ಬೆಂಗಳೂರು ರೈಲು ನಿಲ್ದಾಣಕ್ಕೆ 2 ಗಂಟೆ ಕಾಲ ತಡವಾಗಿ ಬಂದ ಶತಾಬ್ದಿ ಎಕ್ಸ್​ಪ್ರೆಸ್​:ಪ್ರಯಾಣಿಕರ ಪರದಾಟ

train
Published on

ಬೆಂಗಳೂರು:ತಾಂತ್ರಿಕ ದೋಷದಿಂದ ಗೂಡ್ಸ್​ ರೈಲು ಕೆಟ್ಟು ನಿಂತ ಕಾರಣ ನಿಗದಿತ ಸಮಯಕ್ಕೆ ಮೈಸೂರುನಿಂದ ಬೆಂಗಳೂರಿಗೆ ತೆರಳಬೇಕಿದ್ದ ಶತಾಬ್ದಿ ಎಕ್ಸ್​ಪ್ರೆಸ್​ ಸೇರಿ ಮೂರು ರೈಲುಗಳು 2 ಗಂಟೆ ತಡವಾಗಿ ಆಗಮಿಸಿದ್ದ ಘಟನೆ ಬುಧವಾರ ನಡೆಯಿತು.

ಮೈಸೂರು ಜಂಕ್ಷನ್​ನಿಂದ ಮಧ್ಯಾಹ್ನ 2.15ಕ್ಕೆ ಹೊರಟಿದ್ದ ಶತಾಬ್ದಿ ಎಕ್ಸ್​ಪ್ರೆಸ್​,4.10ಕ್ಕೆ "ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ರೈಲು ನಿಲ್ದಾಣಕ್ಕೆ ತಲುಪಬೇಕಿತ್ತು. ಆದರೆ, ಗೂಡ್ಸ್​ ರೈಲು ಕೆಟ್ಟು ನಿಂತಿದ್ದರಿಂದ ಹೆಜ್ಜಾಲ ರೈಲು ನಿಲ್ದಾಣದಲ್ಲಿ ಶತಾಬ್ದಿ ಎಕ್ಸ್​ಪ್ರೆಸ್​, ಸತತ ಒಂದೂವರೆ ಗಂಟೆ ಕಾಲ ನಿಂತಿತ್ತು. ಇದರಿಂದಾಗಿ ಬೇರೆ ಕಡೆ ತೆರಳಬೇಕಿದ್ದ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದರು. ಕೆಲವರು ಅರ್ಧ ದಾರಿಯಲ್ಲೇ ಇಳಿದು ತಾತ್ಕಾಲಿಕವಾಗಿ ಕ್ಯಾಬ್​ ಮಾಡಿಕೊಂಡು ಗಮ್ಯ ಸ್ಥಳಕ್ಕೆ ತಲುಪಿದರು.

ಇನ್ನೂ ಕೆಲವರು ರೈಲ್ವೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಈ ರೈಲು ಕ್ರಾಂತಿವೀರ 6.15ಕ್ಕೆ ಸಂಗೊಳ್ಳಿ ರಾಯಣ್ಣ' ರೈಲು ನಿಲ್ದಾಣಕ್ಕೆ ತಲುಪಿತ್ತು. ಬೆಂಗಳೂರುನಿಂದ ಚೆನ್ನೈಗೆ ತೆರಳಲು ಶತಾಬ್ದಿ ಎಕ್ಸ್​ಪ್ರೆಸ್​ಗಾಗಿ ಕಾಯುತ್ತಿದ್ದ ನೂರಾರು ಪ್ರಯಾಣಿಕರು ರೈಲು ನಿಲ್ದಾಣದಲ್ಲಿ ತೊಂದರೆಗೆ ಸಿಲುಕಿದ್ದರು. ಅಲ್ಲದೆ, ರಾಜ್ಯರಾಣಿ ಎಕ್ಸ್​ಪ್ರೆಸ್​, ಕಾಚಿಗುಡ ಎಕ್ಸ್​ಪ್ರೆಸ್​ ಸೇರಿ ಇತರೆ ರೈಲುಗಳ ಸಹ ನಿಗದಿತ ಸಮಯದ ಬದಲು ಒಂದು ಗಂಟೆ ಕಾಲ ವಿಳಂಬವಾಗಿ ನಿಲ್ದಾಣಕ್ಕೆ ಆಗಮಿಸಿದ್ದವು.

ವೈಯಕ್ತಿಕ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಲು ಟಿಕೆಟ್​ ಬುಕ್​ ಮಾಡಿ ಶತಾಬ್ದಿ ಎಕ್ಸ್​ಪ್ರೆಸ್​ನಲ್ಲಿ ಪ್ರಯಾಣಿಸುತ್ತಿದ್ದೆ. ಆದರೆ, ಹೆಜ್ಜಾಲ ರೈಲು ನಿಲ್ದಾಣದಲ್ಲಿ ಈ ರೈಲು ಒಂದೂವರೆ ಗಂಟೆ ನಿಂತಿದ್ದರಿಂದ ನಿಗದಿತ ಸಮಯಕ್ಕೆ ತೆರಳಲು ನಮಗೆ ಸಾಧ್ಯವಾಗಲಿಲ್ಲ. ಈ ಬಗ್ಗೆ ಯಾರನ್ನೂ ಕೇಳಬೇಕು ಎಂಬುದರ ಬಗ್ಗೆ ಗೊತ್ತಿಲ್ಲ. ತಡವಾಗಿ ಬೆಂಗಳೂರು ರೈಲು ನಿಲ್ದಾಣಕ್ಕೆ ಬಂತು. ಕೆಲ ಪ್ರಯಾಣಿಕರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳಬೇಕಿತ್ತು. ಅವರಿಗೂ ತೊಂದರೆಯಾಯಿತು.

|ಸತೀಶ್​, ಪ್ರಯಾಣಿಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net