ಜೀವನ ಪದ್ಧತಿಯಲ್ಲಿ ಬದಲಾವಣೆ ಅವಶ್ಯ

ರಿಪ್ಪನ್‌ಪೇಟೆ ಮೇರಿ ಮಾತಾ ಶಿಕ್ಷಣ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಶ್ರೀ ವಿನಯ್ ಗುರೂಜಿ, ಶ್ರೀ ರೇಣುಕಾನಂದ ಸ್ವಾಮೀಜಿ, ಆರ್.ಎಂ.ಮಂಜುನಾಥ ಗೌಡ, ವಿದ್ಯಾಧರ, ಲೇಖನಾ ಇತರರಿದ್ದರು.
ರಿಪ್ಪನ್‌ಪೇಟೆ ಮೇರಿ ಮಾತಾ ಶಿಕ್ಷಣ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಶ್ರೀ ವಿನಯ್ ಗುರೂಜಿ, ಶ್ರೀ ರೇಣುಕಾನಂದ ಸ್ವಾಮೀಜಿ, ಆರ್.ಎಂ.ಮಂಜುನಾಥ ಗೌಡ, ವಿದ್ಯಾಧರ, ಲೇಖನಾ ಇತರರಿದ್ದರು.
Published on
ರಿಪ್ಪನ್‌ಪೇಟೆ: ಪ್ರತಿಯೊಬ್ಬರೂ ಆರೋಗ್ಯ ರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯ ನೀಡಬೇಕು. ಆರೋಗ್ಯವೇ ಸಂಪತ್ತು ಎಂದು ಗೌರಿಗದ್ದೆ ಆಶ್ರಮದ ಶ್ರೀ ವಿನಯ್ ಗುರೂಜಿ ಹೇಳಿದರು.
ಪಟ್ಟಣದ ಮೇರಿ ಮಾತಾ ಶಿಕ್ಷಣ ಸಂಸ್ಥೆ ಆವರಣದಲ್ಲಿ ಓಂ ಶ್ರೀ ಮಾತೃಶ್ರೀ ಸೇವಾ ಸಂಸ್ಥೆ, ಉಡುಪಿಯ ಆದರ್ಶ ಆಸ್ಪತ್ರೆ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಪೂರ್ವಜರು ಸೇವಿಸುತ್ತಿದ್ದ ಆಹಾರದಲ್ಲಿ ಸತ್ವ ಇರುತ್ತಿತ್ತು. ದೀರ್ಘ ಕಾಲದವರೆಗೆ ಆರೋಗ್ಯವಾಗಿ ಬದುಕುತ್ತಿದ್ದರು ಎಂದು ತಿಳಿಸಿದರು.
ಕಾಲ ಬದಲಾದಂತೆ ಆಹಾರದಲ್ಲಿ ಕಲಬೆರಕೆ ಹೆಚ್ಚುತ್ತಿದ್ದು, ಜನರಲ್ಲಿ ಆರೋಗ್ಯ ಸಮಸ್ಯೆ ಕಾಣಿಸುತ್ತಿದೆ. ಪರಿಣಾಮ ಯುವಜನತೆ ಅನಾರೋಗ್ಯಕ್ಕೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಿರುವುದು ದುರಂತ. ಪರಿಸರದ ಮೇಲಾಗುತ್ತಿರುವ ಮನುಷ್ಯರ ವಿಕೃತಿಯಿಂದ ವಾತಾವರಣ ಕಲುಷಿತಗೊಂಡಿದೆ. ಆದ್ದರಿಂದ ಜೀವನ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.
ನಿಟ್ಟೂರು ನಾರಾಯಣ ಗುರು ಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿ ಮಾತನಾಡಿ, ಬಡವರಿಗೆ ಆರೋಗ್ಯ ಚಿಕಿತ್ಸೆ ದುಬಾರಿಯಾಗಿದೆ. ಹಣ ಇಲ್ಲದಿರುವುದರಿಂದ ನೋವು ಅನುಭವಿಸುವುದನ್ನು ಬಿಟ್ಟು ಬೇರೆ ದಾರಿಯೇ ಇರುವುದಿಲ್ಲ. ಆದ್ದರಿಂದ ಸಂಘ ಸಂಸ್ಥೆಗಳು ಸಾರ್ವಜನಿಕರಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿ ಬಡವರಿಗೆ ನೆರವಾಗಬೇಕು ಎಂದರು.
600 ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಶಾಸಕ ಗೋಪಾಲಕೃಷ್ಣ ಬೇಳೂರು, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಶಿಮುಲ್ ಅಧ್ಯಕ್ಷ ವಿದ್ಯಾಧರ, ಮಾಜಿ ಶಾಸಕ ಹರತಾಳು ಹಾಲಪ್ಪ, ಧರ್ಮಗುರು ಬಿನೋಯ್, ಮಾತೃಶ್ರೀ ಸಂಸ್ಥೆ ಅಧ್ಯಕ್ಷೆ ಲೇಖನಾ, ಆಸ್ಪತ್ರೆ ಮುಖ್ಯಸ್ಥ ಡಾ. ಚಂದ್ರಶೇಖರ, ಮಂಜುನಾಥ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net