

ತುಮಕೂರು: ಎಲ್ಲೆಲ್ಲೂ ಸಿದ್ದಗಂಗೆಯ ಶಿವಕುಮಾರ ಶ್ರೀಗಳ ನಾಮ ಸ್ಮರಣೆ ಅನುರಣಿಸುತ್ತಿದೆ. ತ್ರಿವಿಧ ದಾಸೋಹಿ, ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 5ನೇ ಪುಣ್ಯ ಸಂಸ್ಮರಣೋತ್ಸವ ಸಿದ್ಧತೆಗಳು ಶ್ರೀಮಠದಲ್ಲಿ ಸಮರೋಪಾದಿಯಾಗಿ ನಡೆಯುತ್ತಿದೆ. ನಾಡಿನೆಲ್ಲಡೆಯಿಂದ ಲಕ್ಷಕ್ಕು ಹೆಚ್ಚು ಮಂದಿ ಶ್ರೀಮಠಕ್ಕೆ ಹರಿದುಬರುವ ನಿರೀಕ್ಷೆ ಇದ್ದು ಭಕ್ತಿಯ ಸಂಗಮದಲ್ಲಿ ಮಿಂದೇಳಲಿದ್ದಾರೆ. ರಾಜಕೀಯ ವಿರುದ್ಧ ಧ್ರುವಗಳಾದ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಸ್ಮರಣೆಯ ಕಾರ್ಯಕ್ರಮದ ವೇದಿಕೆ ಹಂಚಿಕೊಳ್ಳುತ್ತಿರುವುದು ವಿಶೇಷವೆನಿಸಿದೆ.
ಶ್ರೀಗಳ ಪುಣ್ಯ ಸಂಸ್ಮರಣೋತ್ಸವ ಅಂಗವಾಗಿ ಶ್ರೀಗಳ ಗದ್ದುಗೆಗೆ ವಿಶೇಷ ಹೂವಿನ ಅಲಂಕಾರ ಮಾಡಿದ್ದು ಬೆಳಗ್ಗೆ 5.30ರಿಂದ ಮಹಾರುದ್ರಾಭಿಷೇಕ, ರಾಜೋಪಚಾರ, ಬಿಲ್ವಾರ್ಚನೆ ಸೇರಿದಂತೆ ಪೂಜಾ ಕೈಂಕರ್ಯಗಳು ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ಹರಗರು ಚರಮೂರ್ತಿಗಳ ಸಮ್ಮುಖದಲ್ಲಿ ನಡೆಯಲಿದೆ. ಪುಣ್ಯ ಸ್ಮರಣೆಗೆ ಬರುವ ಭಕ್ತರಿಗೆ ಶ್ರೀಗಳ ಗದ್ದುಗೆ ದರುಶನಕ್ಕೆ ಸೂಕ್ತ ವ್ಯವಸ್ಥೆಯನ್ನು ಮಠದ ಆಡಳಿತ ಮಂಡಳಿ ಮಾಡಿದೆ. ಎಲ್ಲಿಯೂ ನೂಕುನುಗ್ಗಲು ಉಂಟಾಗದಂತೆ ಗದ್ದುಗೆಗೆ ತೆರಳಲು ಮಠದ ಆವರಣದಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ.
ಸಿಎಂ, ಮಾಜಿ ಸಿಎಂ ಭಾಗಿ: ಶ್ರೀಗಳ ಪುಣ್ಯ ಸಂಸ್ಮರಣೋತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಬೆಳಗ್ಗೆ 11ಕ್ಕೆ ಗದಗದ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಅಧ್ಯಕ್ಷ ಡಾ.ಶ್ರೀ ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಸ್ಮರಣೋತ್ಸವವನ್ನು ಸಿದ್ದರಾಮಯ್ಯ ಉದ್ಘಾಟಿಸುವರು. ಯಡಿಯೂರಪ್ಪ ಅಧ್ಯಕ್ಷತೆವಹಿಸಲಿದ್ದು ಮಠಾಧ್ಯಕ್ಷ ಸಿದ್ಧಲಿಂಗ ಶ್ರೀಗಳು ನೇತೃತ್ವವಹಿಸುವರು. ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ದಿವ್ಯ ಉಪಸ್ಥಿತಿವಹಿಸುವರು. ವೇದಿಕೆ ಕಾರ್ಯಕ್ರಮದ ಬಳಿಕ ಶ್ರೀಮಠದ ಶಾಲಾ-ಕಾಲೇಜು ಮಕ್ಕಳಿಂದ ಸಂಜೆ 4.30ರ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
2 ಕೋಟಿ ವೆಚ್ಚದ ಸ್ಮತಿವನ ಲೋಕಾರ್ಪಣೆ 88 ವರ್ಷಗಳ ದೀರ್ಘ ಕಾಲ ಸಿದ್ದಗಂಗಾ ಮಠದ ಪೀಠಾಧಿಪತಿಯಾಗಿ ಲಕ್ಷಾಂತರ ಬಡಮಕ್ಕಳಿಗೆ ತ್ರಿವಿಧ ದಾಸೋಹ ಮೂಲಕ ಬದಕುಕಟ್ಟಿಕೊಟ್ಟ ಡಾ.ಶಿವಕುಮಾರ ಶ್ರೀಗಳ ಜೀವನ ಚರಿತ್ರೆಯನ್ನು ಕಲಾಕೃತಿಗಳಲ್ಲಿ ಕಟ್ಟಿಕೊಡುವ ಸ್ಮತಿವನವನ್ನು ಶ್ರೀಮಠದಲ್ಲಿ ನಿರ್ಮಿಸಲಾಗಿದೆ. ಸಮಾಜ ಸೇವೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದ ಡಾ.ಶಿವಕುಮಾರ ಶ್ರೀಗಳ 111 ವರ್ಷಗಳ ಬದುಕಿನ ಪ್ರತೀ ಘಟ್ಟವನ್ನು ಕಲಾಕೃತಿಗಳಲ್ಲಿ ಕಟ್ಟಿಕೊಡಲಾಗಿದೆ. ಅರಣ್ಯ ಇಲಾಖೆ ವತಿಯಿಂದ 2 ಕೋಟಿ ರೂ., ವೆಚ್ಚದಲ್ಲಿ ನಿರ್ಮಿಸಿರುವ ಶಿವಕುಮಾರ ಸ್ವಾಮೀಜಿ ಸ್ಮೃತಿವನ ವನ್ನು ಭಾನುವಾರ ಸಚಿವ ಈಶ್ವರ ಖಂಡ್ರೆ ಲೋಕಾರ್ಪಣೆ ಮಾಡುವರು. ರುದ್ರಾಕ್ಷಿ ಮಂಟಪೋತ್ಸವ ಶಿವಕುಮಾರ ಸ್ವಾಮೀಜಿ ಬೆಳ್ಳಿ ಪುತ್ಥಳಿಯನ್ನು ರುದ್ರಾಕ್ಷಿ ಮಂಟಪದಲ್ಲಿರಿಸಿ ಶ್ರೀಗಳ ಗದ್ದುಗೆಯಿಂದ ಗೋಸಲ ಸಿದ್ದೇಶ್ವರ ವೇದಿಕೆವರೆಗೆ 108 ಕಳಶ, ಪೂರ್ಣಕುಂಭ, ನಂದಿಧ್ವಜ, ಲಿಂಗವೀರರು ಸಮ್ಮುಖದಲ್ಲಿ ಬೆಳಗ್ಗೆ 8ಕ್ಕೆ ಮೆರವಣಿಗೆ ಮಾಡಲಾಗುವುದು. ಮಠದ ಮಕ್ಕಳು, ಭಕ್ತರು ಮೆರವಣಿಗೆಯಲ್ಲಿ ಭಾಗಿಯಾಗುವರು. ದಾಸೋಹ ವ್ಯವಸ್ಥೆ ನಾಡಿನೆಲ್ಲಡೆಯಿಂದ ಲಕ್ಷಾಂತರ ಭಕ್ತರು ಹರಿದುಬರುವ ನಿರೀಕ್ಷೆ ಇದ್ದು ಎಲ್ಲರಿಗೂ ದಾಸೋಹ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲು ಶ್ರೀಮಠದ ಆಡಳಿತ ಮಂಡಳಿ ಟೊಂಕಕಟ್ಟಿನಿಂತಿದೆ. ಶ್ರೀಮಠದ ಆವರಣದಲ್ಲಿ ವಿವಿಧೆಡೆ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 7ಕ್ಕೆ ಆರಂಭವಾಗಲಿರುವ ಉಪಹಾರ 11ರವರೆಗೆ ನೀಡಲಾಗುವುದು. ನಂತರ 11.30ಕ್ಕೆ ದಾಸೋಹ ಆರಂಭವಾಗಲಿದ್ದು ರಾತ್ರಿ 11ರವರೆಗೆ ನಿರಂತರವಾಗಿ ನಡೆಯಲಿದೆ. ಮಠದ ವಿದ್ಯಾರ್ಥಿಗಳು, ಶಿಕ್ಷಕರು ಇದರ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದಾರೆ. ಬೂಂದಿ, ಕೀರು, ಚಿತ್ರಾನ್ನ, ಪಲ್ಯ, ಹೆಸರುಬೇಳೆ ಪಲ್ಯ, ಅನ್ನ, ಸಾಂಬಾರು, ಮಜ್ಜಿಗೆ ಮಧ್ಯಾಹ್ನದ ಪ್ರಸಾದಕ್ಕೆ ನೀಡಲಾಗುವುದು.