ರಾಯರ ಮೂಲಬೃಂದಾವನಕ್ಕೆ ಶೇಷವಸ್ತ್ರ ಸಮರ್ಪಣೆ; ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ

Manthralaya
ತಿರುಪತಿಯಿಂದ ರಾಯರಿಗಾಗಿ ಶೇಷವಸ್ತ್ರವನ್ನು ತರಲಾಯಿತು. ಶ್ರೀ ಡಾ.ಸುಬುಧೇಂದ್ರ ತೀರ್ಥರು, ಟಿಟಿಡಿ ಎಇಒ ಧರ್ವರೆಡ್ಡಿ ಇದ್ದಾರೆ.
Published on

ರಾಯಚೂರು ಗುರುರಾಯರ 350ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ದಿನವಾದ ಮಂಗಳವಾರ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ರಾಯರ ಮೂಲ ಬೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕ ಸೇರಿ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಜರುಗಿದವು.

ಪ್ರತಿವರ್ಷದಂತೆ ತಿರುಮಲ ತಿರುಪತಿ ದೇವಸ್ಥಾನದಿಂದ ಶೇಷವಸ್ತ್ರವನ್ನು ಟಿಟಿಡಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಧರ್ವರೆಡ್ಡಿ ಮಂತ್ರಾಲಯಕ್ಕೆ ತೆಗೆದುಕೊಂಡು ಬಂದಾಗ ಸಕಲ ಮಂಗಳವಾದ್ಯಗಳೊಂದಿಗೆ ಬರಮಾಡಿಕೊಂಡ ಪೀಠಾಧಿಪತಿ ಶ್ರೀ ಡಾ.ಸುಬುಧೇಂದ್ರ ತೀರ್ಥರು, ಶೇಷವಸ್ತ್ರವನ್ನು ರಾಯರ ಮೂಲ ಬೃಂದಾವನಕ್ಕೆ ಸಮರ್ಪಿಸಿ, ಪಂಚಾಮೃತ ವಿಶೇಷ ಅಭಿಷೇಕ ನಡೆಸಿ ಪೂಜೆ ಸಲ್ಲಿಸಿದರು. ಆನಂತರ ಉತ್ಸವ ಮೂರ್ತಿ ಪ್ರಹ್ಲಾದ ರಾಜರ ಪಾದಪೂಜೆ, ಮೂಲ ರಾಮದೇವರ ಪೂಜೆ ನೆರವೇರಿಸಿ, ಭಕ್ತರಿಗೆ ಫಲ-ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಆನಂತರ ಸುವರ್ಣ ರಥದಲ್ಲಿ ಗುರುರಾಯರ ಪಾದುಕೆಗಳನ್ನಿಟ್ಟು ಶ್ರೀಮಠದ ಪ್ರಾಕಾರದಲ್ಲಿ ರಥೋತ್ಸವ ನಡೆಸಲಾಯಿತು.

ಮೊದಲಿಂದಲೂ ಇದೆ ಅವಿನಾಭಾವ ಸಂಬಂಧ: ತಿರುಮಲ ತಿರುಪತಿ ದೇವಸ್ಥಾನ ಮತ್ತು ಶ್ರೀ ರಾಘವೇಂದ್ರ ಸ್ವಾಮಿ ಮಠದ ನಡುವೆ ಅವಿನಾಭಾವ ಸಂಬಂಧ ಅನಾದಿ ಕಾಲದಿಂದಲೂ ಮುಂದುವರಿದುಕೊಂಡು ಬಂದಿದೆ ಎಂದು ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಹೇಳಿದರು. ಟಿಟಿಡಿಯಿಂದ ತರಲಾದ ಶೇಷವಸ್ತ್ರವನ್ನು ರಾಯರಿಗೆ ಸಮರ್ಪಿಸಿದ ನಂತರ ಆಶೀರ್ವಚನ ನೀಡಿದರು. ತಿರುಪತಿ ತಿಮ್ಮಪ್ಪ, ರಾಯರು ಒಂದು ನಾಣ್ಯದ ಎರಡು ಮುಖಗಳಾಗಿದ್ದು, ಭಗವಂತ ಸರ್ವಸಮರ್ಥನಾದರೂ ಗುರುಗಳ ಮೂಲಕ ಅನುಗ್ರಹ ನೀಡುತ್ತಾನೆ. ಅದರಂತೆ ತಿಮ್ಮಪ್ಪ ತಮ್ಮ ಪರಮಭಕ್ತ ರಾಯರ ಮೂಲಕ ಭಕ್ತರಿಗೆ, ನಮಗೆಲ್ಲ ಅನುಗ್ರಹ ನೀಡುತ್ತಾನೆ ಎಂದರು.

ಹರಿದಾಸ ಮ್ಯೂಜಿಯಂ: ಹರಿದಾಸರ ಜೀವನ, ಸಾಹಿತ್ಯ ಮತ್ತು ಅವರು ಬಳಸಿದ ವಸ್ತುಗಳ ಸಂಪೂರ್ಣ ಮಾಹಿತಿ ಅರಿಯಬೇಕಾದರೆ ಮಂತ್ರಾಲಯ ಶ್ರೀಮಠದಿಂದ ನಿರ್ವಿುಸಲಾದ ಹರಿದಾಸ ಮ್ಯೂಜಿಯಂಗೆ ಭೇಟಿ ನೀಡಲೇಬೇಕು. ಶ್ರೀಮಠದ ಪಕ್ಕದ ರಂಗಸಭಾ ಭವನದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ಮ್ಯೂಜಿಯಂ ನಿರ್ವಿುಸಲಾಗಿದೆ. ಹರಿದಾಸರ ಜೀವನ ಚರಿತ್ರೆ ಜತೆಗೆ ವೈಕುಂಠ ದೇವರ ಮಾದರಿಗಳು, ಧಾರ್ವಿುಕ ಸಂದೇಶಗಳನ್ನು ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್​ನಲ್ಲಿ ಕಾಣಬಹುದಾಗಿದೆ. ಎರಡು ಮಹಡಿಯ ಮ್ಯೂಜಿಯಂ ಅನ್ನು ರಾಯರ 350ನೇ ಆರಾಧನೆ ಮಹೋತ್ಸವ ಸಂದರ್ಭ ಲೋಕಾರ್ಪಣೆ ಮಾಡಲಾಗಿದೆ.

ಶ್ರೀಗಳ ಆಜ್ಞೆಯಂತೆ ಸತತ ನಾಲ್ಕು ವರ್ಷಗಳ ಕಾಲ ದಾಸರು ಜನಿಸಿದ, ನಡೆದಾಡಿದ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕೆಲಸ ಮಾಡಲಾಗಿದೆ. ಜತೆಗೆ ಬೃಂದಾವನ, ವಿಷ್ಣುವಿನ ಬೇರೆ ನಾಮಗಳ ಕುರಿತು ಮಾಹಿತಿಯನ್ನು ಮ್ಯೂಜಿಯಂನಲ್ಲಿ ನೀಡಲಾಗಿದೆ.

| ಅಪ್ಪಣ್ಣಾಚಾರ್ಯ ಮುಖ್ಯಸ್ಥ, ಶ್ರೀ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್, ಮಂತ್ರಾಲಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net