

ಕಾರವಾರ: ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಗಂಗಾವಳಿ ನದಿಯಲ್ಲಿ ಹುದುಗಿರಬಹುದಾದ ಮೂವರ ಮೃತ ದೇಹ ಹಾಗೂ ಲಾರಿಯ ಪತ್ತೆಗೆ ಉಡುಪಿಯ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ನಿರಂತರ ಪ್ರಯತ್ನ ನಡೆಸಿದೆ.
ಮಂಗಳವಾರ ಗಂಗಾವಳಿ ನದಿಯಲ್ಲಿ ಮುಳುಗಿ ಸಾಗರ ಕೋಯಾ ಟಿಂಬರ್ ಕಂಪನಿಯ ಭಾರತ ಬೆಂಜ್ ಲಾರಿಯ ಲಿವರ್ ಜಾಕ್‌ನ್ನು ಈಶ್ವರ ಮಲ್ಪೆ ಪತ್ತೆ ಮಾಡಿದ್ದರು. ಬುಧವಾರ ಮತ್ತೆ ಕಾರ್ಯಾಚರಣೆ ಮುಂದುವರಿಸಿದ್ದು, ಲಾರಿಯ ಡೀಸೆಲ್ ಸೋರಿಕೆಯಾದಂತೆ ಕಂಡುಬರುತ್ತದೆ ಎಂದು ಈಶ್ವರ ಮಲ್ಪೆ ತಿಳಿಸಿದ್ದಾರೆ. ಅವರ ತಂಡದ ಮೂವರು ಬೆಳಗ್ಗೆ 9 ಗಂಟೆಯಿಂದ ನಿರಂತರ 6 ತಾಸು ಕಾರ್ಯಾಚರಣೆ ನಡೆಸಿದರು. ಮಧ್ಯಾಹ್ನದ ನಂತರ ಲಾರಿಯ ಕಟ್ಟಿಗೆಗಳಿಗೆ ಕಟ್ಟಿದ ಹಗ್ಗ ಪತ್ತೆಯಾಗಿದೆ. ಹಗ್ಗವು ತಮ್ಮ ಲಾರಿಗೆ ಸೇರಿದ್ದು ಎಂದು ಮಾಲೀಕ ಮುನಾಫ್ ಖಚಿತ ಪಡಿಸಿದ್ದಾರೆ.
ಬುಧವಾರ ನೌಕಾಸೇನೆಯ ಅಧಿಕಾರಿಗಳು, ಎಸ್‌ಡಿಆರ್‌ಎಫ್ ತಂಡದ ಸದಸ್ಯರೂ ಈಶ್ವರ ತಂಡದ ಕಾರ್ಯಾಚರಣೆಗೆ ನೆರವು ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ ಸೈಲ್, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಸ್ಥಳಕ್ಕೆ ತೆರಳಿ ಮಾಹಿತಿ ಪಡೆದುಕೊಂಡರು. ಗಂಗಾವಳಿ ನದಿ ನೀರು ಮೊದಲಿಗಿಂತ ತಿಳಿಯಾಗಿದ್ದು, ನದಿಯ ಒಳಗೆ ಅಲ್ಪಸ್ವಲ್ಪ ವಸ್ತುಗಳು ಕಾಣಿಸುತ್ತಿವೆ. ಅಲ್ಲದೇ ನದಿಯ ಹರಿವು ಮೊದಲು ಪ್ರತಿ ಗಂಟೆಗೆ 8 ನಾಟಿಕಲ್ ಮೈಲ್ ಇದ್ದಿದ್ದು, ಈಗ 5 ನಾಟಕಿಲ್ ಮೈಲ್ ವೇಗಕ್ಕೆ ಇಳಿದಿದೆ. ಇದರಿಂದ ಕಾರ್ಯಚರಣೆ ಸಾಧ್ಯತೆ ಹೆಚ್ಚಿದೆ ಎಂದು ಈಶ್ವರ ಮಲ್ಪೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನದಿಯಲ್ಲಿ ಆಲದ ಮರ ಅಡ್ಡವಾಗಿ ಬಿದ್ದಿದ್ದು, ಅದರ ಮೇಲೆ, ಕಲ್ಲು, ಮಣ್ಣು ಬಿದ್ದಿದೆ. ಲಾರಿಗೆ ಸಾಕಷ್ಟು ಹಾನಿಯಾಗಿರುವ ಸಾಧ್ಯತೆ ಇದೆ. ಎಲ್ಲವೂ ಗಟ್ಟಿಯಾಗಿ ಕುಳಿತ ಕಾರಣ ಅವುಗಳನ್ನು ತೆರವು ಮಾಡುವುದು ದೊಡ್ಡ ಸವಾಲಾಗಿದೆ ಎಂದು ನೀರಿನಾಳದ ಪರಿಸ್ಥಿತಿಯನ್ನು ಈಶ್ವರ ಮಲ್ಪೆ ಬಿಚ್ಚಿಟ್ಟಿದ್ದಾರೆ.
ಗೋವಾ ರಾಜ್ಯದಿಂದ ಹೂಳೆತ್ತುವ (ಡ್ರಜ್ಜಿಂಗ್)ಯಂತ್ರವನ್ನು ಶಿರೂರಿಗೆ ತರಿಸುವ ಪ್ರಯತ್ನ ನಡೆದಿದೆ ಎಂದು ಶಾಸಕ ಸತೀಶ ಸೈಲ್ ತಿಳಿಸಿದರು. ಕಾರ್ಯಾಚರಣೆಯ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ನಂತರ ಅವರು ಮಾತನಾಡಿದರು. ಮುಳುಗು ತಜ್ಞರು ಕೆಲವು ವಸ್ತುಗಳನ್ನು ಗುರುತಿಸಿದ್ದಾರೆ. ಆದರೆ, ಮಣ್ಣು, ಕಲ್ಲು, ತೆರವು ಮಾಡಿದರೆ ಮಾತ್ರ ಲಾರಿ ಸಿಗಲಿದೆ. ಇದರಿಂದ ಗೋವಾದ ಬಂದರು ಸಚಿವ ಅಲೆಕ್ಸ್ ಸಿಕ್ವೆರಾ ಹಾಗೂ ಕ್ಯಾಪ್ಟನ್ ಜತೆ ಮಾತುಕತೆ ನಡೆಸಿದ್ದೇನೆ. ಕಾರವಾರದಿಂದ ಬಂದರು ಇಲಾಖೆ ಟಗ್ ಬೋಟ್‌ನ್ನು ಕಳಿಸಿ ಡ್ರಜ್ಜಿಂಗ್ ಯಂತ್ರ ಎಳೆದು ತರಲು ಯೋಜಿಸಲಾಗಿದೆ ಎಂದರು.