ಶಿವಮೊಗ್ಗದಲ್ಲಿ ಶೇ.85.15 ಡಿಜಿಟಲೀಕರಣ ಪೂರ್ಣ I digitalize over

ಪ್ರಭುಲಿಂಗ ಕವಳಿಕಟ್ಟಿ ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ಮಾಧ್ಯಮಗಳಿಗೆ ವಿವರಣೆ ನೀಡಿದರು. ಮಂಜುಳಾ ಹೆಗಡಾಳ, ವಿ.ಅಭಿಷೇಕ್ ಇದ್ದರು.
ಪ್ರಭುಲಿಂಗ ಕವಳಿಕಟ್ಟಿ ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ಮಾಧ್ಯಮಗಳಿಗೆ ವಿವರಣೆ ನೀಡಿದರು. ಮಂಜುಳಾ ಹೆಗಡಾಳ, ವಿ.ಅಭಿಷೇಕ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್‌ಐಆರ್ ಮೊದಲ ಹಂತ ಆ.8ಕ್ಕೆ ಮುಕ್ತಾಯ
  • ತಾಳೆಯಾಗದ 1.56 ಲಕ್ಷ ಮತದಾರರ ಮಾಹಿತಿ
  • ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಎರಡು ಬಾರಿ ಸಭೆ
  • ಡಿಸಿ ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ
ಶಿವಮೊಗ್ಗ: ಎಸ್‌ಐಆರ್ (sir) (ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆಯ ಮೊದಲ ಹಂತ ಆ.8ಕ್ಕೆ ಮುಕ್ತಾಯವಾಗಲಿದೆ. ಇದುವರೆಗೆ ಶೇ.85.15 ಇ-ಫಾರ್ಮ್ (ಇನ್ಯುಮರೇಷನ್ ಫಾರ್ಮ್) ಡಿಜಿಟಲೀಕರಣ (digitalize) ಪೂರ್ಣವಾಗಿದೆ. ವಿಶೇಷವೆಂದರೆ 1.56 ಲಕ್ಷ ಮತದಾರರ ಮಾಹಿತಿ ಪ್ರಸ್ತುತ ತಾಳೆಯಾಗುತ್ತಿಲ್ಲ. ಮೃತಪಟ್ಟವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ವಿಳಾಸದಲ್ಲಿ ಇಲ್ಲದವರು ಮಾಹಿತಿ (information) ತಾಳೆಯಾಗದವರ ಪಟ್ಟಿಯಲ್ಲಿದ್ದಾರೆ.
ಹೀಗೆ ಮಾಹಿತಿ ತಾಳೆಯಾಗದವರು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು 47,494 ಇದ್ದರೆ ಅತಿ ಕಡಿಮೆ ತೀರ್ಥಹಳ್ಳಿ ಕ್ಷೇತ್ರದಲ್ಲಿ 13,138 ಮಂದಿ ಇದ್ದಾರೆ. ಬಿಎಲ್‌ಒಗಳು ಮೂರು ಬಾರಿ ಮನೆಗಳಿಗೆ ಭೇಟಿ ನೀಡಿದಾಗಲೂ ಇವರೆಲ್ಲರ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಇದುವರೆಗೂ ಇವರೆಲ್ಲರಿಗೂ ಇ-ಫಾರ್ಮ್ ವಿತರಣೆ ಮಾಡುವುದು ಸಾಧ್ಯವಾಗಿಲ್ಲ.
ಇ-ಫಾರ್ಮ್ ಮತದಾರರಿಗೆ ನೀಡಿ ಅವರಿಂದ ಹಿಂಪಡೆಯುವ ಪ್ರಕ್ರಿಯೆ ಆ.8ಕ್ಕೆ ಕೊನೆಗೊಳ್ಳಲಿದೆ. ಅಲ್ಲಿಯವರೆಗೂ ಮಾಹಿತಿ ತಾಳೆ ಆಗದವರ ಹುಡುಕಾಟವನ್ನು ನಮ್ಮ ಬಿಎಲ್‌ಒಗಳ ನಡೆಸಲಿದ್ದಾರೆ. ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು. ಅನರ್ಹರು ಪಟ್ಟಿಯಲ್ಲಿ ಸೇರಬಾರದು ಎಂಬುದಷ್ಟೇ ನಮ್ಮ ಮುಖ್ಯ ಗುರಿ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆ ಪ್ರಗತಿ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಎರಡು ಬಾರಿ ಸಭೆ ನಡೆಸಲಾಗಿದೆ. ಅವರಿಂದಲೂ ಸಹಕಾರ ಕೋರಿದ್ದೇವೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಚುನಾವಣಾ ತಹಸೀಲ್ದಾರ್ ಮಂಜುಳಾ ಹೆಗಡಾಳ ಸುದ್ದಿಗೋಷ್ಠಿಯಲ್ಲಿದ್ದರು.

ಬಿಎಲ್‌ಒಗಳತ್ತ ಒಲವು

ಎಸ್‌ಐಆರ್ ಪ್ರಕ್ರಿಯೆಗೆ ಪೂರಕವಾಗಿ ರಾಜಕೀಯ ಪಕ್ಷಗಳು ತಮ್ಮ ಪ್ರತಿನಿಧಿಯೊಬ್ಬರನ್ನು ಎಲ್ಲ ಬೂತ್‌ಗಳಲ್ಲೂ ಬಿಎಲ್‌ಎ-2 ಆಗಿ ನೇಮಕ ಮಾಡಿದ್ದರೂ ಮತದಾರರು ಬಿಎಲ್‌ಒಗಳ ಮೇಲೆ ಹೆಚ್ಚು ವಿಶ್ವಾಸ ಇರಿಸಿದ್ದಾರೆ. ಅವರಿಂದ ನೇರವಾಗಿ ಇ-ಫಾರ್ಮ್ ಪಡೆದು, ಭರ್ತಿ ಮಾಡಿ ಹಿಂದಿರುಗಿಸುತ್ತಿದ್ದಾರೆ. ಬಿಎಲ್‌ಒ ಬಳಿ ನೀಡಿದರೆ ಫಾರ್ಮ್ ಕಳೆದುಹೋಗುವ ಅಪಾಯ ಇರುವುದಿಲ್ಲ ಎಂಬ ವಿಶ್ವಾಸಾರ್ಹತೆ ಜನರಲ್ಲಿ ಮೂಡಿದೆ ಎಂದು ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ಆನ್‌ಲೈನ್ ಅರ್ಜಿ ನೇರ ಡಿಜಿಟಲೀಕರಣ

ಈಗಾಗಲೇ ಆನ್‌ಲೈನ್‌ನಲ್ಲಿ ಇ-ಫಾರ್ಮ್ ಭರ್ತಿ ಮಾಡಿರುವವರು ಮತ್ತೆ ಆಫ್‌ಲೈನ್‌ನಲ್ಲಿ ಇ-ಫಾರ್ಮ್ ತುಂಬಬೇಕಾದ ಅವಶ್ಯಕತೆಯಿಲ್ಲ. ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿರುವುದು ನೇರವಾಗಿ ಡಿಜಿಟಲೀಕರಣ ಆಗಿರುತ್ತದೆ. ಅದೇ ರೀತಿ ಎರಡು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರು ತಾವು ಪ್ರಸ್ತುತ ಎಲ್ಲಿ ಮತದಾನ ಮಾಡಲು ಸೂಕ್ತವಾಗಿದೆಯೋ ಆ ಬೂತ್‌ನಲ್ಲಿ ಮಾತ್ರ ಇ-ಫಾರ್ಮ್ ಭರ್ತಿ ಮಾಡಿ ನೀಡಬೇಕು. ಆಗ ಇನ್ನೊಂದು ಬೂತ್‌ನಲ್ಲಿರುವ ಪಟ್ಟಿಯಲ್ಲಿ ಅವರ ಹೆಸರನ್ನು ಸಹಜವಾಗಿ ಕೈ ಬಿಡಲಾಗುತ್ತದೆ ಎಂದು ಪ್ರಭುಲಿಂಗ ಕವಳಿಕಟ್ಟಿ ಸ್ಪಷ್ಟಪಡಿಸಿದರು.
"

ಕರಡು ಮತದಾರರ ಪಟ್ಟಿಯನ್ನು ಆ.17ರಂದು ಪ್ರಕಟಿಸಲಾಗುವುದು. ಬಳಿಕ ಸೆ.16ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ. ಅ.15ರೊಳಗೆ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗುತ್ತದೆ. ಮತದಾನದ ಅರ್ಹತೆಯನ್ನು ಸಾಬೀತುಪಡಿಸಲು ಎಲ್ಲ ರೀತಿಯಲ್ಲಿ ಅವಕಾಶ ನೀಡಲಾಗುತ್ತದೆ. ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ಯಾರೂ ಗೊಂದಲಪಡುವ ಅಗತ್ಯವಿಲ್ಲ.

— ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಚುನಾವಣಾಧಿಕಾರಿ.

ಆಫ್‌ಲೈನ್‌ನತ್ತ ಚಿತ್ತ

ಎಲ್ಲ ಕಡೆಯೂ ಡಿಜಿಟಲ್ ಇಂಡಿಯಾ ಘೋಷಣೆ ಮೊಳಗುತ್ತಿರುವ ಸಂದರ್ಭದಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಆನ್‌ಲೈನ್ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಮಾಹಿತಿ ಅಪ್‌ಲೋಡ್ ಮಾಡಿರುವವರ ಸಂಖ್ಯೆ ಕೇವಲ 6,196. ಶಿವಮೊಗ್ಗದಲ್ಲಿ 3,045 ಹಾಗೂ ಭದ್ರಾವತಿಯಲ್ಲಿ 1,129 ಮತದಾರರನ್ನು ಬಿಟ್ಟರೆ ಉಳಿದೆಲ್ಲ ಕ್ಷೇತ್ರಗಳಲ್ಲಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದವರ ಸಂಖ್ಯೆ ಸಾವಿರಕ್ಕೂ ಕಡಿಮೆಯಿದೆ. ಆಫ್‌ಲೈನ್ ಮೂಲಕ ಇ-ಫಾರ್ಮ್ ನೀಡುವುದರಿಂದ ಮುಂದಿನ ದಿನಗಳಲ್ಲಿ ಏನೇ ವ್ಯತ್ಯಾಸವಾದರೂ ಬಿಎಲ್‌ಒ ಬಳಿ ಕೇಳಬಹುದು. ಆನ್‌ಲೈನ್‌ನಲ್ಲಿ ಮಾಹಿತಿ ಸಲ್ಲಿಸಿ ವ್ಯತ್ಯಾಸವಾದರೆ ಯಾರನ್ನೂ ಕೇಳುವಂತಿಲ್ಲ ಎಂಬ ಕಾರಣಕ್ಕೆ ಜನರು ಆನ್‌ಲೈನ್‌ನತ್ತ ಹೆಚ್ಚಿನ ಒಲವು ತೋರಿದಂತಿಲ್ಲ.

ಇ-ಫಾರ್ಮ್‌ಗೂ ಮನವೊಲಿಕೆ

ಮತದಾನ ಬಹಿಷ್ಕಾರದ ಕೂಗು ಕೇಳಿಬರುವುದು ಸಾಮಾನ್ಯ. ಆದರೆ ಇದುವರೆಗೆ ಜಿಲ್ಲೆಯಲ್ಲಿ 558 ಮಂದಿ ಇ-ಫಾರ್ಮ್ ಭರ್ತಿ ಮಾಡಿಕೊಡಲು ನಿರಾಸಕ್ತಿ ತೋರಿದ್ದಾರೆ. ಕೆಲವರು ನನಗೆ ಎಸ್‌ಐಆರ್‌ನಲ್ಲಿ ನಂಬಿಕೆ ಇಲ್ಲ ಎಂದರೆ ಮತ್ತೆ ಹಲವರು ಫಾರ್ಮ್ ಭರ್ತಿ ಮಾಡಿಕೊಡದಿದ್ದರೆ ಏನಾಗುತ್ತದೆ ಎಂದು ಹಠ ಹಿಡಿದಿದ್ದಾರೆ. ಇಂಥವರ ಮನವೊಲಿಕೆ ಬಿಎಲ್‌ಒಗಳಿಗೆ ಸವಾಲಾಗಿ ಪರಿಣಮಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net