ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿಯರಿಗೆ 46 ಸ್ವರ್ಣ ಪದಕ I gold medals

ಅತಿ ಹೆಚ್ಚು ಚಿನ್ನದ ಪದಕ ಪಡೆದ ಶಶಾಂಕ್, ಸಹನಾ ಗಣೇಶ್ ಶೇಟ್, ಎಸ್.ಸಜನಾ, ಆರ್.ಸೃಷ್ಟಿ, ರಕ್ಷಾ, ಅಭಿಷೇಕ, ಅನು, ಚೈತ್ರಾ ಪಿ.ಪಾಟೀಲ್, ಐಶ್ವರ್ಯಾ.
ಅತಿ ಹೆಚ್ಚು ಚಿನ್ನದ ಪದಕ ಪಡೆದ ಶಶಾಂಕ್, ಸಹನಾ ಗಣೇಶ್ ಶೇಟ್, ಎಸ್.ಸಜನಾ, ಆರ್.ಸೃಷ್ಟಿ, ರಕ್ಷಾ, ಅಭಿಷೇಕ, ಅನು, ಚೈತ್ರಾ ಪಿ.ಪಾಟೀಲ್, ಐಶ್ವರ್ಯಾ.
Published on

ಪ್ರಮುಖ ಮುಖ್ಯಾಂಶಗಳು

  • 14 ಹೆಣ್ಣು ಮಕ್ಕಳಿಗೆ 56 ಸ್ವರ್ಣ
  • ಅಭಿಲಾಷ್‌ಗೆ ಅತಿ ಹೆಚ್ಚು 10 ಪದಕ
ಶಿವಮೊಗ್ಗ: ಈ ಬಾರಿ ಕುವೆಂಪು (kuvempu) ವಿವಿ ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿಯರು ಅತಿ ಹೆಚ್ಚು ಚಿನ್ನ (gold) ದ ಪದಕ ಪಡೆದು ಗಮನಸೆಳೆದರು. ಎಚ್.ಎಂ.ಅಭಿಷೇಕ್ ಅತಿ ಹೆಚ್ಚು 10 ಚಿನ್ನದ ಪದಕ, ಎಲ್.ಅಭಿಲಾಷ್, ಐ.ಶಶಾಂಕ್ (shashank) ತಲಾ 4 ಹಾಗೂ ಮನೋಹರ ನಾಯ್ಕ ಮೂರು ಸ್ವರ್ಣ ಪದಕ ಪಡೆದಿದ್ದನ್ನು ಹೊರತುಪಡಿಸಿದರೆ ಉಳಿದ 56 ಸ್ವರ್ಣ ಪದಕಗಳನ್ನು 14 ವಿದ್ಯಾರ್ಥಿನಿಯರು ಹಂಚಿಕೊಂಡರು.
ಸ್ವರ್ಣ ವಿಜೇತರ ಪೈಕಿ ಕುಮಟಾ, ಕುಂದಾಪುರದ ಗಂಗೊಳ್ಳಿ, ತೀರ್ಥಹಳ್ಳಿ ರಂಜದಕಟ್ಟೆ, ಅಜ್ಜಂಪುರ, ಶೃಂಗೇರಿ ಮುಂತಾದ ಭಾಗಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿದ್ದಾರೆ. ಸಾಧಕರ ಮೊಗದಲ್ಲಿ ಸಂತೃಪ್ತ ಭಾವ, ಸಾಧಿಸಿದ ಸಂಭ್ರಮ ಎದ್ದು ಕಾಣುತ್ತಿತ್ತು. ಸ್ವತಃ ರಾಜ್ಯಪಾಲರು ಹಾಗೂ ಉನ್ನತ ಶಿಕ್ಷಣ ಸಚಿವರೇ ಘಟಿಕೋತ್ಸವದ ಕೊನೆಯವರೆಗೂ ಇದ್ದು, ಎಲ್ಲರಿಗೂ ಪದವಿ ಪ್ರದಾನ ಮಾಡಿದ್ದು ಸಾಧಕರ ಸಂತಸ ಇಮ್ಮಡಿಗೊಳಿಸಿತ್ತು.
ಘಟಿಕೋತ್ಸವದಲ್ಲಿ ಒಟ್ಟು 16,955 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದರು. 7,015 ಪುರುಷರು ಹಾಗೂ 9,940 ಮಹಿಳೆಯರು ಸೇರಿದ್ದಾರೆ. ಒಟ್ಟು 155 ಚಿನ್ನದ ಪದಕ ನೀಡಲಾಗಿದ್ದು, 68 ವಿದ್ಯಾರ್ಥಿನಿಯರು ಹಾಗೂ 11 ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು. 163 ಅಭ್ಯರ್ಥಿಗಳು ಪಿಎಚ್.ಡಿ ಪದವಿಗೆ ಅರ್ಹರಾಗಿದ್ದರು. 106 ಪುರುಷರು ಹಾಗೂ 57 ಮಹಿಳೆಯರಿದ್ದರು.
ವಿಜ್ಞಾನ ನಿಕಾಯದ 84 ಅಭ್ಯರ್ಥಿಗಳು, ಕಲಾ ನಿಕಾಯದ 63 ಅಭ್ಯರ್ಥಿಗಳು, ಶಿಕ್ಷಣ ನಿಕಾಯದ 9, ವಾಣಿಜ್ಯ ನಿಕಾಯದ 6, ಕಾನೂನು ನಿಕಾಯದ ಒಬ್ಬ ಅಭ್ಯರ್ಥಿ ಪದವಿ ಪಡೆದುಕೊಂಡರು.
ಪಿಯುಸಿಯಲ್ಲಿ ಮಿಸ್ ಆಗಿದ್ದು ಈಗ ಸಿಕ್ತು
ಈ ವಿದ್ಯಾರ್ಥಿಗೆ ದ್ವಿತೀಯ ಪಿಯುಸಿಯಲ್ಲಿ ಎರಡನೇ ರ‌್ಯಾಂಕ್ ಕೆಲವೇ ಅಂಕಗಳ ಅಂತರದಲ್ಲಿ ಕೈತಪ್ಪಿತ್ತು. ಆದರೆ ಈಗ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಸಿಕ್ಕಿದ್ದು ಬರೋಬ್ಬರಿ 10 ಚಿನ್ನದ ಪದಕ ಹಾಗೂ ಎರಡು ನಗದು ಬಹುಮಾನ. ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಹಿರೇಕಾನವಂಗಲದ ಎಚ್.ಎಂ.ಅಭಿಷೇಕ್ ಘಟಿಕೋತ್ಸವದ ಚಿನ್ನದ ಹುಡುಗನಾಗಿ ಗುರುತಿಸಿಕೊಂಡಿದ್ದಾರೆ. ತಂದೆ ಎಚ್.ಎಂ.ಮಂಜಪ್ಪ ಕೃಷಿ ಕಾರ್ಮಿಕ, ತಾಯಿ ಬಿ.ಎಲ್.ಲಲಿತಮ್ಮ ಆಶಾ ಕಾರ್ಯಕರ್ತೆ. ತೀರಾ ಅನುಕೂಲಕರವಲ್ಲದ ಕುಟುಂಬದ ಹಿನ್ನೆಲೆ ಈತನ ಸಾಧನೆಗೆ ಅಡ್ಡಿಯಾಗಲಿಲ್ಲ.
ಪ್ರಸ್ತುತ ಬಿ.ಇಡಿ ವ್ಯಾಸಂಗ ಮಾಡುತ್ತಿರುವ ಅಭಿಷೇಕ್ ಮುಂದಿನ ದಿನಗಳಲ್ಲಿ ಪ್ರಾಧ್ಯಾಪಕನಾಗುವ ಆಸೆಯಿದೆ. ನ.1ರಂದು ಜನಿಸಿದ ಅಭಿಷೇಕ್‌ಗೆ ಕನ್ನಡ ಭಾಷೆ ಹಾಗೂ ಸಾಹಿತ್ಯದ ಮೇಲೆ ಇನ್ನಿಲ್ಲದ ಒಲವು. ಟಾಪ್ 5ರೊಳಗೆ ಬರುವ ನಿರೀಕ್ಷೆ ಇತ್ತು. ಅದನ್ನು ಮೀರಿದ ಸಂಭ್ರಮ ದೊರೆತಿದೆ. ಪ್ರಾಧ್ಯಾಪಕರು ನೀಡಿದ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹ, ಪಾಲಕರ ಬೆಂಬಲವೇ ನನ್ನ ಇಂದಿನ ಸಾಧನೆಗೆ ಕಾರಣ ಎಂದು ಅಭಿಷೇಕ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net