

ಬೇಲೂರು: ತ್ರಿವಿಧ ದಾಸೋಹಿ ಶ್ರೀ ಡಾ.ಶಿವಕುಮಾರ ಸ್ವಾಮೀಜಿಯವರ 118ನೇ ಜನ್ಮದಿನವನ್ನು ಪಟ್ಟಣದ ಶಿವಕುಮಾರ ಸ್ವಾಮೀಜಿ ಕಲ್ಯಾಣ ಮಂಟಪದಲ್ಲಿ ಏಪ್ರಿಲ್ 1ರಂದು ಆಯೋಜಿಸಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಅಡಗೂರು ಬಸವರಾಜು ಹೇಳಿದರು.
ಪಟ್ಟಣದ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶ್ರೀ ಡಾ.ಶಿವಕುಮಾರ ಸ್ವಾಮೀಜಿಯವರು ನಾಡಿಗೆ ನೀಡಿದ ಕೊಡುಗೆ ಅಪಾರ. ಲಕ್ಷಾಂತರ ವಿದ್ಯಾರ್ಥಿಗಳಿಗೆ ತ್ರಿವಿಧ ದಾಸೋಹದ ಮೂಲಕ ಸುಂದರ ಬದುಕನ್ನು ನೀಡಿದವರು. ಈ ಹಿನ್ನೆಲೆಯಲ್ಲಿ ಏಪ್ರಿಲ್ 1ರಂದು ಸ್ವಾಮೀಜಿಯವರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದು, ಕಾರ್ಯಕ್ರಮಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಶಿವಕುಮಾರ ಸ್ವಾಮೀಜಿ ಟ್ರಸ್ಟ್, ಶರಣ ಸಾಹಿತ್ಯ ಪರಿಷತ್, ವೀರಶೈವ ನಗರ ಲಿಂಗಾಯತ ಕ್ಷೇಮಾಭಿವೃದ್ಧಿ ಟ್ರಸ್ಟ್, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ, ವೀರಶೈವ ಪುರೋಹಿತ ಕ್ಷೇಮಾಭಿವೃದ್ಧಿ ಟ್ರಸ್ಟ್ ಸೇರಿದಂತೆ ಮಹಿಳಾ ಘಟಕ, ಯುವ ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಹಕಾರ ನೀಡಲಿದ್ದು, ದಿವ್ಯ ಸಾನಿಧ್ಯವನ್ನು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಶಾಸಕ ಎಚ್.ಕೆ.ಸುರೇಶ್ ಉದ್ಘಾಟಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪರಮೇಶ್, ತಾಲೂಕು ಮಾಜಿ ಅಧ್ಯಕ್ಷರಾದ ಸಿ.ಎಂ.ನಿಂಗರಾಜ್, ರವಿಕುಮಾರ್, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಪ್ರಧಾನ ಕಾರ್ಯದರ್ಶಿ ಮದನ್, ಖಜಾಂಚಿ ಕೊರಟಿಕೆರೆ ರಾಜಣ್ಣ, ಮುಖಂಡರಾದ ರವಿಕುಮಾರ್, ಕುಮಾರಣ್ಣ, ದಾಕ್ಷಾಯಿಣಿ, ಉಮಾ, ಲಕ್ಷ್ಮೀ ರೋಹಿಣಿ ಇತರರಿದ್ದರು.