ಪ್ರವಾಸಿಗರಿಗೆ ಅಂಬೇಡ್ಕರ್ ಭವನದಲ್ಲಿ ಆಶ್ರಯ

25-GPT-1
Published on

ಗುಂಡ್ಲುಪೇಟೆ: ಬಂಡೀಪುರದಲ್ಲಿ ಬಸ್ ಅಪಘಾತಕ್ಕೊಳಗಾಗಿ ಅತಂತ್ರರಾಗಿದ್ದ ಪಶ್ಚಿಮ ಬಂಗಾಳದ ಪ್ರವಾಸಿಗರಿಗೆ ಜಿಲ್ಲಾಡಳಿತದಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಶ್ರಯ ಕಲ್ಪಿಸಿಕೊಡಲಾಗಿದೆ.


ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಸುತ್ತಲಿನ 73 ಪ್ರವಾಸಿಗರು ಅ.11ರಂದು ಒಂದು ತಿಂಗಳ ದಕ್ಷಿಣ ಭಾರತ ಪ್ರವಾಸಕ್ಕೆ ಹೊರಟಿದ್ದರು. ಮಂಗಳವಾರ ಊಟಿಯಿಂದ ಮೈಸೂರಿನತ್ತ ತೆರಳುವಾಗ ಸಂಜೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ಬಂಡೀಪುರದ ಇಳಿಜಾರು ರಸ್ತೆಯಲ್ಲಿ ಮಗುಚಿ ಬಿದ್ದು 30 ಜನ ಗಾಯಗೊಂಡಿದ್ದರು. ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ತೀವ್ರ ಗಾಯಗೊಂಡಿದ್ದವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.


ಮಂಗಳವಾರ ರಾತ್ರಿ ಜಿಲ್ಲಾಧಿಕಾರಿ ಶಿಲ್ಪಾನಾಗ್, ತಹಸೀಲ್ದಾರ್ ರಮೇಶ್ ಬಾಬು ಆಸ್ಪತ್ರೆಗೆ ಭೇಟಿ ನೀಡಿ ಪ್ರವಾಸಿಗರ ಯೋಗಕ್ಷೇಮ ವಿಚಾರಿಸಿದರು. ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಜಿಲ್ಲಾಧಿಕಾರಿಗಳ ಜತೆ ಮಾತನಾಡಿ ಪ್ರವಾಸಿಗರ ಸುರಕ್ಷತೆ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡಿದರು.
ಸದ್ಯ ಬಸ್‌ನಲ್ಲಿದ್ದ ಅಡುಗೆ ಭಟ್ಟರು ಸೇರಿದಂತೆ ಇತರ 43 ಪ್ರಯಾಣಿಕರನ್ನು ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಿ ಆಶ್ರಯ ನೀಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಎಲ್ಲರ ಆರೋಗ್ಯ ತಪಾಸಣೆ ಮಾಡಿದರು. ಜಿಲ್ಲಾಡಳಿತದಿಂದ ಊಟದ ವ್ಯವಸ್ಥೆ ಮಾಡಲಾಗಿದೆ.


ಭವನದಲ್ಲಿ ಆಶ್ರಯ ಪಡೆದಿರುವ ಪ್ರವಾಸಿಗರನ್ನು ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್, ಎಸ್.ಪಿ.ಪದ್ಮಿನಿ ಸಾಹು, ಡಿವೈಎಸ್‌ಪಿ ಲಕ್ಷ್ಮಯ್ಯ, ಸರ್ಕಲ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಂಜುನಾಥ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಬಂಡೀಪುರ ರಸ್ತೆಯಲ್ಲಿ ಮಗುಚಿ ಬಿದ್ದಿದ್ದ ಬಸ್ ಅನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕ್ರೇನ್ ಸಹಾಯದಿಂದ ಮೇಲೆತ್ತಿಸಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿ, ಇನ್ಸ್‌ಪೆಕ್ಟರ್ ಯೋಗೇಶ್ ವಾಹನ ತಪಾಸಣೆ ಮಾಡಿದರು. ಹಳ್ಳಕ್ಕೆ ಬಿದ್ದ ಬಸ್ಸನ್ನು ಮೇಲೆತ್ತುವ ಕಾರ್ಯಾಚರಣೆ ಸಂದರ್ಭದಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಸುಮಾರು ಒಂದು ಗಂಟೆ ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಸುಸ್ಥಿತಿಯಲ್ಲಿಲ್ಲದ ಎಕ್ಸ್-ರೇ ಯಂತ್ರ: ಮಂಗಳವಾರ ರಾತ್ರಿ ಅಪಘಾತದಲ್ಲಿ ಹಲವಾರು ಪ್ರಯಾಣಿಕರು ಮೂಳೆ ಮುರಿತಕ್ಕೊಳಗಾಗಿದ್ದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಮೂಳೆ ವೈದ್ಯ ಡಾ.ಮೇಜರ್ ಗಿರೀಶ್ ಕರ್ತವ್ಯದಲ್ಲಿದ್ದರೂ ಆಸ್ಪತ್ರೆಯ ಎಕ್ಸ್-ರೇ ಯಂತ್ರ ಕೆಟ್ಟಿದ್ದರಿಂದ ಗಾಯಾಳುಗಳಿಗೆ ಸಮರ್ಪಕ ಚಿಕಿತ್ಸೆ ಕೊಡಲು ಸಾಧ್ಯವಾಗದೆ ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net