ಸುಡುಬಿಸಿಲಿನ ಬೇಗೆಗೆ ಜನರು ತತ್ತರ:ಬೇಸಿಗೆ ಆರಂಭದಲ್ಲೇ ಅಧಿಕ ಉಷ್ಣಾಂಶ

Heat waves
Published on

ಬೆಂಗಳೂರು:ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಿದೆ. ಬೇಸಿಗೆ ಆರಂಭದಲ್ಲೇ ಸುಡುಬಿಸಿಲಿನ ಬೇಗೆಗೆ ಜನರು ತತ್ತರಿಸಿದ್ದಾರೆ.

ಕಲಬುರಗಿ, ಕೊಪ್ಪಳ, ಬಾಗಲಕೋಟೆ, ಗದಗ, ದಾವಣಗೆರೆ,ವಿಜಯಪುರ ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ 34-35ರ ಆಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುತ್ತಿದೆ. ಈ ಜಿಲ್ಲೆಗಳಲ್ಲಿ ವಾಡಿಕೆಗಿಂತ 1-2 ಡಿ.ಸೆ.ಅಧಿಕವಾಗಿದೆ. ಬೆಂಗಳೂರು, ಬೆಂ.ಗ್ರಾಮಾಂತರ, ಶಿವಮೊಗ್ಗ, ಮಂಡ್ಯ, ಮೈಸೂರು, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ತುಮಕೂರು ಸೇರಿ ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ 32&33ರ ಆಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುತ್ತಿದೆ. ಬುಧವಾರ ಕಾರವಾರದಲ್ಲಿ 37.6, ಹೊನ್ನಾವರ 35.9, ಪಣಂಬೂರು 37.2 ಡಿ.ಸೆ.ಉಷ್ಣಾಂಶ ವರದಿಯಾಗಿದೆ. ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಭಾಗದ ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಝಳ ಹೆಚ್ಚಳವಾಗಿದ್ದು, ಜನರಿಗೆ ಆತಂಕ ಸೃಷ್ಟಿಸಿದೆ.

ವಾರ ಪೂರ್ತಿ ಬಿಸಿಲು:ವಾಡಿಕೆಯಂತೆ ಮಾ.1ರಿಂದ ಬೇಸಿಗೆ ಆರಂಭವಾಗುತ್ತದೆ. ಮೇ.31ರವರೆಗೆ ಇದು ಮುಂದುವರಿಯಲಿದೆ. ಆದರೆ, ಈ ಬಾರಿ ವಾಡಿಕೆಗಿಂತ ಮುನ್ನವೇ ಶುರುವಾಗಿದೆ. ಈಗಾಗಲೇ ರಾಜ್ಯದ ಶೇ.70 ಪ್ರದೇಶಗಳಲ್ಲಿ ಬಿಸಿಲಿನ ಪ್ರಖರತೆ ಏರಿಕೆಯಾಗಿದೆ. ಬೆಂಗಳೂರಿನಲ್ಲೂ ವಾರ ಪೂರ್ತಿ ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ಕಳೆದ ವಾರಾಂತ್ಯದಲ್ಲಿ ಉದ್ಯಾನನಗರಿಯಲ್ಲಿ 2 ಡಿ.ಸೆ.ತಾಪಮಾನ ಹೆಚ್ಚಳವಾಗಿದ್ದು, ಬೆಚ್ಚಗಿನ ವಾತಾವರಣ ಕಾಣಿಸಿಕೊಂಡಿದೆ. ತಮಿಳುನಾಡಿನಲ್ಲಿ ಪೂರ್ವ ಮಾರುತಗಳು ಬೀಸುತ್ತಿರುವ ಪರಿಣಾಮ ಬೆಂಗಳೂರು ಸೇರಿ ದಕ್ಷಿಣ ರಾಜ್ಯದ ಭಾಗಗಳಲ್ಲಿ ಸೆಖೆ ಕಾಣಿಸಿಕೊಂಡಿದೆ.

ಮುಂದಿನ ವಾರ 40 ಡಿ.ಸೆ.ದಾಖಲು?

ವಿಜಯಪುರ, ಕಲಬುರಗಿ, ಯಾದಗಿರಿ, ಧಾರವಾಡ, ಹಾವೇರಿ, ಕೊಪ್ಪಳ, ಬೀದರ್​, ಬೆಳಗಾವಿ, ರಾಯಚೂರು, ಗದಗ, ಬಾಗಲಕೋಟೆ,ಮೈಸೂರು, ಶಿವಮೊಗ್ಗ, ಬೆಂಗಳೂರು, ಚಾಮರಾಜನಗರ, ಮಂಡ್ಯ, ಹಾಸನ, ದಾವಣಗೆರೆ ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಮುಂದಿನ ತಿಂಗಳ ಮೊದಲ ವಾರ ಗರಿಷ್ಠ ತಾಪಮಾನದಲ್ಲಿ 40 ಡಿ.ಸೆ. ದಾಟುವ ಸಾಧ್ಯತೆ ಇದೆ. ಜಾಗತಿಕ ತಾಪಮಾನ ಏರಿಕೆ, ತೇವಾಂಶ ಕೊರತೆ, ಶುಭ್ರ ಆಕಾಶ, ಒಣಗಾಳಿ ಬೀಸುವುದೂ ಸೇರಿ ವಿವಿಧ ಕಾರಣಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳ ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 3&4 ಡಿ. ಸೆ.ಉಷ್ಣಾಂಶ ಹೆಚ್ಚಳವಾಗಿದೆ. ಪ್ರಸಕ್ತ ತಿಂಗಳಲೇ ಸುಡು ಬಿಸಿಲು ಕಾಣಿಸಿಕೊಂಡಿದ್ದು, ಏಪ್ರಿಲ್​ನಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್​ನಲ್ಲಿ ಅಧಿಕವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net