ಅನಧಿಕೃತ ವ್ಯಾಪಾರಿಗಳಿಗಿಲ್ಲ ಮೂಗುದಾರ! : ಲೋಕೋಪಯೋಗಿ ಇಲಾಖೆ ಜಾಗದಲ್ಲಿ ಶೆಡ್ ನಿರ್ಮಾಣ : ತೆರವುಗೊಳಿಸಲು ಸಾರ್ವಜನಿಕರ ಪಟ್ಟು

02
Published on

ಪುರುಷೋತ್ತಮ ಪೆರ್ಲ ಕಾಸರಗೋಡು

ಜಿಲ್ಲೆಯ ಹಲವೆಡೆ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗ ಕಬಳಿಸಿ ಬಳಿಕ ಅದರಲ್ಲಿ ಕಟ್ಟಡ ಹಾಗೂ ತಾತ್ಕಾಲಿಕ ಶೆಡ್‌ಗಳ ನಿರ್ಮಾಣ ಮಾಡಿ ವ್ಯಾಪಾರ ನಡೆಸಲಾಗುತ್ತಿದೆ. ಚೆರ್ಕಳ- ಕಲ್ಲಡ್ಕ ರಸ್ತೆಯ ಪೆರ್ಲ ಹಳೇ ರಸ್ತೆಗೆ ಸಮೀಪ ಬೃಹತ್ ತಾತ್ಕಾಲಿಕ ಕಟ್ಟಡ ತಲೆ ಎತ್ತಿದ್ದು, ಕೂಡಲೇ ಇವುಗಳೆಲ್ಲವನ್ನೂ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬಹುತೇಕ ಕಡೆಗಳಲ್ಲಿ ಮಾನದಂಡ ಉಲ್ಲಂಘಿಸಿ ಕಟ್ಟಡಗಳ ಆವರಣಗೋಡೆ ನಿರ್ಮಿಸಲಾಗುತ್ತಿದ್ದು, ಹೆದ್ದಾರಿಗಳ ಅಂಚಿನಲ್ಲಿ ಕಟ್ಟಡಗಳ ನಿರ್ಮಾಣ ಸಂದರ್ಭ ನಿಗದಿತ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮವನ್ನು ಗಾಳಿಗೆ ತೂರಲಾಗಿದೆ. ಕಾಸರಗೋಡು ಹಳೇ ಬಸ್ ನಿಲ್ದಾಣದ ಬೀದಿಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದವರಿಗೆ ಹೊಸ ಬಸ್ ನಿಲ್ದಾಣ ವಠಾರದ ವಾಣಿಜ್ಯ ಸಂಕೀರ್ಣದಲ್ಲಿ ಅವಕಾಶ ನೀಡಲಾಗಿದ್ದರೂ ಕೆಲವರು ಮತ್ತೆ ಬೀದಿಬದಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಥಳೀಯಾಡಳಿತದ ಇಬ್ಬಗೆ ನೀತಿಯು ವಾಹನ ಸಂಚಾರ ಸಮಸ್ಯೆ ಸಹಿತ ವಿವಿಧ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತಿದೆ.

ಪೆರ್ಲ ಆಸುಪಾಸು ಇದೇ ರೀತಿಯ ಸಮಸ್ಯೆ ತಲೆದೋರಿದ್ದು, ಇಡಿಯಡ್ಕ, ಪೆರ್ಲ ಪೇಟೆಯಿಂದ ಮರ್ತ್ಯವರೆಗೂ ರಸ್ತೆ ಅಂಚಿನಲ್ಲಿ ಅನಧಿಕೃತ ಶೆಡ್‌ಗಳಲ್ಲಿ ವ್ಯಾಪಾರಿಗಳು ಕಾರ್ಯಾಚರಿಸುತ್ತಿದ್ದಾರೆ. ಅಧಿಕೃತ ವ್ಯಾಪಾರಸ್ಥರು ಇದನ್ನು ವಿರೋಧಿಸಿದ್ದು, ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಸ್ಥಳೀಯಾಡಳಿತ ಕ್ರಮ ಕೈಗೊಳ್ಳದೆ ತಟಸ್ಥವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸರ್ಕಾರದಿಂದ ಪರಿಹಾರಕ್ಕೆ ಪಟ್ಟು

ತಾತ್ಕಾಲಿಕ ಶೆಡ್ ನಿರ್ಮಿಸಿ ವ್ಯಾಪಾರ ನಡೆಸುವವರು ಕೂಡ ಪ್ರತಿಕ್ರಿಯಿಸಿದ್ದು, ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಸ್ಥಳದಿಂದ ತಮ್ಮನ್ನು ತೆರವುಗೊಳಿಸುವ ಮೊದಲು ಅಧಿಕಾರಿಗಳು, ಸರ್ಕಾರ ಅಥವಾ ಇಲಾಖೆ ವತಿಯಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಪಟ್ಟುಹಿಡಿದಿದ್ದಾರೆ.

ಪೇಟೆಯಲ್ಲಿ ಮೀನು ಮಾರಾಟಕ್ಕಾಗಿ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಇದರಿಂದ ಹಲವೆಡೆ ರಸ್ತೆ ಅಂಚಿಗೇ ಮೀನು ಮಾರಾಟ ನಡೆಸಲಾಗುತ್ತಿದೆ. ಅನಧಿಕೃತ ವ್ಯಾಪಾರಸ್ಥರು, ಶೆಡ್‌ಗಳ ವಿರುದ್ಧ ಸ್ಥಳಿಯಾಡಳಿತ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಸಂಶಯ ಬರುತ್ತಿದೆ. ರಾಜಾರಾಮ ಶೆಟ್ಟಿ ಕಾಟುಕುಕ್ಕೆ, ಅಧ್ಯಕ್ಷರು, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಪೆರ್ಲ ಯೂನಿಟ್ ಪೆರ್ಲ ಚೆಕ್‌ಪೋಸ್ಟ್ ಸಮೀಪ ಅನಧಿಕೃತ ವ್ಯಾಪಾರಿ ಸಂಸ್ಥೆಗಳ ಬಗ್ಗೆ ದೂರು ಲಭಿಸಿದ್ದು, ಈ ಬಗ್ಗೆ ಇಲಾಖೆಗೆ ಸಂಬಂಧಿಸಿದ ಜಾಗವನ್ನು ಅಳತೆ ಮಾಡಿ ನೀಡಲು ಕಂದಾಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಜಾಗದಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಭರತನ್ ಆರ್., ಸಹಾಯಕ ಅಭಿಯಂತ, ಲೋಕೋಪಯೋಗಿ ಇಲಾಖೆ, ಬದಿಯಡ್ಕ ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net