

ಬೆಂಗಳೂರು: ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಎಬಿವಿಎಂಸಿಆರ್‌ಐ) ಅಡಿಯಲ್ಲಿ ಬರುವ ‘ಶಿವಾಜಿನಗರ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ ಸೇವೆಗೆ ಸಿದ್ಧವಾಗಿದೆ.
ಇನ್ನು ಮುಂದೆ ಈ ಆಸ್ಪತ್ರೆಯಲ್ಲಿ ಹೃದ್ರೋಗ, ನರರೋಗ, ಪ್ಲಾಸ್ಟಿಕ್ ಸರ್ಜರಿ ಹಾಗೂ ನೆಫ್ರೋ ಯುರಾಲಜಿ ವಿಭಾಗಗಳು ಕಾರ್ಯನಿರ್ವಹಿಸಲಿವೆ. ಈ ಸಮಸ್ಯೆಗಳಿಂದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬರುವ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ದೊರೆಯಲಿದೆ. ಈವರೆಗೂ ಇಂತಹ ರೋಗಿಗಳನ್ನು ಜಯದೇವ, ನಿಮ್ಹಾನ್ಸ್, ಇನ್‌ಸ್ಟಿಟ್ಯೂಟ್ ಆಫ್ ನೆಫ್ರೋ ಯುರಾಲಜಿ ಹಾಗೂ ವಿಕ್ಟೋರಿಯಾ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗುತ್ತಿದೆ. ಇನ್ನು ಮುಂದೆ ಅಂತಹ ಸಮಸ್ಯೆ ಇರುವುದಿಲ್ಲ ಎನ್ನುತ್ತಾರೆ ವೈದ್ಯರು.
ನಗರದ ಬ್ರಾಡ್‌ವೇ ರಸ್ತೆಯಲ್ಲಿರುವ ಈ ಸುಸಜ್ಜಿತ ‘ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ಯನ್ನು ‘ಶಿವಾಜಿನಗರ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ ಎಂದು ಮರುನಾಮಕರಣ ಮಾಡಲಾಗಿದೆ. ಆಸ್ಪತ್ರೆಗೆ ಅಗತ್ಯ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದೆ. ಈಗಾಗಲೇ ಆಸ್ಪತ್ರೆಯಲ್ಲಿ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಸಹ ಅಳವಡಿಸಲಾಗಿದ್ದು, ಲೋಕಾರ್ಪಣೆಗೊಳ್ಳುತ್ತಲೇ ಸೇವೆ ಲಭ್ಯವಾಗಲಿದೆ ಎಂದು ಎಬಿವಿಎಂಸಿಆರ್‌ಐ ಡೀನ್ ಮತ್ತು ನಿರ್ದೇಶಕ ಡಾ. ಎಚ್.ವಿ. ಮನೋಜ್ ಕುಮಾರ್ ತಿಳಿಸಿದ್ದಾರೆ.
130 ಹಾಸಿಗೆ ಸಾಮರ್ಥ್ಯ: ಚರಕ ಆಸ್ಪತ್ರೆಯು ಪುರುಷರಿಗೆ 60, ಮಹಿಳೆಯರಿಗೆ 50 ಹಾಗೂ ಮಕ್ಕಳಿಗೆ 20 ಸೇರಿ 130 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಇವುಗಳಲ್ಲಿ 20 ತುರ್ತು ನಿಗಾ ಘಟಕ (ಐಸಿಯು) ಹಾಗೂ 20 ವೆಂಟಿಲೇಟರ್ ಸೌಲಭ್ಯ ಹೊಂದಿವೆ. ಪ್ರಮುಖವಾಗಿ ಹೃದ್ರೋಗ, ನರರೋಗ, ಪ್ಲಾಸ್ಟಿಕ್ ಸರ್ಜರಿ ಹಾಗೂ ನೆಫ್ರೋ ಯುರಾಲಜಿ ಚಿಕಿತ್ಸೆಗಳು ಇಲ್ಲಿ ದೊರೆಯಲಿದ್ದು, ಇದರಿಂದ ಸ್ಥಳೀಯರಿಗೆ ಗುಣಮಟ್ಟದ ಆರೋಗ್ಯ ಸೇವೆ ಪಡೆಯಲು ಅನುಕೂಲವಾಗಲಿದೆ ಎಂದು ಬೌರಿಂಗ್ ಆಸ್ಪತ್ರೆಯ ಸಮನ್ವಯ ಅಧಿಕಾರಿ ಡಾ. ಎಚ್.ಎಂ. ಶ್ರೀಕಾಂತ್ ತಿಳಿಸಿದ್ದಾರೆ.
ಕೋವಿಡ್ ಚಿಕಿತ್ಸೆಗೆ ಬಳಕೆ: ಬಿಬಿಎಂಪಿ ವತಿಯಿಂದ ನಿರ್ಮಿಸಲಾಗಿದ್ದ ಈ ಆಸ್ಪತ್ರೆಯನ್ನು 2020ರ ಆಗಸ್ಟ್ ತಿಂಗಳಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದ್ದರು. ಈ ಕಟ್ಟಡ ನಿರ್ಮಾಣಕ್ಕೆ ಸಹಯೋಗ ನೀಡಿದ್ದ ಇನ್‌ಫೋಸಿಸ್ ಫೌಂಡೇಷನ್ ಆಸ್ಪತ್ರೆಗೆ ಅಗತ್ಯವಿರುವ ವೈದ್ಯಕೀಯ ಪರಿಕರಣಗಳನ್ನು ಅಳವಡಿಸಲು 11 ಕೋಟಿ ರೂ. ದೇಣಿಗೆ ನೀಡಿತ್ತು. ಕೋವಿಡ್ ಸಾಂಕ್ರಾಮಿಕ (ಮೊದಲ ಮತ್ತು ಎರಡನೇ ಅಲೆ) ಸಂದರ್ಭದಲ್ಲಿ ಸೋಂಕಿತರ ಚಿಕಿತ್ಸೆಗೆ ಈ ಆಸ್ಪತ್ರೆಯನ್ನು ಬಳಕೆ ಮಾಡಲಾಗಿತ್ತು. ಆ ವೇಳೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಕೆಲ ವೈದ್ಯರು ಸೇವೆ ಸಲ್ಲಿಸಿದ್ದರು. ಜೊತೆಗೆ ಗುತ್ತಿಗೆ ಆಧಾರದಲ್ಲಿ ಶುಶ್ರೂಷಕರು ಮತ್ತು ಸಿಬ್ಬಂದಿ ಸೇವೆ ಪಡೆಯಲಾಗಿತ್ತು.
ವೈದ್ಯರಿಲ್ಲದೆ ಸೇವೆ ಸ್ಥಗಿತ: ಕೋವಿಡ್ ನಿಯಂತ್ರಣಕ್ಕೆ ಬಂದ ನಂತರದಲ್ಲಿ ಒಳರೋಗಿಗಳ ಸೇವೆ ಸ್ಥಗಿತಗೊಳಿಸಿ ಹೃದ್ರೋಗ ಹಾಗೂ ನರರೋಗ ವಿಭಾಗದಲ್ಲಿ ಹೊರ ರೋಗಿಗಳ ಸೇವೆ ಮಾತ್ರ ಒದಗಿಸಲಾಗುತ್ತಿತ್ತು. ಇದಕ್ಕಾಗಿ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ವೈದ್ಯರು ಆಸ್ಪತ್ರೆಗೆ ಬಂದು ಸೇವೆ ನೀಡುತ್ತಿದ್ದರು. ಆದರೆ ಸೌಲಭ್ಯಗಳಿದ್ದರೂ, ವೈದ್ಯರು, ಶುಶ್ರೂಷಕರು ಇಲ್ಲದೆ, ಸಿಬ್ಬಂದಿ ಕೊರತೆಯಿಂದ ಕಟ್ಟಡ ನಿರ್ವಹಣೆ ಮಾಡಲಾಗದೆ ಸೇವೆ ಸ್ಥಗಿತಗೊಂಡಿತ್ತು.