

ಸಿಂಧನೂರು: ಇತ್ತೀಚೆಗೆ ಸುರಿದ ಮಳೆ ಹಾಗೂ ಬಿರುಗಾಳಿಯಿಂದ ಆಶ್ರಯ ಕಳೆದುಕೊಂಡ ನಗರದ 25ನೇ ವಾರ್ಡ್‌ನ ಸಂತ್ರಸ್ತರಿಗೆ ನಗರಸಭೆಯಿಂದ ಮಂಗಳವಾರ ನೆರವು ನೀಡಲಾಯಿತು.
ಇದನ್ನೂ ಓದಿ: ದಾಬಸ್ಪೇಟೆಯಲ್ಲಿ ಮಳೆಗೆ ಪರದಾಡಿದ ಜನ
ಗಾಳಿ-ಮಳೆಗೆ ಮೈಮೂದಾಬೇಗಂ, ರಂಜಾನಬೀ, ಅಕ್ಷತಾ, ಭಾಗಮ್ಮ ಹಾಗೂ ಉಷಾ ಅವರ ಟಿನ್ ಶೆಡ್ ಮನೆಗಳು ಹಾನಿಗೀಡಾಗಿದ್ದು, ಸೂರು ಇಲ್ಲದಂತಾಗಿದೆ. ಹೀಗಾಗಿಪ್ರತಿಯೊಬ್ಬ ಸಂತ್ರಸ್ತರಿಗೆ ಪ್ರತ್ಯೇಕವಾಗಿ ನಗರಸಭೆಯ ತುರ್ತು ನಿಧಿಯಡಿ ಐದು ಸಾವಿರ ರೂ. ಚೆಕ್ ವಿತರಿಸಲಾಯಿತು.
ನಗರಸಭೆ ಉಪಾಧ್ಯಕ್ಷೆ ಮಂಜುಳಾ ಪ್ರಭುರಾಜ ಮಾತನಾಡಿ, ನಾವು ನಿಮ್ಮೊಂದಿಗಿದ್ದೇವೆ. ಸೂರು ಕಳೆದುಕೊಂಡ ನಿಮಗೆ ಶೀಘವೇ ಅಗತ್ಯ ವ್ಯವಸ್ಥೆ ಮಾಡಲಾಗುವುದು. ಈ ಸಲ ಆಶ್ರಯ ಸಮಿತಿ ಸಭೆಯಲ್ಲಿ ನಿಮಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ ಹಟ್ಟಿ ಮಾತನಾಡಿ, ನಗರಸಭೆಯ ತುರ್ತು ಪರಿಹಾರ ನಿಧಿಯಡಿ ಪರಿಹಾರ ವಿತರಿಸಲಾಗಿದೆ. ಇದನ್ನು ದೈನಂದಿನ ಜೀವನಕ್ಕೆ ಬಳಸಿಕೊಳ್ಳಬಹುದು. ನಗರಸಭೆ ನಿಮ್ಮೊಂದಿಗಿದೆ ಎಂದರು. ಸದಸ್ಯರಾದ ಚಂದ್ರಶೇಖರ ಮೈಲಾರ, ಸುರೇಶ ಜಾಧವ್, ದತ್ತುರಾಜು, ಪ್ರಭುರಾಜ, ಅಮ್ಜದ್‌ಖಾನ್, ಗಂಗಾಧರ, ಮಂಜು ರಾಥೋಡ್, ಪೌರಾಯುಕ್ತ ಮಂಜುನಾಥ ಗುಂಡೂರ ಇದ್ದರು.