

ತುಮಕೂರು: ಮಾದೇನಹಳ್ಳಿ ಮಲ್ಲಿಕಾರ್ಜುನಯ್ಯ ಅವರು ಒಬ್ಬ ಆದರ್ಶ ಶರಣರಂತೆ ಬದುಕಿ ಮುಂದಿನ ಯುವಜನಾಂಗಕ್ಕೆ ಮಾದರಿಯಾಗಿದ್ದರು ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಹೇಳಿದರು.
ಸಿದ್ದಗಂಗಾ ಮಠದಲ್ಲಿ ಜಿಲ್ಲಾ ಹಾಗು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಲಿಂಗೈಕ್ಯ ಮಾದೇನಹಳ್ಳಿ ಮಲ್ಲಿಕಾರ್ಜುನಯ್ಯನವರ ಸಾಮಾಜಿಕ ಸೇವಾನಿಷ್ಠೆ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶರಣರು ಬದುಕಿದ ರೀತಿ ಎಂದೆಂದಿಗೂ ಆದರ್ಶ. ಬ್ರಹ್ಮಚಾರಿಯಾಗಿ ಬದುಕಿದ್ದ ಮಲ್ಲಿಕಾರ್ಜುನಯ್ಯ ಅತ್ಯಂತ ಬಡತನದಲ್ಲಿ ಬಂದು, ಶ್ರೀ ಶಿವಕುಮಾರಸ್ವಾಮಿಗಳ ಆದೇಶದಂತೆ ಮೈಸೂರಿನಲ್ಲಿ ಓದಿ, ನಂತರ ಬೆಂಗಳೂರಿನಲ್ಲಿ ಉದ್ಯೋಗಿಯಾಗಿ ನೂರಾರು ಸಾಹಿತಿಗಳೊಂದಿಗೆ ಪತ್ರ ವ್ಯವಹಾರ ಮಾಡುತ್ತಾ ಸಾಹಿತ್ಯ ಪರಿಚಾರಕರೂ ಆಗಿದ್ದರು. ಕುವೆಂಪು, ಶಿವರಾಮಕಾರಂತ, ಹರಿದಾಸಭಟ್ಟ, ವಿ.ಸೀತಾರಾಮಯ್ಯರವರೊಂದಿಗೆ ನೂರಾರು ಪತ್ರ ಬರೆದವರು ಎಂದು ಶ್ಲಾಘಿಸಿದರು.
ಸಿದ್ದಗಂಗಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ, ಸಿದ್ದಗಂಗಾ ಮಠದ ಆಡಳಿತಾಧಿಕಾರಿ ಎಸ್.ವಿಶ್ವನಾಥಯ್ಯ, ವಿದ್ವಾನ್ ಕೋ.ರಂ.ಬಸವರಾಜು, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿದ್ವಾನ್ ಎಂ.ಜಿ.ಸಿದ್ಧರಾಮಯ್ಯ, ಶ್ರೀ ಸಿದ್ಧಲಿಂಗೇಶ್ವರ ಸಂಸ್ಕತ ಕಾಲೇಜಿನ ಪ್ರಾಚಾರ್ಯರಾದ ಡಾ. ಎನ್.ಎಸ್.ನಿರಂಜನಮೂರ್ತಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ನಿವೃತ್ತ ನೌಕರ ಶಿವರುದ್ರಯ್ಯ, ರೇಣುಕಾರಾಧ್ಯರಿಗೆ ಶರಣ ಸೇವಾ ಗೌರವ ನೀಡಿ ಸತ್ಕರಿಸಲಾಯಿತು.
ಲಿಂ. ಸಿ.ಎಂ.ರುದ್ರಾರಾಧ್ಯ ಶಮಾರ್ರವರ ಸ್ಮರಣಾರ್ಥ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ರಾಮಕೃಷ್ಣ ಸ್ವಾಗತಿಸಿ, ವೀರಭದ್ರಯ್ಯ ವಂದಿಸಿದರು. ಅಮರಗೋಪಾಲ್ ನಿರೂಪಿಸಿದರು.