ಸಣ್ಣಿ ಗೌಡ ಶವ ಸಾಗಣೆಗೆ‌ ಹೆಗಲು ಕೊಟ್ಟ ಪತ್ರಕರ್ತರ ತಂಡ

Body cremation (1)
Published on

ಕಾರವಾರ: ಶಿರೂರು ಗುಡ್ಡ ಕುಸಿತದಿಂದ ಬಾಧಿತವಾಗಿರುವ ಉಳುವರೆ ಗ್ರಾಮದಿಂದ ನಾಪತ್ತೆಯಾಗಿದ್ದ ಸಣ್ಣಿ ಹನುಮಂತ ಗೌಡ(60) ಮೃತದೇಹ ಗೋಕರ್ಣ ಗಂಗೆಕೊಳ್ಳ ತೀರದಲ್ಲಿ ಮಂಗಳವಾರ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ, ನಂತರ ಊರಿಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಆದರೆ, ವಾಸನೆಯಿಂದ ಕೂಡಿದ್ದ ಶವ ಹೊರಲು ಯಾರೂ ಬಾರದ್ದರಿಂದ ಕೇರಳ, ಮಂಗಳೂರು ಭಾಗದಿಂದ ಆಗಮಿಸಿದ ಪತ್ರಕರ್ತರು ಚಟ್ಟಕ್ಕೆ ಹೆಗಲು ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಮೋಹನ ಕುತ್ತಾರ್, ಶಶಿ ಬೆಳ್ಳಾಯರು, ಆರ್ೀ ಯು.ಆರ್. ಕಲ್ಕಟ್ಟ, ಗಿರೀಶ ಮಳಲಿ, ಶಿವಶಂಕರ್ ಅವರು ಆಂಬುಲೆನ್ಸ್‌ನಿಂದ ಮನೆಯವರೆಗೆ ಶವ ಸಾಗಿಸಿದರು.

ಸಾಂತ್ವನ ಹೇಳಿದ ಅಧಿಕಾರಿಗಳ ತಂಡ

ಘಟನೆಯಲ್ಲಿ ಅಂಕೋಲಾ ಶಿರೂರಿನ ಜಗನ್ನಾಥ ನಾಯ್ಕ, ಗಂಗೆಕೊಳ್ಳದ ಲೋಕೇಶ ನಾಯ್ಕ, ಕೇರಳದ ಲಾರಿ ಚಾಲಕ ಅರ್ಜುನ್ ಪತ್ತೆಯಾಗಬೇಕಿದೆ. ನದಿಯಲ್ಲಿ ಸಿಕ್ಕ ಕಾಲಿನ ಭಾಗ ಯಾರದ್ದು ಎಂಬುದು ಖಚಿತವಾಗಬೇಕಿದೆ. ಕೇರಳದ ಅರ್ಜುನ್ ಅವರ ಪತ್ತೆಗೆ ಕೇರಳ ಭಾಗದಿಂದ ಭಾರಿ ಒತ್ತಡ ಬರುತ್ತಿದೆ. ಸ್ಥಳೀಯರ ಗೋಳು ಕೇಳುವವರಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಮೃತರು, ಮನೆ ಕಳೆದುಕೊಂಡವರ ಜತೆ ಸಿಎಂ ಸಿದ್ದರಾಮಯ್ಯ ಮಾತನಾಡಿಲ್ಲ ಎಂಬ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಕುಮಟಾ ಎಸಿ ಕಲ್ಯಾಣ ಕಾಂಬ್ಳೆ, ತಹಸೀಲ್ದಾರ್ ಅನಂತ ಶಂಕರ್, ತಾಪಂ ಇಒ ಸುನೀಲ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸತೀಶ ಜಗನ್ನಾಥ ನಾಯ್ಕ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net