ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಸುರೇಶ್ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

20201231_115241-696x392 (1)
Published on

ಶಿವಮೊಗ್ಗ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಿ.ಜಿ.ಸುರೇಶ್ ಅವರ ಎರಡು ಮನೆ ಸೇರಿ ನಾಲ್ಕು ಕಡೆ ಗುರುವಾರ ಎಸಿಬಿ ದಾಳಿ ನಡೆದಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿತು.
ಆದಾಯಕ್ಕಿಂತ ಹೆಚ್ಚು ಗಳಿಕೆ ಆರೋಪದಡಿ ದಾಳಿ ನಡೆಸಿದ್ದು ಶಿವವಮೊಗ್ಗ ಮಲ್ಲೇಶ್ವರ ನಗರದ 2ನೇ ತಿರುವು, ಗೋಪಾಲಗೌಡ ಬಡಾವಣೆಯ ಮನೆಗಳು, ಭದ್ರಾವತಿ ಕಸಬಾ ಹೋಬಳಿಯ ಹುಣಸೇಕಟ್ಟೆಯ ತೋಟದ ಮನೆ ಹಾಗೂ ಆಲ್ಕೊಳ ವೃತ್ತದಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಮೇಲೂ ದಾಳಿ ನಡೆದಿದ್ದು ಶೋಧನಾ ಕಾರ್ಯ ನಡೆಯಿತು.
ಎಸಿಬಿ ದಾವಣಗೆರೆ ಎಸ್ಪಿ ಜಯಪ್ರಕಾಶ್, ಶಿವಮೊಗ್ಗ ಎಸಿಬಿ ಡಿವೈಎಸ್ಪಿ ಜೆ.ಲೋಕೇಶ್, ದಾವಣಗೆರೆ ಡಿಎಸ್ಪಿ ಪರಮೇಶ್ವರ್, ಪೊಲೀಸ್ ನಿರೀಕ್ಷಕ ವೀರೇಂದ್ರಕುಮಾರ್ ಹಾಗೂ ಸಿಬ್ಬಂದಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿದ್ದು ತಡರಾತ್ರಿವರೆಗೂ ಪರಿಶೀಲನೆ ನಡೆಸಿತು.
ಕಳೆದ ಆಗಷ್ಟ್‌ನಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಆಗಿದ್ದ ಜಿ.ಜಿ.ಸುರೇಶ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾಗಿ ಪದೋನ್ನತಿ ಹೊಂದಿದ್ದರು. ಅಧಿಕಾರ ಸ್ವೀಕರಿಸಿದ ಮೂರು ತಿಂಗಳಾಗಿದ್ದು ಮಗಳ ಮದುವೆ ನಿಮಿತ್ತ  ಒಂದು ತಿಂಗಳು ರಜೆ ಮೇಲೆ ತೆರಳಿದ್ದರು. ಇತ್ತೀಚೆಗಷ್ಟೇ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net