ರವನ್ನಾಗಿಸುವ ಗುರಿ ಇಟ್ಟುಕೊಂಡು ಆ ಕಾರ್ಯಕ್ಕಾಗಿ ತಮ್ಮ ಬದುಕನ್ನು ಸೆವೆಸಿದ್ದರು. ಅವರ ಹಿಂದುತ್ವ ಹೋರಾಟದ ಗುಣವನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳಬೇಕು ಎಂದರು.
ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಜಿಪಂ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಟೌನ್ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್, ಜಾನಕಪ್ಪ ಒಡೆಯರ್, ದೇವೇಂದ್ರಪ್ಪ, ಡಿ.ಶಿವಯೋಗಿ, ಮಧುರಾಯ್ ಶೇಟ್, ಸುರೇಶ್ ಉದ್ರಿ, ಆಶಿಕ್, ವಿನಯ್ ಶೆರ್ವಿ, ಯೋಗೀಶ್, ಸಂದೀಪ್, ಹರೀಶ್ ಇತರರಿದ್ದರು.