ಮೆಣಸಿನಕಾಯಿ ಬೆಳೆಗೆ ಥ್ರಿಪ್ಸ್ ನುಶಿ ಕಾಟ

6-srt- story menasinakayi
Published on

ಶಿರಹಟ್ಟಿ: ತಾಲೂಕಿನಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ರೈತರು ಮೆಣಸಿನಕಾಯಿ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದಾರೆ. ಆದರೆ, ಬೆಳೆಗೆ ಹೊಸ ಥ್ರಿಪ್ಸ್ ನುಶಿ ಕೀಟ ಬಾಧೆ ತಗುಲಿದ್ದು, ಬೆಳೆ ಇಳುವರಿ ಕಡಿಮೆಯಾಗುವ ಆತಂಕ ರೈತರನ್ನು ಕಾಡುತ್ತಿದೆ.ತಾಲೂಕಿನ ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ಪ್ರಸ್ತುತ ಎರಡೂ ತಾಲೂಕಿನಲ್ಲಿ ಮೆಣಸಿನಕಾಯಿ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದಾರೆ. ಶಿರಹಟ್ಟಿಯಲ್ಲಿ 360 ಹೆಕ್ಟೇರ್ ಮತ್ತು ಲಕ್ಷೆ್ಮೕಶ್ವರದಲ್ಲಿ 2,200 ಹೆ. ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ.

ರೋಗದ ಲಕ್ಷಣಗಳು: ಪ್ರೌಢ ಕೀಟಗಳು ಗುಂಪು ಗುಂಪಾಗಿ ಎಲೆಗಳ ಕೆಳ ಭಾಗ, ಹೂವುಗಳ ಒಳಗೆ ಮತ್ತು ಹೊರಗೆ ಕಂಡುಬರುತ್ತವೆ. ಸಣ್ಣ ನುಸಿಗಳು ಎಲೆಗಳ ಕೆಳಭಾಗದಲ್ಲಿ ಕೇಂದ್ರೀಕೃತಗೊಂಡಿರುತ್ತವೆ. ಕೀಟಗಳು ಸಸ್ಯದ ಬಹುಭಾಗಗಳಿಂದ ರಸವನ್ನು ಹೀರುವುದರಿಂದ ಸಸ್ಯದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಎಲೆಗಳ ಅಂಚುಗಳು ಮೇಲ್ಮುಖವಾಗಿ ಮುದುಡುವುದು, ಹೂಗಳು ಉದುರುವುದು ಮತ್ತು ಬೆಳವಣಿಗೆ ಹಂತದಲ್ಲಿರುವ ಚಿಗುರುಗಳು ಗುಂಪಾಗಿ ಹೂವು ಬಿಡದೆ ಒಣಗುವುದು ಕಂಡುಬರುತ್ತದೆ. ಕ್ರಮೇಣ ಕಾಯಿಗಳ ಸಂಖ್ಯೆ ಕಡಿಮೆಯಾಗಿ ಇಳುವರಿ ಗಣನೀಯ ಪ್ರಮಾಣದಲ್ಲಿ ಕುಂಠಿತಗೊಳ್ಳುತ್ತದೆ. ನಿರ್ವಹಣಾ ಕ್ರಮಗಳು: ಹೊಲದ ಸುತ್ತ 2-3 ಸಾಲು ಜೋಳ, ಮೆಕ್ಕೆಜೋಳ, ಸಜ್ಜೆಯನ್ನು ಬೇಲಿ ಬೆಳೆಯಾಗಿ ಬೀಜ ಬಿತ್ತನೆ ಮಾಡಬೇಕು. ಹೊಲ ಮತ್ತು ಬದುಗಳ ಸ್ವಚ್ಛತೆ ಮಾಡಬೇಕು. ಥ್ರಿಪ್ಸ್ ನುಸಿಗಳಿಗೆ ಆಸರೆ ನೀಡುವ ಕಳೆಗಳ ನಿಮೂಲನೆ ಮಾಡಬೇಕು. ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರದೊಡನೆ ಮೆಟಾರೈಜಿಯಮ್ ಅನಿಸೋಪ್ಲಿಯೆ ಎಂಬ ಶಿಲೀಂಧ್ರ ಕೀಟನಾಶಕದಿಂದ (2-3 ಕೆ.ಜಿ/ಟನ್) ಮೌಲ್ಯವರ್ಧನೆಗೊಳಿಸಿ ಹೊಲಗಳಿಗೆ ಹಾಕಬೇಕು. ಬೇವಿನ ಹಿಂಡಿ (200 ಕೆ.ಜಿ/ಎಕರೆಗೆ) ಮತ್ತು ಎರೆಹುಳು ಗೊಬ್ಬರವನ್ನು (500 ಕೆ.ಜಿ/ಎಕರೆಗೆ) ಮಣ್ಣಿನಲ್ಲಿ ಬೆರೆಸಿ ಸಿಂಪಡಿಸಬೇಕು. ಇದರಿಂದ ಗಿಡಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗೊಳ್ಳುತ್ತದೆ. ಆಗಾಗ ಎಡೆ ಕುಂಟೆ ಹೊಡೆಯಬೇಕು. ಇದರಿಂದ ಕೋಶಾವಸ್ಥೆಯಲ್ಲಿರುವ ಥ್ರಿಪ್ಸ್ ನುಸಿಯನ್ನು ನಾಶಪಡಿಸಬಹುದು. ಕಾಲುವೆ ಮೂಲಕ ನೀರುಣಿಸುವ ಬದಲು ತುಂತುರು ನೀರಾವರಿ ಪದ್ಧತಿ ಅಳವಡಿಸಬೇಕು. ತೀವ್ರ ಕೀಟಬಾಧೆಗೊಳಗಾದ ಗಿಡಗಳನ್ನು ಕಿತ್ತು ಗುಂಡಿಯಲ್ಲಿ ಮುಚ್ಚಬೇಕು ಎಂಬುದು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆ.

ಶಿರಹಟ್ಟಿ ಮತ್ತು ಲಕ್ಷೆ್ಮೕಶ್ವರ ತಾಲೂಕುಗಳಲ್ಲಿ 2,519 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ಕೆಲವೆಡೆ ಥ್ರಿಪ್ಸ್ ನುಸಿ ಕೀಟಬಾಧೆ ಕಾಣಿಸಿದೆ. ಕೀಟಬಾಧೆ ತಡೆಗೆ ರೈತರು ಇಲಾಖೆ ಸೂಚಿಸುವ ಔಷಧ ಸಿಂಪಡಣೆ ಮಾಡಿ ಮುನೆಚ್ಚರಿಕೆ ಕ್ರಮ ಅನುಸರಿಸಬೇಕು.  ರಮೇಶ ಹಾವರೆಡ್ಡಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಒಂದು ಎಕರೆ ಜಮೀನಿನಲ್ಲಿ ಪತ್ರಿ ವಾರ ನನಗೆ ಐದು ಸಾವಿರ ರೂ. ಗಿಂತ ಹೆಚ್ಚು ಆದಾಯ ಬರುತ್ತಿತ್ತು. ಆದರೆ, ನುಶಿ ಕೀಟ ಕಾಟ ಹೆಚ್ಚಾದ ಬಳಿಕ ಮೆಣಸಿನಕಾಯಿ ಇಳುವರಿ ಕಡಿಮೆಯಾಗಿದೆ. ಈಗ ಮೂರು ಸಾವಿರ ಆದಾಯ ಕೂಡ ಬರುತ್ತಿಲ್ಲ. ಸಸಿ ನಾಟಿ, ಔಷಧ ಸಿಂಪಡಣೆಗೆ ಸಾಕಷ್ಟು ಹಣ ಖರ್ಚು ಮಾಡಿದ್ದೇನೆ. ನನಗೀಗ ಖರ್ಚು ಮಾಡಿದ ಹಣ ಬಂದರೆ ಸಾಕು ಎಂಬಂತಾಗಿದೆ. | ನಾಗರಾಜ ಯಲ್ಲಪ್ಪ ಹರ್ಲಾಪುರ ಮೆಣಸಿನಕಾಯಿ ಬೆಳೆಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net