ಬಸ್ ಪಲ್ಟಿಯಾಗಿ 27 ಜನರಿಗೆ ಗಾಯ | bus Accident

ಶಿಕಾರಿಪುರ ಹೊರವಲಯದ ಕುಮದ್ವತಿ ಕಾಲೇಜು ಬಳಿ ಪಲ್ಟಿಯಾದ ಬಸ್.
ಶಿಕಾರಿಪುರ ಹೊರವಲಯದ ಕುಮದ್ವತಿ ಕಾಲೇಜು ಬಳಿ ಪಲ್ಟಿಯಾದ ಬಸ್.
Published on
ಶಿಕಾರಿಪುರ: ಪಟ್ಟಣ ಹೊರವಲಯದ ಕುಮದ್ವತಿ ಕಾಲೇಜು ಬಳಿ ಮುಂದೆ ಸಾಗುತ್ತಿದ್ದ ಬೈಕ್ ಸವಾರನ ಪ್ರಾಣ ಉಳಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಪಲ್ಟಿಯಾಗಿ 27 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಖಾಸಗಿ ಬಸ್‌ಶಿವಮೊಗ್ಗದಿಂದ ಶಿಕಾರಿಪುರಕ್ಕೆ ತೆರಳುತ್ತಿತ್ತು. ಬಸ್‌ನ ಮುಂದೆ ಸಾಗುತ್ತಿದ್ದ ಬೈಕ್ ಸವಾರ ರಸ್ತೆಯಲ್ಲಿದ್ದ ಹಂಪ್ ತಪ್ಪಿಸಲು ಹಠಾತ್ತಾಗಿ ಬೈಕನ್ನು ಬಲಕ್ಕೆ ತಿರುಗಿಸಿದ್ದಾನೆ. ಈ ವೇಳೆ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಕೂಡಲೇ ಬಸ್ಸನ್ನು ಎಡಕ್ಕೆ ತಿರುಗಿಸಿದ್ದಾನೆ. ಆದರೆ ಅದೇ ಕ್ಷಣದಲ್ಲಿ ಬೈಕ್ ಸವಾರ ಪುನಃ ಎಡಕ್ಕೆ ಬಂದ ಕಾರಣ, ಆತನ ಪ್ರಾಣ ಉಳಿಸಲು ಚಾಲಕ ಅನಿವಾರ್ಯವಾಗಿ ಬಸ್ಸನ್ನು ಮತ್ತೆ ಬಲಕ್ಕೆ ಚಲಾಯಿಸಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ದೃಶ್ಯ ಕುಮದ್ವತಿ ಕಾಲೇಜಿನ ಹತ್ತಿರ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೂಡಲೇ ಸ್ಥಳೀಯರು ಬಸ್ಸಿನಿಂದ ಪ್ರಯಾಣಿಕರನ್ನು ಹೊರತೆಗೆದು ರಕ್ಷಿಸಿದ್ದಾರೆ. ಗಾಯಗೊಂಡವರನ್ನು ತಕ್ಷಣ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ಗಾಯಗೊಂಡ 12 ಜನರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಗಾಯಾಳುಗಳ ಸಂಬಂಧಿಕರು ಆತಂಕದಲ್ಲೇ ಆಸ್ಪತ್ರೆಗೆ ಆಗಮಿಸಿ ವೈದ್ಯರ ಬಳಿ ವಿಚಾರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net