

ಬಂಟ್ವಾಳ: ಕಳ್ಳಿಗೆ ಗ್ರಾಮದ ಜಾರಂದಗುಡ್ಡೆ ನಿವಾಸಿ ವನಿತಾ ಶೆಟ್ಟಿ ನೂತನ ಮನೆ ನಿರ್ಮಾಣಕ್ಕೆ ಬಂಟ ಸಮುದಾಯದ ವಿವಿಧ ಸಂಘಟನೆಗಳ ಮುಂದಾಳತ್ವದಲ್ಲಿ ಗುರುವಾರ ಶಿಲಾನ್ಯಾಸ ನಡೆಯಿತು.
ಕಣಪಾಡಿ ಶ್ರೀ ವಿಷ್ಣುಮೂರ್ತಿ ದೇಗುಲದ ಅರ್ಚಕ ಶಿವರಾವ ಭಟ್ ದೇವಂದಬೆಟ್ಟು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದರು. ಗ್ರಾ.ಪಂ. ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮನೆ ನಿರ್ಮಾಣಕ್ಕೆ ಗ್ರಾ.ಪಂ. ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ರಂಗಿಪೇಟೆ ವಲಯ ಬಂಟರ ಸಂಘದ ಅಧ್ಯಕ್ಷ ದೇವದಾಸ್ ಶೆಟ್ಟಿ ಕೊಡ್ಮಾಣ್ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಿತು. ಗ್ರಾ.ಪಂ.ಸದಸ್ಯ ಮನೋಜ್, ಪ್ರಮುಖರಾದ ದಿನೇಶ್ ಶೆಟ್ಟಿ ಕೊಟ್ಟಿಂಜ, ಪ್ರತಾಪ್ ಶೆಟ್ಟಿ ಸುಜೀರ್, ಗಿರೀಶ್ ಶೆಟ್ಟಿ ಕುಂಪನಮಜಲು, ಕಿಶೋರ್, ಇಂಜಿನಿಯರ್ ಪ್ರವೀಣ್ ಶೆಟ್ಟಿ ಹಾಗೂ ವನಿತಾ ಶೆಟ್ಟಿ ಕುಟುಂಬಸ್ಥರ ಸಹಿತ ಮೊದಲಾದವರಿದ್ದರು.
ಮನೆ ಕುಸಿದು ಮೂವರು ಅಪ್ರಾಪ್ತ ಹೆಣ್ಣು ಮಕ್ಕಳೊಂದಿಗೆ ದಿಕ್ಕೆಟ್ಟು ನಿಂತ ತಾಯಿ ವನಿತಾ ಶೆಟ್ಟಿಯ ಸಂಕಷ್ಟದ ಬಗ್ಗೆ ‘ವಿಜಯವಾಣಿ’ ಆ.12ರಂದು ವರದಿ ಪ್ರಕಟವಾದ ಬೆನ್ನಲ್ಲೇ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಸಹಿತ ಸ್ಥಳೀಯಾಡಳಿತ, ಬಂಟ ಸಮುದಾಯದ ಹಲವು ಸಂಘ, ಸಂಸ್ಥೆಗಳು, ಸಮಾಜದ ಅನೇಕ ಮಂದಿ ದಿಗ್ಗಜರು, ಸಹೃದಯ ದಾನಿಗಳು ನೆರವಿಗೆ ಧಾವಿಸಿದ್ದರು. ಇದರ ಪರಿಣಾಮವಾಗಿ ಸುಸಜ್ಜಿತ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ ಗುರುವಾರ ನಡೆದಿದೆ.