

ತುಮಕೂರು: ಶಿರಾ ಉಪಸಮರದಲ್ಲಿ ಕಳೆದ 8-10 ದಿನಗಳಿಂದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಬಸವಳಿದಿದ್ದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಸಮಾವೇಶದಲ್ಲಿ ಕುಸಿದುಬಿದ್ದಿದ್ದು ಕೆಲಕಾಲ ಆತಂಕ ಸೃಷ್ಟಿಸಿತು.
ಉಪಚುನಾವಣೆ ಬಹಿರಂಗ ಪ್ರಚಾರ ಭಾನುವಾರ ಸಂಜೆ ಅಂತ್ಯಗೊಳ್ಳಲು ಕೆಲವೇ ಗಂಟೆಗಳು ಬಾಕಿ ಇತ್ತು. ಶಿರಾ ನಗರದ ಬರಗೂರು ರಾಮಚಂದ್ರಪ್ಪ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಮಧ್ಯಾಹ್ನ 3.30ರಲ್ಲಿ ಸ್ವಲ್ಪ ದಣಿದಂತೆ ಕಂಡ ಅಮ್ಮಾಜಮ್ಮನವರು ನೀರು ಕುಡಿದ ತಕ್ಷಣವೇ ಕುಸಿದುಬಿದ್ದಿರು. ಎಚ್.ಡಿ.ದೇವೇಗೌಡರ ಹಾದಿಯಾಗಿ ವೇದಿಕೆ ಮೇಲಿದ್ದ ಎಲ್ಲ ಮುಖಂಡರು ಕೆಲಕಾಲ ಆತಂಕಕ್ಕೊಳಗಾದರು. ಸ್ವಲ್ಪ ಸಾವರಿಸಿಕೊಂಡು ಚೇರ್ ಮೇಲೆ ಕುಳಿತ ಅಮ್ಮಾಜಮ್ಮಗೆ ಗಾಳಿ ಬೀಸಿ ಉಸಿರಾಟಕ್ಕೆ ಅವಕಾಶ ಮಾಡಿಕೊಡಲಾಯಿತು. ವೇದಿಕೆಯಿಂದ ಅನಾಮತ್ತಾಗಿ ಎತ್ತುಕೊಂಡು ಆಂಬುಲೆನ್ಸ್‌ನಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯಕ್ಕೆ ಕರೆಯಲಾಯಿತು.
ಚುನಾವಣೆ ಘೋಷಣೆ ಸಂದರ್ಭದಲ್ಲಿ ಅಮ್ಮಾಜಮ್ಮ ಕರೊನಾ ಸೋಂಕಿಗೆ ತುತ್ತಾಗಿದ್ದರು. ನಾಮಪತ್ರವನ್ನು ಸಹ ಅವರ ಪರವಾಗಿ ಎಚ್.ಡಿ.ರೇವಣ್ಣ ಸಲ್ಲಿಸಿದ್ದರು. ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಅ.21 ರಿಂದ ಪ್ರಚಾರದಲ್ಲಿ ಕಾಣಿಸಿಕೊಂಡರು.
ಸೆರಗೊಡ್ಡಿ ಮತಯಾಚನೆ: ಸಮಾವೇಶದಲ್ಲಿ ಸೇರಿದ್ದ ಜನರ ಬಳಿ ಅಮ್ಮಾಜಮ್ಮ ಸೆರಗೊಡ್ಡಿ ಮತಯಾಚನೆ ಮಾಡಿದರು.