

ಎನ್.ಆರ್.ಪುರ: ಧಾರಾವಾಹಿಗಳು ಸಂಸ್ಕೃತಿ ಹೆಸರಿನಲ್ಲಿ ಮಹಿಳೆಯರನ್ನು ಮೌಢ್ಯರನ್ನಾಗಿ ಮಾಡಿ ಶೋಷಣೆ ಮಾಡುತ್ತಿವೆ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಟಿ.ರಾಜೇಂದ್ರ ಕಳವಳ ವ್ಯಕ್ತಪಡಿಸಿದರು.
ಭಾನುವಾರ ತಾಲೂಕು ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಅಕ್ಷತಾ ಪಾಂಡವಪುರ ಅವರ ಲೀಕ್‌ಔಟ್ ಕಥೆ ಆಧಾರಿತ ಆಕೆಯಾಂತರಾಳ (ಒಗ್ಗರಣೆ ಮಾತು) ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ನಾಟಕಗಳ ಪ್ರದರ್ಶನ ಕಡಿಮೆಯಾಗುತ್ತಿದೆ. ನಾಟಕಗಳಿಂದ ಜನರು ಹೆಚ್ಚು ಕ್ರಿಯಾಶೀಲರಾಗಬಹುದು. ಅಕ್ಷತಾ ಪಾಂಡವಪುರ ಅವರು ಸ್ತ್ರೀ ತಲ್ಲಣ, ಮೌಢ್ಯದ ಬಗ್ಗೆ 8 ಕಥೆಯುಳ್ಳ ಪುಸ್ತಕ ಬರೆದಿದ್ದಾರೆ. ಅದನ್ನು ನಾಟಕಗಳ ಮೂಲಕ ಜನರಿಗೆ ಸಂದೇಶ ನೀಡುತ್ತಿದ್ದಾರೆ. ಇದೊಂದು ಪ್ರಯೋಗವಾಗಿದೆ. ಇಂಥ ಪ್ರಯೋಗಾತ್ಮಕ ನಾಟಕಗಳ ಮೂಲಕ ಜನರನ್ನು ಕ್ರಿಯಾಶೀಲರನ್ನಾಗಿ ಮಾಡುವುದೇ ಅವರ ಉದ್ದೇಶ. ರಂಗ ಭೂಮಿಯ ಕೆಲವು ಕಲಾವಿದರು ನಾಟಕಗಳಲ್ಲೂ ಹಲವಾರು ಬದಲಾವಣೆ ತಂದಿದ್ದಾರೆ ಎಂದರು.
ತಾಲೂಕು ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶ್ಯಾಮಲಾ ಸತೀಶ್ ಮಾತನಾಡಿ, ಎನ್.ಆರ್.ಪುರದಲ್ಲಿ ನಾಟಕಗಳು ವಿರಳವಾಗಿವೆ. ತೀರ್ಥಹಳ್ಳಿ ಭಾಗದಲ್ಲಿ ಹೆಚ್ಚು ನಾಟಕ ಪ್ರದರ್ಶನವಾಗುತ್ತಿತ್ತು. ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಪ್ರಾರಂಭದ ವಷರ್ದಲ್ಲಿ ನಾಟಕ ಪ್ರದರ್ಶನ ನಡೆಸಿದ್ದೆವು. ಅಕ್ಷತಾ ಪಾಂಡವಪುರ ಅವರ ನಾಟಕಗಳಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ಇದೆ. ಸಮಾಜದಲ್ಲಿ ಮಹಿಳೆಯರ ಶೋಷಣೆ ಬಗ್ಗೆ ನಾಟಕಗಳ ಮೂಲಕ ಅನಾವರಣಗೊಳಿಸುತ್ತಾರೆ ಎಂದರು.
ಕಣಿವೆ ನಾಗಚಂದ್ರ ಪ್ರತಿಷ್ಠಾನದ ಅಧ್ಯಕ್ಷ ಕಣಿವೆ ವಿನಯ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಬಹಳ ವರ್ಷಗಳ ಹಿಂದೆ ನಾಟಕಗಳು ನಡೆಯುತ್ತಿದ್ದವು. ಟಿವಿ, ಮೊಬೈಲ್ ಬಂದ ನಂತರ ನಾಟಕಗಳ ಪ್ರದರ್ಶನ ಇಲ್ಲದಂತಾಯಿತು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಜಿ.ಆರ್.ದಿವಾಕರ, ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್, ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್, ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಿ.ಸಿ.ದಿವಾಕರ, ಇನ್ನರ್‌ವ್ಹೀಲ್ ಸಂಸ್ಥೆ ಅಧ್ಯಕ್ಷೆ ಬಿಂದು ವಿಜಯ, ಸೀನಿಯರ್ ಚೇಂಬರ್ ಕಾರ್ಯದರ್ಶಿ ಎಸ್.ವಿದ್ಯಾನಂದಕುಮಾರ್, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಗೌರವಾಧ್ಯಕ್ಷೆ ವನಮಾಲಮ್ಮ, ಕಾರ್ಯದರ್ಶಿ ಭಾರತಿ ಚಂದ್ರು, ಸಹ ಕಾರ್ಯದರ್ಶಿ ಶೀಲಾ ಸುಂದರೇಶ್, ಕಲಾವಿದ ಸತೀಶ್ ಆಚಾರ್, ಚೈತ್ರಾ ರಮೇಶ್ ಇದ್ದರು.