ಡಿಸೇಲ್ ಕಳ್ಳತನ ಮಾಡಿ ಲಾರಿ ಮಾಲೀಕರ ನಿದ್ದೆಗೆಡಿಸಿದ್ದ ಮೆಕಾನಿಕ್‌ ಸೆರೆ

6 smg salman (1)
Published on

ಶಿವಮೊಗ್ಗ: ನಗರದ ಊರಗಡೂರು, ಮಂಡ್ಲಿ ಸೇರಿ ಹಲವೆಡೆ ಲಾರಿಗಳ ಡಿಸೇಲ್ ಹಾಗೂ ಬ್ಯಾಟರಿ ಸೇರಿ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಮೆಕಾನಿಕ್‌ನನ್ನು ಮಾಲೀಕರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.


ಮಹಾರಾಷ್ಟ್ರದ ಮೂಲದ, ಹಾಲಿ ಚಿಕ್ಕನ್ ನಿವಾಸಿ ಸಲ್ಮಾನ್ (28) ಬಂಧಿತ ಆರೋಪಿ. ಮೂರು ವರ್ಷಗಳ ಹಿಂದೆ ಬಂದು ಬಾಡಿಗೆ ಮನೆಯಲ್ಲಿ ಪತ್ನಿ ಮತ್ತು ಮಕ್ಕಳಿಬ್ಬರ ಜತೆ ವಾಸವಾಗಿದ್ದ. ಲಾರಿ ಮೆಕಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ ಈತ ಮೊಬೈಲ್ ನಂಬರ್‌ನ್ನು ನಗರದ ಹಲವೆಡೆ ಡಿಸ್ಲೈ ಮಾಡಿದ್ದ. ಲಾರಿಗಳು ರಿಪೇರಿ ಇದ್ದಾಗ ಮಾಲೀಕರು ಫೋನ್ ಮಾಡಿ ಕರೆಸಿಕೊಳ್ಳುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದ್ದು ಸುಲಭವಾಗಿ ಹಣಗಳಿಸುವ ಉದ್ದೇಶಿದಂದ ಡಿಸೇಲ್ ಮತ್ತು ಇತರೆ ವಸ್ತುಗಳ ಕಳ್ಳತನಕ್ಕೆ ಮುಂದಾಗಿದ್ದ.


ಮಂಡ್ಲಿ, ಊರಗಡೂರು ಸೇರಿ ಹಲವೆಡೆ ಗ್ಯಾರೇಜ್, ರಸ್ತೆ ಬದಿ ನಿಲ್ಲಿಸಿದ್ದ ಲಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದ ಈತ ಬೈಕ್‌ನಲ್ಲಿ ರಾತ್ರಿ ರಾತ್ರಿ ಬಂದು ಡಿಸೇಲ್ ಸೇರಿ ಯಂತ್ರೋಪಕರಣಗಳನ್ನೂ ಕಳವು ಮಾಡುತ್ತಿದ್ದ. ರಾತ್ರಿ ನಿಲ್ಲಿಸಿದ್ದ ಲಾರಿಗಳಲ್ಲಿ ಪದೇ ಪದೇ ಕಳ್ಳತನ ಆಗುತ್ತಿದ್ದ ಬಗ್ಗೆ ತಲೆಕೆಡಿಸಿಕೊಂಡಿದ್ದ ಮಾಲೀಕರು ನಿಗಾ ವಹಿಸಿದ್ದರು.
ಸಿಸಿ ಟಿವಿ ಮೊರೆ ಹೋಗಿದ್ದ ಮಾಲೀಕರು:


ಮಂಡ್ಲಿಯಲ್ಲಿ ಬಹಳಷ್ಟು ಗ್ಯಾರೇಜ್‌ಗಳಿದ್ದು, ಇಲ್ಲಿ ಕೆಲ ದಿನಗಳಿಂದ ಡೀಸೆಲ್ ಮತ್ತು ಲಾರಿಗಳ ಹಾಗೂ ಇತರೆ ವಾಹನಗಳ ಬೆಲೆಬಾಳುವ ವಸ್ತುಗಳ ಕಳ್ಳತನವಾಗುತ್ತಿರುವ ಬಗ್ಗೆ ದೂರು ಕೇಳಿಬಂದಿತ್ತು. ಪ್ರತಿದಿನ ಲಾರಿಗಳ ಡೀಸೆಲ್ ಮತ್ತು ಇತರೆ ಬೆಲೆ ಬಾಳುವ ವಸ್ತುಗಳ ಕಳ್ಳತನವಾಗುತ್ತಿದ್ದುದ್ದಕ್ಕೆ ಬೇಸತ್ತಿದ್ದ ಲಾರಿ ಮಾಲೀಕರು, ಆ ದುಷ್ಕರ್ಮಿಗಳ ಬಲೆಗೆ ಸಿಸಿಟಿವಿ ಮೊರೆ ಹೋಗಿದ್ದರು. ಮಂಗಳವಾರ ಡಿಸೇಲ್ ಕಳ್ಳತನ ಮಾಡುತ್ತಿದ್ದಾಗ ಸಲ್ಮಾನ್‌ನನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.


ಮಧ್ಯರಾತ್ರಿಯಲ್ಲಿ ಬೈಕ್‌ನಲ್ಲಿ ದೊಡ್ಡ ಕ್ಯಾನ್ ಹಿಡಿದು ಬಂದ ಸಲ್ಮಾನ್ ಡಿಸೇಲ್ ಕಳ್ಳತನಕ್ಕೆ ಯತ್ನಿಸಿದ್ದ. ಈ ವೇಳೆ ದಾಳಿ ಮಾಡಿದ ಲಾರಿ ಮಾಲೀಕರು ಆತನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ತುಂಗಾನಗರ ಠಾಣೆ ಪೊಲೀಸರಿಗೆ ಕಳ್ಳನನ್ನು ಒಪ್ಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net