ಮತದಾರರ ಪಟ್ಟಿಯಿಂದ 1.50 ಲಕ್ಷ ಮಂದಿ ಹೊರಕ್ಕೆ? I voters out from list

ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಿರತರಾಗಿರುವ ಸಿಬ್ಬಂದಿ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಿರತರಾಗಿರುವ ಸಿಬ್ಬಂದಿ.
Published on

ಪ್ರಮುಖ ಮುಖ್ಯಾಂಶಗಳು

  • ಶಿವಮೊಗ್ಗದಲ್ಲಿ ಮೃತಪಟ್ಟವರ ಸಂಖ್ಯೆಯೇ 46,552
  • ತಾಳೆಯಾಗದ ಮಾಹಿತಿ ಮೇಲೆ ಬಿಎಲ್‌ಒ ಕಣ್ಣು
ಶಿವಮೊಗ್ಗ:ಎಸ್‌ಐಆರ್ (ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ) (sir) ಪ್ರಕ್ರಿಯೆಯ ಮೊದಲ ಹಂತ ಮುಕ್ತಾಯಕ್ಕೆ ಇನ್ನೊಂದು ವಾರವಿದೆ. ಜಿಲ್ಲೆಯ ಒಟ್ಟು 15,19,439 ಮತದಾರರ ಪೈಕಿ 1.50 ಲಕ್ಷಕ್ಕೂ ಅಧಿಕ ಮತದಾರರು (voters) ಪಟ್ಟಿಯಿಂದ (list) ಹೊರಗುಳಿಯುವ ಸಾಧ್ಯತೆ ಇದೆ.
ಮೃತಪಟ್ಟವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ವಿಳಾಸದಲ್ಲಿ ಇಲ್ಲದವರೂ ಪ್ರಸ್ತುತ ಮತದಾರರ ಪಟ್ಟಿಯಲ್ಲಿದ್ದಾರೆ. ಇವರೆಲ್ಲರ ಒಟ್ಟು ಸಂಖ್ಯೆ 1.90 ಲಕ್ಷ. ಈ ಪೈಕಿ ಮೃತಪಟ್ಟವರ ಸಂಖ್ಯೆಯೇ 46,552 ಎಂಬುದು ವಿಶೇಷ.
ಬಿಎಲ್‌ಒಗಳು ಇ-ಫಾರ್ಮ್ ವಿತರಿಸಲು ಮೂರು ಬಾರಿ ಮನೆಗಳಿಗೆ ಭೇಟಿ ನೀಡಿದಾಗಲೂ 1.90 ಲಕ್ಷ ಜನರ ಪೈಕಿ ಮೃತಪಟ್ಟ 46,552 ಮತದಾರರನ್ನು ಹೊರತುಪಡಿಸಿ ಉಳಿದವರ ಮಾಹಿತಿ ಲಭ್ಯವಾಗಿಲ್ಲ. ಕೊನೆಯ ಒಂದು ದಿನದಲ್ಲಿ ಇವರೆಲ್ಲರ ಮಾಹಿತಿ ಸಿಗುವುದು ಅಸಾಧ್ಯ. ಹೀಗಾಗಿ ಅಂತಿಮವಾಗಿ ಸುಮಾರು 1.50 ಲಕ್ಷ ಮಂದಿ ಮತದಾರರ ಪಟ್ಟಿಯಿಂದ ಹೊರಗುಳಿಯಲಿದ್ದಾರೆ.
ಬಾಡಿಗೆ ಮನೆಯಲ್ಲಿದ್ದವರು ಬೇರೆ ಬಡಾವಣೆ ಅಥವಾ ಊರುಗಳಿಗೆ ಸ್ಥಳಾಂತರಗೊಂಡಿದ್ದಾರೆ. ಅವರ ಬಗ್ಗೆ ಅಕ್ಕಪಕ್ಕದವರೆಗೂ ಮಾಹಿತಿಯಿಲ್ಲ. ಆದರೆ ಅವರು ಈ ಹಿಂದೆ ಇದ್ದ ಸ್ಥಳದಲ್ಲಿನ ಮತದಾರರ ಚೀಟಿಯನ್ನು ರದ್ದುಪಡಿಸಿಕೊಂಡಿಲ್ಲ. ಹೀಗಾಗಿ ಅಂಥವರ ಪತ್ತೆಗೆ ಬಿಎಲ್‌ಒಗಳು ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾಗಿವೆ.
10 ದಿನಗಳ ಹಿಂದೆ ಮಾಹಿತಿ ತಾಳೆಯಾಗದವರ ಸಂಖ್ಯೆ ಸುಮಾರು ಒಂದು ಲಕ್ಷವಿತ್ತು. ಅದನ್ನು ಕಡಿಮೆ ಮಾಡಬೇಕೆಂಬ ಚುನಾವಣಾ ಶಾಖೆಯ ಪ್ರಯತ್ನಗಳು ಫಲಿಸದೆ ಆ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದೆ. ಈಗಾಗಲೇ ಇ-ಫಾರ್ಮ್ ಪಡೆದು ಅದನ್ನು ಬಿಎಲ್‌ಒಗೆ ಮರಳಿಸದೆ ಕಾರ್ಯನಿಮಿತ್ತ ಬೇರೆ ಊರುಗಳಿಗೆ ತೆರಳಿದವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಬಿಎಲ್‌ಒಗಳು ಇವರೆಲ್ಲರನ್ನೂ ಸಂಪರ್ಕಿಸಿ ಇ-ಫಾರ್ಮ್ ಹಿಂಪಡೆಯುವ ಪ್ರಯತ್ನದಲ್ಲಿದ್ದಾರೆ.

ಪಕ್ಷಗಳಿಂದ ಸಿಗದ ಬೆಂಬಲ

ಎಸ್‌ಐಆರ್‌ನ ಮೊದಲ ಹಂತದ ಪ್ರಕ್ರಿಯೆ ಸುಮಾರು 40 ದಿನ ನಡೆದಿದೆ. ಆರಂಭದಲ್ಲಿ ರಾಜಕೀಯ ಪಕ್ಷಗಳು ಈ ಪ್ರಕ್ರಿಯೆಯಲ್ಲಿ ವೀರಾವೇಶದಿಂದ ಪಾಲ್ಗೊಂಡಿದ್ದವು. ದಿನಕಳೆದಂತೆ ಮುಖಂಡರೂ ಇದರಲ್ಲಿ ಆಸಕ್ತಿ ಕಳೆದುಕೊಂಡರು. ಬಿಜೆಪಿ ಎರಡು ದಿನ ಮತದಾರರ ಸಂಪರ್ಕದ ಮಹಾಭಿಯಾನ ನಡೆಸಿದ್ದು, ಅಲ್ಲಲ್ಲಿ ಎಸ್‌ಐಆರ್ ಮಾಹಿತಿ ಕೇಂದ್ರಗಳನ್ನು ತೆರೆದಿದ್ದು ಬಿಟ್ಟರೆ ಅಷ್ಟೂ ದಿನ ಯಾವ ಮುಖಂಡರು, ಕಾರ್ಯಕರ್ತರು ಶ್ರಮಿಸಲಿಲ್ಲ. ಕಾಂಗ್ರೆಸ್ ಆರಂಭದಲ್ಲಿ ಬ್ಲಾಕ್‌ವಾರು ಜಾಗೃತಿ ಸಭೆಗಳಿಗೆ ಸೀಮಿತವಾಯಿತು. ಅದರಲ್ಲೂ ತಾಳೆಯಾಗದ ಮತದಾರರ ವಿವರ ಕಲೆ ಹಾಕುವ ಕೆಲಸಕ್ಕೆ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮುಂದಾಗಲೇ ಇಲ್ಲ.

ಈಗಲೂ ಇದೆ ಅವಕಾಶ

ಮತದಾರರ ಕರಡು ಪಟ್ಟಿಯನ್ನು ಆ.17ಕ್ಕೆ ಪ್ರಕಟಿಸಲಾಗುತ್ತದೆ. ಅದನ್ನು ಪರಿಶೀಲಿಸಿದ ಬಳಿಕ ಹೆಸರು ಸೇರ್ಪಡೆಯಾಗಿಲ್ಲ ಎಂಬುದು ಖಾತ್ರಿಯಾದರೆ ಮಾಹಿತಿ ನೀಡಲು ಸಾರ್ವಜನಿಕರಿಗೆ ಅವಕಾಶವಿದೆ. ಆದರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿಯಲಿರುವ 1.50 ಲಕ್ಷ ಮಂದಿಯ ಮಾಹಿತಿ ತಾಳೆಯಾಗದ ಹಾಗೂ ಅವರನ್ನು ಸಂಪರ್ಕಿಸುವ ಪ್ರಯತ್ನ ಫಲ ನೀಡದ ಹಿನ್ನೆಲೆಯಲ್ಲಿ ಕರಡು ಮತದಾರರ ಪಟ್ಟಿಗೆ ದೊಡ್ಡ ಮಟ್ಟದಲ್ಲಿ ಹೆಸರು ಸೇರ್ಪಡೆಯಾಗುವ ಸಾಧ್ಯತೆಗಳಿಲ್ಲ.

ಶಿವಮೊಗ್ಗ-ಭದ್ರಾವತಿಯಲ್ಲಿ ಹೆಚ್ಚು

ಮತದಾರರ ಪಟ್ಟಿಯೊಂದಿಗೆ ಮಾಹಿತಿ ತಾಳೆಯಾಗದವರು ಜಿಲ್ಲೆಯಲ್ಲೇ ಅತಿ ಹೆಚ್ಚು 56,573 ಮಂದಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿದ್ದಾರೆ. ಭದ್ರಾವತಿ ಕ್ಷೇತ್ರದಲ್ಲಿ 41,577 ಮತದಾರರ ಮಾಹಿತಿ ಲಭ್ಯವಾಗುತ್ತಿಲ್ಲ. ಭದ್ರಾವತಿಯಲ್ಲಿ ವಿಐಎಸ್‌ಎಲ್ ಹಾಗೂ ಎಂಪಿಎಂ ಮುಚ್ಚಿದ ಪರಿಣಾಮ 28,741 ಮತದಾರರ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದರೆ, ಶಿವಮೊಗ್ಗದಲ್ಲಿ ಇವರ ಸಂಖ್ಯೆ 29,794 ಆಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net