ಭಾರ್ಗವರಾಮರು ಪ್ರತಿಷ್ಠಾಪಿಸಿದ ಶಿವಲಿಂಗ

ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಗ್ರಾಮದಿಂದ ಮೂರು ಕಿ.ಮೀ. ದೂರದಲ್ಲಿರುವ ಹಿರಣ್ಯೇಶ್ವರ ದೇವಾಲಯ.
1. HIRANESWARA TEMPLE
ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಗ್ರಾಮದಿಂದ ಮೂರು ಕಿ.ಮೀ. ದೂರದಲ್ಲಿರುವ ಹಿರಣ್ಯೇಶ್ವರ ದೇವಾಲಯ.
Published on

ನಾಲ್ಕು ದಿಕ್ಕುಗಳಲ್ಲೂ ಸ್ಥಾಪನೆ- ಶಾಸನಗಳಲ್ಲಿ ದೇಗುಲದ ಹೆಸರು ಉಲ್ಲೇಖ



ಪಾತಪಾಳ್ಯ:
ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಗ್ರಾಮದ ಪಶ್ಚಿಮಕ್ಕೆ ಮೂರು ಕಿ.ಮಿ. ದೂರದಲ್ಲಿ ರಾಮಗಿರಿ ಹಾಗೂ ಭೈರವ ಬೆಟ್ಟದ ತಪ್ಪಲಲ್ಲಿ ಮಹರ್ಷಿ ಪರಶುರಾಮರು ಪ್ರತಿಷ್ಠಾಪಿಸಿದ ಈಶ್ವರ ಲಿಂಗವು ಹಿರಣ್ಯೇಶ್ವರ ದೇವಾಲಯ ಎಂದೇ ಪ್ರಖ್ಯಾತಿ ಹೊಂದಿದೆ.
ಈ ದೇವಾಲಯದ ನೈಋತ್ಯ ದಿಕ್ಕಿನ ರಾಮಗಿರಿ ಕಣವೆಯಲ್ಲಿ ಪರಶುರಾಮರು ತಪಸ್ಸು ಮಾಡುವಾಗ ಶಿವ ಪಾರ್ವತಿಯರು ಪ್ರತ್ಯಕ್ಷರಾದರೆಂದು ಪದ್ಮ ಪುರಾಣದಲ್ಲಿ ಉಲ್ಲೇಖವಿದೆ. ದೇವಾಲಯದ ನಾಲ್ಕು ದಿಕ್ಕುಗಳಲ್ಲಿ ಶಿವ ಲಿಂಗಗಳನ್ನು ಪ್ರತಿಷ್ಠೆ ಮಾಡಿದ್ದು, ಈ ದೇವಾಲಯಕ್ಕೆ ಪಂಚ ನಂದೀಶ್ವರ ಎಂದು ನಾಮ ಹೊಂದಿದೆ ಎಂಬುದನ್ನು ದೇವಾಲಯದ ಉತ್ತರ ದಿಕ್ಕಿನಲ್ಲಿರುವ ಶಾಸನವು (ತೆಲಗು ಭಾಷೆಯಲ್ಲಿ) ತಿಳಿಸುತ್ತದೆ. ದೇವಾಲಯದ ನೈಋತ್ಯ ದಿಕ್ಕಿನ ರಾಮಗಿರಿ ಬೆಟ್ಟದ ಬುರ‌್ರಕೊಂಡ ತಪ್ಪಲಲ್ಲಿ ಎರಡನೆಯ ದೇವಾಲಯ, ಈಶಾನ್ಯ ದಿಕ್ಕಿನ ಪೆದ್ದೂರು ದಿನ್ನೆ ಎಂಬಲ್ಲಿ ಮೂರನೇ ದೇವಾಲಯ, ಆಗ್ನೇಯ ದಿಕ್ಕಿನ ದೊಡ್ಡಕೆರೆ ಉತ್ತರಕ್ಕೆ ನಾಲ್ಕನೇ ದೇವಾಲಯ ಕಾಣಬಹುದು.
ಕ್ಷೇತ್ರದ ಹಿನ್ನೆಲೆ: ವಿಜಯನಗರ ಸಾಮ್ರಾಜ್ಯವು 1343ನೇ ಇಸವಿಯಲ್ಲಿ ಹಕ್ಕಬುಕ್ಕರಿಂದ ಸ್ಥಾಪಿಸಲ್ಪಟ್ಟಿತು. ಈ ಸಾಮ್ರಾಜ್ಯದ ಸೇನಾಪತಿಗಳಾದ ಹಿರಣ್ಣಯ್ಯ ಅವರು ಹಕ್ಕಬುಕ್ಕರ ಮಗನಾದ ಕೆಂಪಣ್ಣರಾಯರೊಂದಿಗೆ ಸೈನ್ಯ ಸಮೇತ ವೇಲೂರು ಮತ್ತಡಿಗೆ ಹೊರಟು, ಯುದ್ಧದಲ್ಲಿ ಹೋರಾಡಿ ಅಲ್ಲಿ ಕೋಟೆಯನ್ನು ವಶಪಡಿಸಿಕೊಂಡು ಅಪಾರ ಐಶ್ವರ್ಯದ ಜತೆಗೆ ಕೆಲವು ಮುಖ್ಯ ಕೈದಿಗಳೊಂದಿಗೆ ವಿಜಯನಗರಕ್ಕೆ ಹಿಂದಿರುಗುತ್ತಿದ್ದರು. ಆಗ ಹಿರಣ್ಣಯ್ಯನು ತನಗೆ ತಿಳಿಸದೆ ಹತ್ಯೆಗೈದ ಒಬ್ಬ ಪ್ರಸಿದ್ಧ ಕೈದಿಯ ಸಂಗತಿ ತಿಳಿದು ಕೆಂಪಣ್ಣರಾಯರೊಂದಿಗೆ ಆದ ಮಾತಿನ ಘರ್ಷಣೆಯಿಂದ ವಿರಸವುಂಟಾಯಿತು. ಕಡೆಗೆ ಹಿರಣ್ಣಯ್ಯನಿಗೆ ವಿರಕ್ತಿ ಮೂಡಿ ಪಂಚನಂದೀಶ್ವರ ಆಲಯದ ಸಮೀಪದಲ್ಲಿ ನೆಲೆ ನಿಂತರು.ಕೆಂಪಣ್ಣರಾಯನು ಹಿರಣ್ಣಯ್ಯ ಅವರನ್ನು ಎಷ್ಟು ಬೇಡಿದರೂ ಹಿರಣ್ಣಯ್ಯ ಅವರು ತಮ್ಮ ಉಳಿದ ಜೀವಮಾವನ್ನು ಇಲ್ಲಿಯೇ ಕಳೆಯುವುದಾಗಿ ತಿಳಿಸಿ, ಚಿಕ್ಕಪ್ಪನಾದ ಗಂಗಾಧರಯ್ಯ, ತಮ್ಮನಾದ ವೀರಭದ್ರಯ್ಯ, ಸತಿ ಮತ್ತು ಪುತ್ರರನ್ನು ಸಜೀವವಾಗಿ ಕಳುಹಿಸಿ ಕೊಡುವಂತೆ ಪ್ರಾರ್ಥಿಸಿ ಕೊಂಡಾಗ ಕೆಂಪಣ್ಣರಾಯನು ವಿಜಯನಗರಕ್ಕೆ ಹೋಗಿ ನಡೆದ ಸಂಗತಿಯನ್ನು ಹಕ್ಕಬುಕ್ಕರಿಗೆ ತಿಳಿಸಿದನು. ಹಕ್ಕಬುಕ್ಕರು ತಮ್ಮ ಅಂಗರಕ್ಷಕರೊಡನೆ ಕುದುರೆಗಳ ಮೇಲೆ ಹೊರಟು ಈಗಿನ ಗುರಾಲದಿನ್ನೆಯ ಸಮೀಪ ಒಂದು ದಿನ ಕಳೆದು, ಹಿರಣ್ಣಯ್ಯ ಅವರನ್ನು ವಿಜಯನಗರಕ್ಕೆ ಹಿಂತಿರುಗಲು ಪ್ರಾರ್ಥಿಸಿದರೂ ಪ್ರಯೋಜನವಾಗದಿದ್ದಾಗ ಹಕ್ಕಬುಕ್ಕರಾಯರು ತಮ್ಮ ಭಟ್ಟರ ಮೂಲಕ ಗುಮ್ಮನಾಯಕನ ಪಾಳ್ಯದ ಖಾದ್ರಿಪತಿ ನಾಯಕ ಮತ್ತು ಇಣಿಮಿಂಚೇನಗಳ್ಳಿ (ಚಿಕ್ಕಬಳ್ಳಾಪುರದ ಸಮೀಪ ಇರುವ ಗ್ರಾಮ) ಪಾಳೇಗಾರರನ್ನು ಬರಮಾಡಿಕೊಂಡು ದೇವಾಲಯದ ಹಾಗೂ ತಮ್ಮ ಸೇನಾಪತಿಯಾದ ಹಿರಣ್ಣಯ್ಯ ಅವರ ಯೋಗಕ್ಷೇಮ ಇನ್ನು ಮುಂದೆ ತಮಗೆ ಸೇರಿದ್ದು, ಎಂದು ಅಪ್ಪಣೆ ಕೊಟ್ಟು ಹೊರಟು ಹೋದರು.

ಹಿರಣ್ಣಯ್ಯನ ಕನಸಿನಲ್ಲಿ ಬಂದಿದ್ದ ಶಿವ!
ಒಂದು ದಿನ ರಾತ್ರಿ ಹಿರಣ್ಣಯ್ಯನಿಗೆ ಕನಸಿನಲ್ಲಿ ಶಿವನು ಕಾಣಿಸಿಕೊಂಡು ದೇವಾಲಯದ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವಂತೆಯೂ, ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಬೇಕಾದ ಧನವು ಈಗಿನ ಗರ್ಭಗುಡಿಯ ಉತ್ತರದ ಗುಡ್ಡದಲ್ಲಿ ಹುತ್ತದಲ್ಲಿದೆ ಎಂದು ಹೇಳಿದಂತೆ ಭಾಸವಾದಾಗ ಹಿರಣ್ಣಯ್ಯನವರು ಶಿವಾಲಯದ ಉತ್ತರಕ್ಕೆ ಇರುವ ಪಾರ್ವತಿ ಅಮ್ಮನವರ ಗುಡಿ ಮತ್ತು ಸುಖಾಸೀನ(ನಂದಿ) ಈ ಪುರಾತನ ಭಾಗಗಳನ್ನು ಜೀರ್ಣೋದ್ಧಾರಗೊಳಿಸಿ ನಂತರ ದೇವಾಲಯದ ಪೂರ್ವಕ್ಕೆ ನವರಂಗದ್ವಾರ ಮಂಟಪ, ಅಂತರಾಳ ಕಟ್ಟಿಸಿ ದಕ್ಷಿಣಕ್ಕೆ ಹಕ್ಕಬುಕ್ಕರ ಹಾಗೂ ತನ್ನ ಪ್ರತಿಮೆಗಳನ್ನು ಪ್ರತಿಷ್ಠೆ ಮಾಡಿಕೊಂಡನು. ಈ ಅಂತರಾಳವನ್ನು ಪೆದ್ದಲ ಪಡಸಾಲಲು (ದೊಡ್ಡ ಮರ) ಎಂದು ತೆಲುಗು ಭಾಷೆಯಲ್ಲಿ ಕರೆಯುತ್ತಾರೆ. ಈ ದೇವಾಲಯದ ಉತ್ತರಕ್ಕೆ ಈಗ ಕಟ್ಟಲ್ಪಟ್ಟಿರುವ ಎತ್ತರದ ಸ್ಥಳದಲ್ಲಿ ಶ್ರೀ ವಿದ್ಯಾರಣ್ಯರು ಧರ್ಮೋಪದೇಶ ಮಾಡಿದ್ದರು ಎನ್ನುತ್ತಾರೆ. ಇದರ ಪಕ್ಕದಲ್ಲಿ ಜ್ಞಾನಾಭಿರಾಮರ ಆಲಯ ಹಾಗೂ ದಕ್ಷಿಣಕ್ಕೆ ಧಕ್ಷ ಪ್ರಜಾಪತಿ ಸಮೇತ ಶ್ರೀ ವೀರಭದ್ರಸ್ವಾಮಿ ಆಲಯವೂ ಕಟ್ಟಲ್ಪಟ್ಟಿದೆ.

ಮಲಗಿದ ನವಾಬನ ಕುದುರೆಗಳು
ಮೈಸೂರು ಸಂಸ್ಥಾನದ ಸುಲ್ತಾನನಾಗಿದ್ದ ಹೈದರಾಲಿ ಮಗನಾದ ಟಿಪ್ಪು ಸುಲ್ತಾನನ ಸೈನ್ಯಾಧಿಕಾರಿಯೊಬ್ಬನು ಗುಮ್ಮನಾಯಕನಪಾಳ್ಯದ ಕೋಟೆಯನ್ನು ವಶಪಡಿಸಿಕೊಂಡು ಹಿಂತಿರುಗಿ ಹಿರಣ್ಣೇಶ್ವರ ದೇವಾಲಯದ ಬಳಿಗೆ ಬಂದಾಗ ನವಾಬನ ಕುದುರೆಗಳು ಮುಂದೆ ಸಾಗದೆ ಅಲ್ಲಿಯೇ ನಿಂತು ಮಲಗಿದ್ದನ್ನು ದೂತರ ಮುಖಾಂತರ ಅರಿತ ಟಿಪ್ಪುಸುಲ್ತಾನ ಒಂದೂವರೆ ದಿನಗಳ ಬಳಿಕ ಹಿರಣೇಶ್ವರ ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದು ಗುಮ್ಮನಾಯಕನ ಪಾಳ್ಯದ ಅರಸರು ಸಲ್ಲಿಸುತ್ತಿರುವ ಸರ್ವದೈವ ಕಾರ್ಯಗಳನ್ನು ತಪ್ಪದೆ ನಡೆಸಿಕೊಡುವುದಾಗಿಯೂ ಮತ್ತು ದೇವಾಲಯದ ರಕ್ಷಣೆಗೆ ಒಂದು ಮುಸಲ್ಮಾನ ಕುಟುಂಬವನ್ನು ನೇಮಿಸಿ (ಕಟು ಬಡಿ) ಅವರಿಗೆ ಕಟ್ಟುಬಡಿ ಇನಾಯಿತಿ ಎಂಬ ಹೆಸರಿನ ಜಮೀನನ್ನು ಮಂಜೂರು ಮಾಡಿದ್ದರಿಂದ ಆಗ ಕುದುರೆಗಳು ಎದ್ದು ನಿಂತು ಸುಸೂತ್ರವಾಗಿ ಪ್ರಯಾಣಿಸಿದವು. ಈ ನೌಕರಿಯು 1970 ರವರೆಗೆ ತಪ್ಪದೇ ನಡೆದುಕೊಂಡು ಬಂದು ನಂತರ ಉಳುವವನಿಗೇ ಭೂಮಿ ಎಂಬ ಕಾನೂನಿನ ಪ್ರಕಾರ ಭೂಮಿಯು ಪರಭಾರೆಯಾಗಿ ಅಂದಿನಿಂದ ಅವರ ಸೇವೆ ದೇವಾಲಯಕ್ಕೆ ಇಲ್ಲದಂತಾಗಿದೆ. 60 ವರ್ಷಗಳ ಕೆಳಗೆ ಇಲ್ಲಿ ರಥೋತ್ಸವವು ನಡೆಯುತ್ತಿದ್ದು, 6 ಅಡಿ ಎತ್ತರದ ಸುಂದರ ರಥ ಚಕ್ರಗಳು ನೆಲ ಕಚ್ಚಿರುವುದನ್ನು ಕಾಣಬಹುದು.

ಜೇನುನೊಣಗಳ ಆಕ್ರಮಣ
ಮೊಘಲ್ ಸಾಮ್ರಾಜ್ಯದ ಅಧಿಪತಿಯಾದ ಔರಂಗಜೇಬನ ಕಾಲದಲ್ಲಿ ಅವರ ಸೈನಿಕರು ಧನದಾಸೆಗೆ ಈ ಗುಡಿಯು ಸಿಕ್ಕಿಬಿದ್ದು, ವೀರಭದ್ರಸ್ವಾಮಿಯ ವಿಗ್ರಹವೂ ಭಿನ್ನವಾಗಿದೆ. ಮ್ಲೇಚರು ಶ್ರೀ ವೀರಭದ್ರಸ್ವಾಮಿಯ ವಿಗ್ರಹವನ್ನು ಸ್ಥಳಾಂತರಿಸಿದ ಸಮಯದಲ್ಲಿ ಜೇನುನೋಣಗಳ ದಂಡು ಇವರ ಮೇಲರಗಿ ಇವರನ್ನು ಅಟ್ಟಿಸಿಕೊಂಡು ಸುಮಾರು 20 ಮೈಲಿ ದೂರದ ಆಂಧ್ರದ ತುಮ್ಮಲ ಗ್ರಾಮದವರೆಗೆ ಕಾಡಿದವು. ಗುಮ್ಮನಾಯಕನ ಪಾಳ್ಯದ ಪ್ರಥಮ ಪಾಳೇಗಾರರಾಗಿದ್ದ ಶ್ರೀ ಖಾದ್ರಿಪತಿ ನಾಯಕನ ಕಾಲದಲ್ಲಿ ತನ್ನ ತಾಯಿಯ ಜ್ಞಾಪಕಾರ್ಥವಾಗಿ ಕದಿರಮ್ಮನ ಕೆರೆ, ದೇವರಾಜಪಲ್ಲಿ, ಸಂಗಟಪಲ್ಲಿ ಗ್ರಾಮಗಳನ್ನು ದೇವಾಲಯದ ಪೂಜಾಕಾರ್ಯಗಳಿಗೆ ಬಳುವಳಿಯಾಗಿ ನೀಡಿರುವುದು ಇಲ್ಲಿನ ಶಾಸನಗಳು ತಿಳಿಸುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net