ಜಿಲ್ಲೆಯಲ್ಲಿ 1098ಕ್ಕೆ ದೂರಿನ ಸುರಿಮಳೆ | Child Helpline

ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಿದ ಭದ್ರಾವತಿ ಪೊಲೀಸರು.
ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಿದ ಭದ್ರಾವತಿ ಪೊಲೀಸರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆ, ಭವಿಷ್ಯದಲ್ಲೂ ಅವರ ಸುರಕ್ಷೆಗೆ ಒತ್ತು
  • ಶಾಲೆ ಬಿಟ್ಟ ಮಕ್ಕಳು, ಬಾಲ್ಯವಿವಾಹ ಬಗ್ಗೆಯೇ ಹೆಚ್ಚು
  • ಒಂದು ವರ್ಷ ಮೂರು ತಿಂಗಳಲ್ಲಿ ಸಹಾಯವಾಣಿಗೆ 600 ಕರೆ
ನವೀನ್ ಬಿಲ್ಗುಣಿ ಶಿವಮೊಗ್ಗ
ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆ, ಭವಿಷ್ಯದಲ್ಲೂ ಅವರ ಸುರಕ್ಷೆಗೆ ಒತ್ತು ನೀಡುವ ದೃಷ್ಟಿಯಿಂದ ಆರಂಭಿಸಿರುವ ‘ಮಕ್ಕಳ ಸಹಾಯವಾಣಿ(Child Helpline)-1098’ಗೆ ಜಿಲ್ಲೆಯ ಮೂಲೆಮೂಲೆಗಳಿಂದ ಕರೆಗಳು ಬಂದಿವೆ. ಕಳೆದ ಒಂದೂವರೆ ವರ್ಷದಲ್ಲಿ 600ಕ್ಕೂ ಅಧಿಕ ದೂರುಗಳು ಬಂದಿವೆ. ಶಾಲೆ ಬಿಟ್ಟ ಮಕ್ಕಳು(School Dropouts), ಬಾಲ್ಯವಿವಾಹಕ್ಕೆ ಸಂಬಂಧಿಸಿದ ದೂರುಗಳೇ ಅಧಿಕ ಇರುವುದು ಕಳವಳದ ಸಂಗತಿ.
ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ(Child Marriage) ಸೇರಿ 18 ವರ್ಷದೊಳಗಿನ ಮಕ್ಕಳ ರಕ್ಷಣೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜತೆಗೆ ‘1098’ ಸಹಾಯವಾಣಿ ದಿನ 24 ತಾಸು ನೇರವಾಗಿ ಕಾರ್ಯನಿರ್ವಹಿಸುತ್ತಿದೆ. 2025-26ರಲ್ಲಿ 500ಕ್ಕೂ ಅಧಿಕ ಮತ್ತು ಈ ವರ್ಷದಲ್ಲಿ ಏಪ್ರಿಲ್‌ನಿಂದ ಜೂನ್‌ವರೆಗೆ 100ಕ್ಕೂ ಅಧಿಕ ದೂರುಗಳು ಬಂದಿವೆ. ಈ ಸಂಬಂಧ ಹಲವು ಪ್ರಕರಣ ದಾಖಲಾಗಿವೆ.
ಶಾಲಾ ಕಾಲೇಜು ಆವರಣ(School and college premises)ಗಳಲ್ಲಿ ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಅಸಭ್ಯ ವರ್ತನೆ, ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುವುದು, ಶಿಕ್ಷಕರು ಅಥವಾ ಸಹಪಾಠಿಗಳಿಂದ ದೌರ್ಜನ್ಯ, 15 ದಿನಕ್ಕಿಂತ ಹೆಚ್ಚು ಸಮಯ ಶಾಲೆಯಿಂದ ಹೊರಗುಳಿದ ಮಕ್ಕಳು, ಬಾಲ್ಯವಿವಾಹ, ಬಾಲ ಗರ್ಭಿಣಿಯರು, ಭಿಕ್ಷಾಟನೆ, ನಾಪತ್ತೆ, ಮಾದಕ ವ್ಯಸನದ ಮೂಲಕ ತಪ್ಪು ದಾರಿ ಹಿಡಿಯುತ್ತಿರುವ ಮಕ್ಕಳ ಬಗ್ಗೆಯೂ ದೂರುಗಳು ನಿರಂತರವಾಗಿರುವುದು ಆತಂಕಕಾರಿ.
ಶಾಲೆ ಬಿಟ್ಟ ಮಕ್ಕಳ ಬಗ್ಗೆಯೇ ಜಿಲ್ಲೆಯಲ್ಲಿ ಅತಿ ಹೆಚ್ಚು ದೂರುಗಳು ದಾಖಲಾಗುತ್ತಿವೆ. ಒಂದು ವರ್ಷ ಮೂರು ತಿಂಗಳಲ್ಲಿ ದೂರುಗಳ ಸಂಖ್ಯೆ 100ರ ಗಡಿ ದಾಟಿದೆ. ಪಾಲಕರೊಂದಿಗೆ ಗುಳೆ ಹೋಗುವುದು ಅಥವಾ ನಾನಾ ಕಾರಣಗಳಿಂದ ಶಾಲೆಗೆ ಗೈರಾಗುತ್ತಿದ್ದಾರೆ. ಮಕ್ಕಳು ಶಾಲೆಗಳಿಗೆ ಗೈರಾಗುತ್ತಿರುವ ಬಗ್ಗೆ ಕಳೆದ ವರ್ಷ 102 ಮತ್ತು ಪ್ರಸಕ್ತ ಏಪ್ರಿಲ್‌ನಿಂದ ಜೂನ್‌ವರೆಗೆ 10 ಕರೆಗಳು ಸ್ವೀಕೃತವಾಗಿವೆ. ಬಹುತೇಕ ಮಕ್ಕಳನ್ನು ಪೊಲೀಸ್ ಇಲಾಖೆ ನೆರವಿನೊಂದಿಗೆ ಪುನಃ ಶಾಲಾ ಕಾಲೇಜಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಇದೇ ವೇಳೆ ಶಾಲೆಗಳಲ್ಲಿ ಇತರೆ ಸಮಸ್ಯೆಗಳ ಬಗ್ಗೆಯೂ 82 ದೂರುಗಳು ದಾಖಲಾಗಿವೆ.
ತಾಲೂಕಿಗೊಬ್ಬರು ನಿಯೋಜನೆ: ಮಕ್ಕಳ ಸಹಾಯವಾಣಿಗೆ ದಾಖಲಾಗುತ್ತಿರುವ ದೂರುಗಳನ್ನು ಪರಿಶೀಲಿಸಲು ಜಿಲ್ಲೆಯಲ್ಲಿ 8 ಸಿಬ್ಬಂದಿಯನ್ನು ಮಕ್ಕಳ ರಕ್ಷಣಾ ಘಟಕ ನಿಯೋಜಿಸಿದೆ. ತಾಲೂಕಿಗೆ ಒಬ್ಬರಂತೆ ಕೆಲಸ ಮಾಡುತ್ತಿದ್ದು, ಆಯಾ ತಾಲೂಕಿಗೆ ಸಂಬಂಧಿಸಿದ ದೂರುಗಳು ಬಂದಾಗ ಖುದ್ದು ಭೇಟಿ ನೀಡಿ ಪಿಡಿಒ ಹಾಗೂ ಪೊಲೀಸರಿಗೆ ಮಾಹಿತಿ ನೀಡುವರು. ಆ ಬಳಿಕ ದೂರಿನ ಪರಾಮರ್ಶೆ ನಡೆಸಿ ಜಿಲ್ಲಾ ಮಟ್ಟದಲ್ಲಿರುವ ಮಕ್ಕಳ ಕಲ್ಯಾಣ ಸಮಿತಿ ಮುಂದೆ ವಿಷಯ ಮಂಡನೆ ಮಾಡಿಸುವರು. ಆ ಬಳಿಕ ಸಮಿತಿ ನಿರ್ಧಾರದಂತೆ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗುತ್ತಿವೆ.

ದೂರುಗಳ ನಿರ್ವಹಣೆ ಹೇಗೆ?

ಮಕ್ಕಳ ಸಹಾಯವಾಣಿ (1098) ಉಚಿತ ದೂರವಾಣಿ ಸೇವೆ. ಮಕ್ಕಳ ಸಮಸ್ಯೆಗಳಿಗೆ ಸಂಬಂಧಿಸಿ ಕರೆ ಮಾಡಿದಾಗ ಬೆಂಗಳೂರಿನ ಚೈಲ್ಡ್‌ಲೈನ್ ಕಾಲ್ ಸೆಂಟರ್‌ನಲ್ಲಿ ಕರೆಗಳು ಸ್ವೀಕೃತವಾಗುತ್ತವೆ. ಮಗುವಿನ ಹೆಸರು ಮತ್ತು ವಿಳಾಸ ಪಡೆದು ಬಳಿಕ ಸಂಬಂಧಿಸಿದ ಜಿಲ್ಲೆಗಳ ಚೈಲ್ಡ್‌ಲೈನ್ ಸಂಸ್ಥೆಗಳಿಗೆ ಮಾಹಿತಿ ರವಾನೆ ಆಗುತ್ತದೆ. ಅಲ್ಲಿನ ಸಂಯೋಜಕರು, ಆಪ್ತ ಸಮಾಲೋಚಕರು, ಕ್ಷೇತ್ರ ಕಾರ್ಯಕರ್ತರು, ಸ್ವಯಂಸೇವಕರನ್ನು ಒಳಗೊಂಡ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ದೂರುದಾರರಿಂದ ಸಮಸ್ಯೆ ಆಲಿಸಿ ಸಂಬಂಧಿಸಿದ ಇಲಾಖೆಯೊಂದಿಗೆ ಸಂಪರ್ಕ ಸಾಧಿಸಿ ಆ ಮಗುವಿನ ರಕ್ಷಣೆ ಮತ್ತು ಪೋಷಣೆಗೆ ಒತ್ತು ನೀಡಲಿದೆ.
ಇಬ್ಬರ ಜಗಳದಲ್ಲಿ ಕೂಸು ಬಡವಾಯ್ತು!: ಗಂಡ-ಹೆಂಡತಿ ಜಗಳಲ್ಲಿ ಮಕ್ಕಳು ನಾನಾ ಸಮಸ್ಯೆಗಳನ್ನು ಎದುರಿಸುತ್ತಿವೆ. ಕೌಟುಂಬಿಕ ಸಮಸ್ಯೆ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಹಾಗಾಗಿ ಜಿಲ್ಲೆಯಲ್ಲಿ ಒಂದು ವರ್ಷ ಮೂರು ತಿಂಗಳಲ್ಲೇ ಸಹಾಯವಾಣಿಗೆ ಕೌಟುಂಬಿಕ ಸಮಸ್ಯೆ ಬಗ್ಗೆ 46 ದೂರುಗಳು ಬಂದಿವೆ. ಉಳಿದಂತೆ 54 ದೈಹಿಕ ಹಲ್ಲೆ, 33 ಲೈಂಗಿಕ ದೌರ್ಜನ್ಯ, 23 ಬಾಲ ಕಾರ್ಮಿಕರು, 36 ಆಪ್ತ ಸಮಾಲೋಚನೆ, 85 ಬಾಲ್ಯ ವಿವಾಹ, 26 ನಾಪತ್ತೆ, 16 ಭಿಕ್ಷಾಟನೆ, 16 ಮಾದಕ ವ್ಯಸನ, 7 ಓಡಿಹೋದ ಮಕ್ಕಳು ಹಾಗೂ 78 ಇತರೆ ದೂರುಗಳು ಸ್ವೀಕೃತವಾಗಿವೆ.
"

ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ (1098)ಗೆ ಸಾಕಷ್ಟು ದೂರುಗಳು ಬರುತ್ತಿವೆ. ನಿರಂತರವಾಗಿ ಜಾಗೃತಿ ಮೂಡಿಸುತ್ತಿರುವ ಪರಿಣಾಮ ಪ್ರತಿನಿತ್ಯ ದೂರುಗಳು ಸ್ವೀಕೃತವಾಗುತ್ತಿವೆ. ದೂರುಗಳಿಗೆ ತ್ವರಿತ ಸ್ಪಂದನೆಯೂ ಸಿಗುತ್ತಿದೆ. ಶಾಲೆ ಬಿಟ್ಟ, ಬಾಲ್ಯ ವಿವಾಹ, ಭಿಕ್ಷಾಟನೆ ಬಗ್ಗೆ ದೂರುಗಳು ಹೆಚ್ಚಿರುತ್ತವೆ. ಮಕ್ಕಳ ಕಲ್ಯಾಣ ಸಮಿತಿ ನಿರ್ಣಯದಂತೆ ಅವಶ್ಯವಿದ್ದರೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲಾಗುತ್ತದೆ.

— ಆರ್.ಮಂಜುನಾಥ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net