

ಕಾರವಾರ: ಅಂಕೋಲಾ ಶಿರೂರಿನಲ್ಲಿ ನಾಲ್ಕನೇ ದಿನದ ಕಾರ್ಯಾಚರಣೆ ನಡೆದಿದ್ದು, ಟ್ಯಾಂಕರ್‌ನ ಹಿಂದಿನ ಎರಡು ಟಯರ್‌ಗಳನ್ನು ಸೋಮವಾರ ಮೇಲೆತ್ತಲಾಗಿದೆ. ಅಲ್ಲದೇ ಕಬ್ಬಿಣದ ವಿದ್ಯುತ್ ಕಂಬದ ಚೂರು, ಬಟ್ಟೆಗಳು ಇನ್ನೂ ಕೆಲವು ಸಣ್ಣಪುಟ್ಟ ಸಾಮಗ್ರಿಗಳು ಪತ್ತೆಯಾಗಿವೆ.
ಜು.16 ರಂದು ಗುಡ್ಡ ಕುಸಿತ ಸಂಭವಿಸಿ ನಾಪತ್ತೆಯಾದ ಮೂವರು ಹಾಗೂ ಲಾರಿ ಮತ್ತು ಇತರ ಸಾಮಗ್ರಿಗಳಿಗಾಗಿ ಅಭಿಷೇನಿಯ ಡ್ರಜ್ಜಿಂಗ್ ಕಂಪನಿ ಗುತ್ತಿಗೆ ಪಡೆದು, ಶುಕ್ರವಾರ ಹುಡುಕಾಟ ನಡೆಸಿದೆ. ನದಿಯ ನಡವೆ ಬಿದ್ದ ಮಣ್ಣುಗಳನ್ನು ತೆರವು ಮಾಡುತ್ತಿದೆ.
ನಾಪತ್ತೆಯಾದ ಕೇರಳ ಮೂಲದ ಅರ್ಜುನ್ ಇದ್ದರು ಎನ್ನಲಾದ ಬೆಂಜ್ ಟ್ರಕ್ ಎಲ್ಲಿದೆ ಎಂಬುದು ಎಲ್ಲರ ಕುತೂಹಲವಾಗಿದೆ. ಆ ಟ್ರಕ್‌ನಲ್ಲಿ ತುಂಬಿದ್ದ ಮರದ ದಿಮ್ಮಿಗಳು ಇದುವರೆಗೆ ಸಿಕ್ಕಿವೆಯೇ ಹೊರತು ಟ್ರಕ್‌ನ ಯಾವುದೇ ಬಿಡಿ ಭಾಗಗಳು ಇದುವರೆಗೂ ಪತ್ತೆಯಾಗಿಲ್ಲ.
ಐದು ಅಡಿ ಆಳದಲ್ಲಿ ಲಾರಿ:
ಭಾರತೀಯ ಸೇನೆಯ ನಿವೃತ್ತ ಮೇಜರ್ ಜನರಲ್ ಇಂದ ಬಾಲನ್ ಅವರು ಸೋಮವಾರ ಶಿರೂರಿಗೆ ಆಗಮಿಸಿ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಸಲಹೆಗಳನ್ನು ನೀಡಿದರು. ಈ ಹಿಂದೆ ಇಂದ್ರ ಬಾಲನ್ ಅವರ ತಂಡ ಆಗಮಿಸಿ ಸೋನಾರ್, ಸುಧಾರಿತ ಡ್ರೋನ್ ಮುಂತಾದ ಸಾಧನಗಳನ್ನು ಬಳಸಿ ಅರ್ಜುನ್ ಟ್ರಕ್ ಇರಬಹುದಾದ ನಾಲ್ಕು ಸ್ಥಳಗಳ ಬಗ್ಗೆ ವರದಿ ನೀಡಿತ್ತು.
ಸೋಮವಾರ ಸ್ಥಳ ಪರಿಶೀಲನೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ ಅವರು, ಮೊದಲ ಎರಡು ಸ್ಥಳಗಳಲ್ಲಿ ಶೋಧ ಕಾರ್ಯ ಈಗಾಗಲೇ ನಡೆಸಲಾಗಿದೆ. ಹಲವು ವಸ್ತುಗಳು ಸಿಕ್ಕಿವೆ. ನಾಲ್ಕನೇ ಸ್ಥಳದಲ್ಲಿ ನೀರಿನ ಮೇಲ್ಮೈನ ಸುಮಾರು 5 ಅಡಿ ಆಳದಲ್ಲಿ ಮಣ್ಣಿನಡಿ ಅರ್ಜುನ್ ಟ್ರಕ್ ಇರಬಹುದು ಅಲ್ಲಿ ಶೋಽಸುವಂತೆ ಸೂಚಿಸಿದ್ದೇನೆ ಎಂದರು.
ಇನ್ನೊಂದು ಪ್ಲೇಟ್
ಹಿಂದುಜಾ ಗ್ರೂಪ್‌ಗೆ ಸೇರಿದ ಲಾರಿಯೊಂದರ ಮಾಹಿತಿ ಇರುವ ಇಂಜಿನ್‌ಗೆ ಅಳವಡಿಸಿರುವ ಪ್ಲೇಟ್ ಒಂದು ಕಾರ್ಯಾಚರಣೆಯ ವೇಳೆ ಲಭ್ಯವಾಗಿದ್ದು, ಇನ್ನೊಂದು ಲಾರಿ ಮಣ್ಣಿನಡಿ ಇದೆಯೇ ಎಂಬ ಅನುಮಾನ ಮೂಡಿದೆ.
ಎಸ್‌ಪಿ ಸ್ಪಷ್ಟನೆ:
ಮುಳುಗು ತಜ್ಞ ಈಶ್ವರ ಮಲ್ಪೆ ಜಿಲ್ಲಾಡಳಿತ ತಮಗೆ ಸಹಕಾರ ನೀಡುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿರುವ ಬಗ್ಗೆ ಎಸ್‌ಪಿ ಎಂ.ನಾರಾಯಣ ಸ್ಪಷ್ಟನೆ ನೀಡಿದ್ದಾರೆ. ಈಶ್ವರ ಮಲ್ಪೆ ಅವರು ಕಾರ್ಯಾಚರಣೆಗೆ ಸ್ವಯಂಪ್ರೇರಿತರಾಗಿ ಬಂದಿದ್ದಾರೆ. ಆದರೆ, ತಮಗೆ ಊಟ, ವಸತಿ ವ್ಯವಸ್ಥೆ ಬೇಕು ಎಂದು ಕಾರ್ಯಾಚರಣೆಯ ಮುಖ್ಯಸ್ಥರ ಜತೆ ಕೇಳಿಲ್ಲ. ಜಿಲ್ಲಾಡಳಿತ ಖಾಸಗಿ ಕಂಪನಿ ಜತೆ ಒಪ್ಪಂದ ಮಾಡಿಕೊಂಡು ಶೋಧ ಕಾರ್ಯಾಚರಣೆಯ ಜವಾಬ್ದಾರಿ ನೀಡಿದೆ. ಅವರು ಮುಳುಗು ತಜ್ಞರನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.