ಅರಸಿಕೆರೆ ಶಾಸಕ ಶಿವಲಿಂಗೆ ಗೌಡ ರಾಜೀನಾಮೆ

IMG-20230402-WA0088
Published on

ವಿಜಯವಾಣಿ ಸುದ್ದಿಜಾಲ ಶಿರಸಿ:

ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಶಾಸಕರ ರಾಜೀನಾಮೆ ಪರ್ವ ಮುಂದುವರೆದಿದ್ದು ಹಾಸನ ಜಿಲ್ಲೆಯ ಅರಸಿಕೆರೆ ವಿಧಾನಸಭಾ ಕ್ಷೇತ್ರದ ಜೆ ಡಿ ಎಸ್ ಶಾಸಕಶಿವಲಿಂಗೆ ಗೌಡ  ತಮ್ಮ ಶಾಸಕ ಸ್ಥಾನಕ್ಕೆ ಸ್ಪೀಕರ್ ಕಾಗೇರಿ ಅವರಿಗೆ ರಾಜೀನಾಮೆ ನೀಡಿದರು.

ಭಾನುವಾರ ತಮ್ಮ ನೂರಾರು ಬೆಂಬಲಿಗರೊಂದಿಗೆ ಶಿರಸಿಯಲ್ಲಿರುವ ಸ್ಪೀಕರ್ ಕಚೇರಿಗೆ ಆಗಮಿಸಿದ ಶಿವಲಿಂಗೆಗೌಡ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಶಿವಲಿಂಗೆ ಗೌಡ ಅವರು 2008ರಿಂದ 2018ರ ವರೆಗೆ ಸತತವಾಗಿ ಮೂರು ಬಾರಿ ಜೆಡಿಎಸ್ ನಿಂದ ಅರಸಿಕೆರೆ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆ ಯಾಗಿದ್ದರು.

ಶಿವಲಿಂಗೆ ಗೌಡರ ರಾಜೀನಾಮೆ ಯಿಂದ ಜೆಡಿಎಸ್ ಭದ್ರಕೋಟೆ ಯಾಗಿದ್ದ ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯವನ್ನು ಕೊಂಚಮಟ್ಟಿಗೆ ಕಳೆದುಕೊಂಡಂತಾಗಿದೆ. ಜೆಡಿಎಸ್ ಪಕ್ಷವನ್ನು ತೊರೆದ ಶಿವಲಿಂಗೇ ಗೌಡ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆ ಯಾಗಲಿದ್ದಾರೆ.

ಸ್ಪೀಕರ್ ಕಾಗೇರಿ ಅವರಿಗೆ  ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು.

ಜೆಡಿಎಸ್ ಪಕ್ಷದ ಪ್ರಧಾನನಾಯಕರು ಹಾಗೂ ನಮ್ಮ ಮಧ್ಯೆ ಇರುವ ಭಿನ್ನಾಭಿಪ್ರಾಯಗಳು ಬಗೆಹರಿಯದ ಕಾರಣದಿಂದ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ ಯಾಗುತ್ತಿದ್ದೆನೆ.

ಅರಸಿಕೆರೆ ಕ್ಷೇತ್ರದ ಜನರು ಸಹ ನನಗೆ ಕಾಂಗ್ರೆಸ್ ಸೇರ್ಪಡೆ ಯಾಗುವಂತೆ ತಿಳಿಸಿದ್ದರು. ಅವರ ಆಸೆಯಂತೆ ಹಾಗೂ ಜೆಡಿಎಸ್ ಪಕ್ಷದಲ್ಲಿರುವ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿಂದ  ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೆನೆ. ಈಗಾಗಲೇ ಅರಸಿಕೆರೆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಸಿಕ್ಕಿದ್ದು ಈ ಭಾರಿ ಕಾಂಗ್ರೆಸ್ ಪಕ್ಷ ದಿಂದ ಸ್ಪರ್ಧಿಸುತ್ತಿದ್ದೇನೆ ಎಂದರು.

ನಾನು ಯಾರಿಗೂ ಸವಾಲು ಹಾಕಲು ಇಷ್ಟ ಪಡುವುದಿಲ್ಲ.

ಸವಾಲಿಗೆ ಉತ್ತರವನ್ನು ಕ್ಷೇತ್ರದ ಜನರು ಚುನಾವಣೆ ಯಲ್ಲಿ ನೀಡುತ್ತಾರೆ ಎಂದು ಪ್ರಜ್ವಲ್ ರೇವಣ್ಣ ಅವರು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದರು.

ಕುಮಾರಸ್ವಾಮಿ ಹಾಗೂ ದೇವಗೌಡರು ನನ್ನ ಮನವೊಲಿಸಲು ಪ್ರಯತ್ನಿಸಿದ್ದರು . ಆದರೆ ನನ್ನ ಕ್ಷೇತ್ರದ ಜನರ ತೀರ್ಮಾನದಂತೆ ಕಾಂಗ್ರೆಸ್ ಸೇರ್ಪಡೆ ಗೊಂಡಿದ್ದೇನೆ. ನಾನು ಯಾರನ್ನೂ ದ್ವೇಷಿಸುವುದಿಲ್ಲ.ನಾವೆಲ್ಲರೂ ಚೆನ್ನಾಗಿಯೇ ಇದ್ದೇವೆ ಎಂದರು.

ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡಲು ನಾನ್ಯಾರು ಅಲ್ಲ.ಅವರ ಪಾಡಿಗೆ ಅವರಿರಲಿ ನನ್ನ ಪಾಡಿಗೆ ನಾನಿರುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net