ಲಕ್ಷ್ಮಣ ನಾಯ್ಕ ಟಿ ಸ್ಟಾಲ್ ಜಾಗದಲ್ಲಿ ಈಗಿರುವುದು ಬರೀ ಮಣ್ಣಿನ ರಾಶಿ

Lakshaman naik tea stal place
Published on

ಕಾರವಾರ: ಶಿರೂರು ಗುಡ್ಡ ಕುಸಿತದ ಮಹಾ ದುರಂತದ ಸಂದರ್ಭದಲ್ಲಿ  11ರಷ್ಟು ಜನರಿದ್ದ ಲಕ್ಷ್ಮಣ ನಾಯ್ಕ ಅವರ ಚಹಾ ಅಂಗಡಿಯ ಸ್ಥಳದಲ್ಲಿ  ಈಗ ಕೆಂಪು ಮಣ್ಣಿನ ಗುಡ್ಡೆ ಮಾತ್ರ ಉಳಿದಿದೆ.
ಜು.16ರಂದು ಗುಡ್ಡ ಕುಸಿದು ಚಹಾ ಅಂಗಡಿ ನಾಪತ್ತೆಯಾಗಿತ್ತು. ಅಲ್ಲಿ ದೊಡ್ಡ ಮಣ್ಣಿನ ರಾಶಿ ಬಿದ್ದಿತ್ತು. ಅಂಗಡಿಯ ಅವಶೇಷಗಳು, ಕೆಲವು ಜನರೂ ಅದೇ ಸ್ಥಳದಲ್ಲಿ  ಸಿಲುಕಿರಬಹುದು ಎಂಬ ಅಂದಾಜಿನಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಆದರೆ, ಜಿಲ್ಲಾಡಳಿತ ಹಾಗೂ ಜನರ ಕಲ್ಪನೆ ಹುಸಿಯಾಗಿದೆ. 8 ದಿನಗಳಿಂದ ಹಂತ, ಹಂತವಾಗಿ ಮಣ್ಣು ತೆರವು ಮಾಡಲಾಗಿದೆ. ಹೆದ್ದಾರಿ, ಚಹಾ ಅಂಗಡಿ ಸ್ಥಳದಲ್ಲಿದ್ದ 10 ಅಡಿಗೂ ಹೆಚ್ಚು ಎತ್ತರದ ಮಣ್ಣನ್ನು ಹೆದ್ದಾರಿಯ ಮಟ್ಟಕ್ಕೆ  ತೆರವು ಮಾಡಲಾಗಿದೆ. ಅಚ್ಚರಿ ಎಂದರೆ ಒಂದೇ ಒಂದು ಅವಶೇಷವೂ ಅಲ್ಲಿ ಲಭ್ಯವಾಗಿಲ್ಲ. ಎಂಟು ದಿನಗಳ ಹಿಂದೆ ಟೀ ಸ್ಟಾಲ್ ಇದ್ದ ಇದೇ ಸ್ಥಳ ಹೌದೇ ಎಂದು ಅನುಮಾನ ಮೂಡುವಂತಿದೆ. ಗುಡ್ಡದಿಂದ ಕುಸಿದ ಮಣ್ಣು ಟ್ಯಾಂಕರ್‌ಗಳು ಮಾತ್ರವಲ್ಲ ಟಿ ಸ್ಟಾಲ್ ಹಾಗೂ ಅದರಲ್ಲಿದ್ದ ಜನರನ್ನೂ ಸಂಪೂರ್ಣವಾಗಿ ನದಿಗೆ ನೂಕಿರುವುದು ಈಗ ಖಚಿತವಾಗಿದೆ.
ದುರಂತ ಸಂಭವಿಸಿ 8 ದಿನ ಕಳೆದು ಹೋಗಿದೆ. ಇನ್ನೂ ಮೂವರು ಪತ್ತೆಯಾಗಬೇಕಿದೆ. ಇದರಿಂದ ಈಗ ನದಿಯ ನಡುವೆ ಇರುವ ಮಣ್ಣು ತೆಗೆಯುವ ಕಾರ್ಯಾಚರಣೆಯನ್ನು ಭಾರತೀಯ ಸೇನೆ, ಎನ್‌ಡಿಆರ್‌ಎಫ್ ಚುರುಕುಗೊಳಿಸಿದೆ. ಕೇರಳದಿಂದ ಆಗಮಿಸಿದ 20 ಜನರ ತಂಡವೂ ಕಾರ್ಯಾಚರಣೆ ಕೈಗೊಂಡಿದೆ.

ಗಂಗಾವಳಿ ನದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಣ್ಣು ಬಿದ್ದಿದ್ದು, ಭಾರತೀಯ ಸೇನೆಯ ಅಧಿಕಾರಿಗಳು ಅಲ್ಲಿಗೆ ತೆರಳಿ ಜಿಪಿ ರಡಾರ್‌ ಯಂತ್ರದ ಮೂಲಕ ಪರಿಶೀಲನೆ ನಡೆಸಿದ್ದಾರೆ. ಮಣ್ಣಿನಡಿ ಸುಮಾರು 8 ಮೀಟರ್ ಆಳದಲ್ಲಿ ಲೋಹದ ಕುರುಹು ಪತ್ತೆಯಾಗಿದೆ. ಆದರೆ, ಅದು ಲಾರಿಯೇ ಎಂದು ಖಚಿತಪಡಿಸಲು ಸಾಧ್ಯವಿಲ್ಲ.
ಇಸ್ರೋ ಸೆಟಲೈಟ್ ಇಮೇಜ್ ಬಳಸಿ ಮಣ್ಣು ಎಷ್ಟು ವ್ಯಾಪ್ತಿಯಲ್ಲಿದೆ ಎಂದು ಗುರುತಿಸಲಾಗಿದೆ. ಶಾಸಕ ಸತೀಶ ಸೈಲ್ ನೆರವಿನಲ್ಲಿ ಬೆಳಗಾವಿಯ ಗೋಕಾಕ್‌ನಿಂದ ಬೃಹತ್ ಬೂಮ್ ಪೋಕ್ಲೈನ್  ತರಿಸಲಾಗುತ್ತಿದೆ. ಸುಮಾರು 20 ಮೀಟರ್ ಇರುವ ಪೋಕ್ಲೈನ್ ಸಹಾಯದಿಂದ ನದಿಯಲ್ಲಿ ಬಿದ್ದ ಮಣ್ಣು ತೆರವು ಮಾಡಲು ಸಾಧ್ಯವಾಗಲಿದೆ.

ಭಾರತೀಯ ಸೇನೆಯ ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ಅವರ ಸಹಕಾರವನ್ನು ಕರ್ನಾಟಕ ಸರ್ಕಾರ ಕೇಳಿದೆ. ಅವರ ತಂಡ ಬುಧವಾರ ಸ್ಥಳಕ್ಕೆ ಆಗಮಿಸಲಿದೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net