

ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜ.18, 19ರಂದು ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ 13ನೇ ಶರಣ ಸಾಹಿತ್ಯ ಸಮ್ಮೇಳನ ಆಯೋಜಿಸಿದೆ.
ಈ ಕುರಿತು ಪರಿಷತ್ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಮಾಹಿತಿ ನೀಡಿದ್ದು, ಸಮ್ಮೇಳನಾಧ್ಯಕ್ಷರಾಗಿ ಡಾ. ಸಿದ್ದರಾಮ ಬೆಲ್ದಾಳ ಶರಣರನ್ನು ಆಯ್ಕೆ ಮಾಡಲಾಗಿದೆ. ಜ.18ರಂದು ಶ್ರೀ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಗದಗಿನ ಜಗದ್ಗುರು ಡಾ. ಶ್ರೀ ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಜ.18ರಂದು ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಚಾಲನೆ ನೀಡಲಿದ್ದಾರೆ. ಜ.19ರಂದು ಸಂಜೆ 6ಕ್ಕೆ ನಡೆಯುವ ಸಮಾರೋಪದಲ್ಲಿ ಸಂಸದ ಬಸವರಾಜ ಬೊಮ್ಮಾಯಿ, ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಡಾ. ಶಿವರಾಜ ವಿ. ಪಾಟೀಲ, ಕೆ.ಎಲ್.ಇ. ಅಧ್ಯಕ್ಷ ಡಾ. ಎಂ. ಪ್ರಭಾಕರ್ ಕೋರೆ ಇತರರು ಪಾಲ್ಗೊಳ್ಳಲಿದ್ದಾರೆ.