

ಕಾರವಾರ: ಗುಡ್ಡ ಕುಸಿತ ಸಂಭವಿಸಿ ತಿಂಗಳು ಕಳೆದರೂ ತನ್ನ ಒಡೆಯನಿಗಾಗಿ ಹುಡುಕಾಟ ನಡೆಸುತ್ತಿರುವ ನಾಯಿಗಳೆರಡನ್ನು ನೋಡಿ ಮರುಗಿದ ಎಸ್‌ಪಿ ಎಂ.ನಾರಾಯಣ ಅದನ್ನು ದತ್ತು ಪಡೆದಿದ್ದಾರೆ. ಶಿರೂರಿನಲ್ಲಿ ಜು. 16 ರಂದು ಗುಡ್ಡ ಕುಸಿದ ಸಂಭವಿಸಿ ಅಲ್ಲಿ ಹೋಟೆಲ್ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕ ಕುಟುಂಬವೇ ಜಲಸಮಾಧಿಯಾಗಿದೆ. ಅವರ ಹೋಟೆಲ್, ಮನೆ ಇದ್ದ ಜಾಗದಲ್ಲಿ ಈಗ ಬರೀ ಮಣ್ಣಿನ ರಾಶಿ ಮಾತ್ರ ಇದೆ. ಆದರೆ, ಅವರ ಹೋಟೆಲ್‌ನಲ್ಲೇ ತಿಂದು, ಉಂಡು ಇರುತ್ತಿದ್ದ ಎರಡು ನಾಯಿಗಳು ಈಗ ಅನಾಥವಾಗಿವೆ. ಸ್ಥಳದಲ್ಲಿ ಈಗ ಯಾವುದೇ ಮನೆಗಳಿಲ್ಲ. ಆದರೆ, ನಾಯಿಗಳು ತಮ್ಮ ಮಾಲೀಕನನ್ನು ಹುಡುಕುವುದು ಬಿಟ್ಟಿಲ್ಲ. ಮನೆ, ಹೋಟೆಲ್ ಇದ್ದ ಸ್ಥಳದಲ್ಲಿ ಕಾರ್ಯಾಚರಣೆ ನಡೆದಾಗ ಸದಾ ಬಂದು ನಿಂತು ನೀರಿನೆಡೆಗೆ ನೋಡುತ್ತಿದ್ದವು. ಈಗಲೂ ಅದೇ ಪ್ರದೇಶದಲ್ಲಿ ಓಡಾಡುತ್ತಿವೆ. ಬುಧವಾರ ಕಾರ್ಯಾಚರಣೆ ವೇಳೆ ಸ್ಥಳಕ್ಕೆ ತೆರಳಿದ ಎಸ್‌ಪಿ ಎಂ.ನಾರಾಯಣ ನಾಯಿಗಳ ಈ ಪರಿಸ್ಥಿತಿ ನೋಡಿ ಮರುಗಿದ್ದು, ತಮ್ಮ ಅಧಿಕೃತ ನಿವಾಸಕ್ಕೆ ಅವೆರಡನ್ನೂ ಕೊಂಡೊಯ್ದಿದ್ದಾರೆ.