

ಚನ್ನರಾಯಪಟ್ಟಣ: ತಾಲೂಕಿನ ಪುರಾಣ ಪ್ರಸಿದ್ಧ ಕ್ಷೇತ ಕುಂದೂರು ಮಠದಲ್ಲಿ ಡಿ.17ರಿಂದ 20ರವರೆಗೆ ಕ್ಷೇತ್ರದ ಸುಬ್ರಹ್ಮಣ್ಯೇಶ್ವರ ಮತ್ತು ರಂಗನಾಥಸ್ವಾಮಿಯ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಆದಿಚುಂಚನಗಿರಿ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು.
ಶ್ರೀಕ್ಷೇತ್ರ ಕುಂದೂರು ಮಠದಲ್ಲಿ ಡಿ.17ರಂದು ಬೆಳಗ್ಗೆ 10.30ಕ್ಕೆ ಆದಿಚುಂಚನಗಿರಿ ಸಂಸ್ಥಾನಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಗೋಪೂಜೆ ನೆರವೇರಿಸಿ, ಸುಬ್ರಹ್ಮಣ್ಯೇಶ್ವರ, ರಂಗನಾಥಸ್ವಾಮಿ, ಈಶ್ವರನಿಗೆ ಪೂಜೆ ಸಲ್ಲಿಸಿ ಧರ್ಮ ಧ್ವಜಾರೋಹಣ ಸ್ಥಾಪಿಸುವ ಮೂಲಕ ಷಷ್ಠಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೊದಲ ದಿನ ಮೆಳಿಯಮ್ಮ ದೇವಿಯ ಸನ್ನಿಧಿಯಲ್ಲಿ ಪುಣ್ಯಾಹ್ನಃ ಗಣಪತಿ ಹೋಮ, ವಾಸ್ತುಹೋಮ, ಮೃತ್ಯುಂಜಯ ಹೋಮ, ದುರ್ಗಾಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ಲಲಿತ ಸಹಸ್ರನಾಮ, ಸುಮಂಗಲಿಯರಿಂದ ಸಾಮೂಹಿಕ ಕುಂಕುಮಾರ್ಚನೆ ನಂತರ ರಥಕ್ಕೆ ನವಕಳಶಾರೋಹಣ ನೆರವೇರಿಸಲಾಗುವುದು.
18ರಂದು ರಥೋತ್ಸವ, ಧಾರ್ಮಿಕ ಸಭೆ: ಡಿ.18ರಂದು ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ರಥೋತ್ಸವ ಮತ್ತು ಸರ್ಪವಾಹನೋತ್ಸವ ಜರುಗಲಿದೆ. ಅಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಶಾಸಕ ಎಚ್.ಡಿ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಡಿ.19ರಂದು ರಂಗನಾಥಸ್ವಾಮಿ ರಥೋತ್ಸವ, ಗರುಡೋತ್ಸವ ನಡೆಯಲಿದೆ. ಅಂತಿಮ ದಿನವಾದ ಡಿ.20ರಂದು ಕುಂದೂರು ಮಹಾಸಂಸ್ಥಾನದ ಹಿಂದಿನ 11 ಪೀಠಾಧ್ಯಕ್ಷರ ಪುಣ್ಯಾರಾಧನೆ ಹಾಗೂ ಗುರುಸಂಸ್ಮರಣೋತ್ಸವ ಜರಗಲಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮಧ್ಯಾಹ್ನ ಅನ್ನಸಂತರ್ಪಣೆ ಇರಲಿದೆ ಎಂದರು.
ಜಾತ್ರೆ ನಡೆಯಲಿರುವ ನಾಲ್ಕು ದಿನಗಳು ಸಂಜೆ ಸುತ್ತಮುತ್ತಲಿನ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಡಿ.18ರಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ಕೆಎಎಸ್ ನಲ್ಲಿ ದ್ವಿತೀಯ ರ‌್ಯಾಂಕ್ ಪಡೆದ ಶೀಥಲ್ ಅವರನ್ನು ಸನ್ಮಾನಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಬ್ಬಳಿ ಶಾಖಾಮಠದ ಶಿವಪುತ್ರನಾಥ ಸ್ವಾಮೀಜಿ ಇದ್ದರು.