

ತುಮಕೂರು: ಜೆಡಿಎಸ್ ಚಟುವಟಿಕೆಗಳಿಂದ ದೂರ ಉಳಿದಿರುವ ಮಾಜಿ ಸಚಿವ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಶಾಸಕ ಬಿಎಂಎಲ್ ಕಾಂತರಾಜು ಹಾಗೂ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಜತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮನವೊಲಿಕೆ ಕಸರತ್ತು ನಡೆಸಿದ್ದಾರೆ.
ಈ ಮೂವರು ಪ್ರಮುಖ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ನಿರಂತರ ಸಂಪರ್ಕದಲ್ಲಿದ್ದು, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಊಹಾಪೋಹ ಜಿಲ್ಲೆಯಲ್ಲಿದೆ. ಈ ನಡುವೆ ದೇವೇಗೌಡರ ಇಂದಿನ ಭೇಟಿ ಮಹತ್ವ ಪಡೆದಿದೆ. ಮುನಿಸಿಕೊಂಡ ಮುಖಂಡರೊಂದಿಗೆ ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ನಿವಾಸದಲ್ಲಿ ಶುಕ್ರವಾರ ದೇವೇಗೌಡರು ಸಂಧಾನ ಸಭೆ ನಡೆಸಿದ್ದಾರೆ.
ಎಸ್.ಆರ್.ಶ್ರೀನಿವಾಸ್, ಬಿಎಂಎಲ್ ಕಾಂತರಾಜು ಹಾಗೂಸಿ.ಬಿ.ಸುರೇಶ್ಬಾಬು ಜತೆ ಒಂದು ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದ ದೇವೇಗೌಡರು, ಪಕ್ಷದ ಪರ ಕೆಲಸ ಮಾಡುವಂತೆ ಸೂಚಿಸಿದರು ಎನ್ನಲಾಗಿದೆ. ದೇವೇಗೌಡರ ಬಗ್ಗೆ ಗೌರವರಿಂದಲೇ ನಡೆದುಕೊಂಡಿರುವ ಮೂವರು ನಾಯಕರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಬಗ್ಗೆ ದೂರುಗಳ ಸುರಿಮಳೆಗೈದಿದ್ದು ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಶಿರಾ ಉಪಸಮರದಲ್ಲೂ ಕಾಣಿಸಿಕೊಂಡಿದ್ದಾರೆ.
ಕಾಂಗ್ರೆಸ್ ಕಡೆ ವಾಲಿರುವ ಮುಖಂಡರು?: ಎಸ್.ಆರ್.ಶ್ರೀನಿವಾಸ್ ನೇತೃತ್ವದಲ್ಲಿ ಪ್ರಮುಖ ಮೂವರು ನಾಯಕರು ಡಿ.ಕೆ.ಶಿವಕುಮಾರ್ ಸಂಪರ್ಕದಲ್ಲಿದ್ದರು, ಮುಂಬರುವ ವಿಭಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸುವ ಸಾಧ್ಯತೆ ಬಗ್ಗೆ ಮುನ್ಸೂಚನೆ ಅರಿತು ದೇವೇಗೌಡರು ನಡೆಸಿದ ಸಂಧಾನ ತಾತ್ಕಾಲಿಕ ಯಶಸ್ಸು ಕಂಡಿದೆ. ಶುಕ್ರವಾರ ಸಂಜೆ ಶಿರಾ ಉಪಸಮರದಲ್ಲಿ ದೇವೇಗೌಡರ ಜತೆಯಲ್ಲಿ ಮೂವರು ರೆಬೆಲ್ ಮುಖಂಡರು ಕಾಣಿಸಿಕೊಂಡಿದ್ದು, ಮುನಿಸು ತಾತ್ಕಾಲಿಕ ಶಮನವಾಗಿದೆ.
ನನಗೆ ಕರೊನಾ ವೈರಸ್ ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಶಿರಾ ಕ್ಷೇತ್ರದ ಉಪಚುನಾವಣೆ ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ, ಶುಕ್ರವಾರ ದೇವೇಗೌಡರೊಂದಿಗೆ ಮಾತನಾಡಿದ್ದು, ಸಂಜೆಯಿಂದಲೇ ನಮ್ಮ ಅಭ್ಯರ್ಥಿ ಅಮ್ಮಾಜಮ್ಮ ಪರ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಎಸ್.ಆರ್.ಶ್ರೀನಿವಾಸ್ ತಿಳಿಸಿದ್ದಾರೆ.