ಭೋಜನ ಶಾಲೆಗೆ ವಿಶೇಷ ಅಲಂಕಾರ : ನವಾನ್ನ ಪ್ರಸಾದದ ವಿತರಣೆ ಹಿನ್ನೆಲೆ

temple
Published on

ಸುಬ್ರಹ್ಮಣ್ಯ : ನವಾನ್ನ ಪ್ರಸಾದದ ವಿತರಣೆ ಅತ್ಯಂತ ಮಹತ್ವದ್ದಾಗಿದ್ದು, ಇದಕ್ಕಾಗಿ ಷಣ್ಮುಖ ಪ್ರಸಾದ ಭೋಜನ ಶಾಲೆಯನ್ನು ಸುಂದರವಾಗಿ ಶೃಂಗರಿಸಲಾಗಿತ್ತು. ಭೋಜನ ಶಾಲೆಯ ಕೆಳ ಮಹಡಿ ಮತ್ತು ಮೇಲ್ಮಹಡಿಯನ್ನು ಅಂದವಾಗಿ ಸಿಂಗಾರಗೊಳಿಸಲಾಗಿತ್ತು. ಮೇಲ್ಮಹಡಿಯಲ್ಲಿ ನೌಕರರು ಸಾಂಪ್ರದಾಯಿಕ ಅಲಂಕಾರದಿಂದ ಶೃಂಗರಿಸಿದ್ದರು. ತೆಂಗಿನ ಗರಿಗಳ ತಟ್ಟಿಯಿಂದ ಮಾಡನ್ನು ಮಾಡಿ ಮಂಟಪ ನಿರ್ಮಿಸಲಾಗಿತ್ತು. ಅದಕ್ಕೆ ವಿದ್ಯುತ್ ದೀಪ ಮತ್ತು ಹೂವುಗಳಿಂದ ಅಲಂಕರಿಸಲಾಗಿತ್ತು. ಕೆಳ ಮಹಡಿಯಲ್ಲಿ ಕೂಡಾ ವಿದ್ಯುದ್ದೀಪಾಲಂಕಾರಗಳಿಂದ ಮತ್ತು ಹೂವಿನಿಂದ ಅಲಂಕೃತ ಮಂಟಪ ನಿರ್ಮಿಸಲಾಗಿತ್ತು.

ಹೊಸ್ತಾರೋಗಣೆ ನಿಮಿತ್ತ ಭಕ್ತರಿಗೆ ವಿಶೇಷ ಭೋಜನ ಪ್ರಸಾದ ವಿತರಿಸಲಾಯಿತು. ಸಾಂಪ್ರದಾಯಿಕ ಚಪ್ಪೆಗಂಜಿ, ಉಪ್ಪಿನಕಾಯಿ, ಕೋಸಂಬರಿ, ಪಲ್ಯ, ಚಿತ್ರಾನ್ನ, ಮಜ್ಜಿಗೆ ಹುಳಿ, ಹಾಲು ಪಾಯಸದೊಂದಿಗೆ ಶುಚಿರುಚಿಯಾದ ಭೋಜನ ವಿತರಿಸಲಾಯಿತು. ಬೆಳಗ್ಗೆ 10.30ರಿಂದ ಸಂಜೆ 4.30ರತನಕ ನಿರಂತರವಾಗಿ ಸಹಸ್ರಾರು ಭಕ್ತರಿಗೆ ಭೋಜನ ವಿತರಿಸಲಾಯಿತು. ಇದಕ್ಕೂ ಮೊದಲು ಕದಿರನ್ನು ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತರಲಾಯಿತು.

ಮಧ್ಯಾಹ್ನ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಭೇಟಿ ನೀಡಿ ಅಲಂಕಾರವನ್ನು ವೀಕ್ಷಿಸಿ ಶ್ಲಾಘಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಭೋಜನ ಶಾಲೆಯ ನಿರ್ವಾಹಕ ದಿನೇಶ್ ಎಂ.ಆರ್, ತಂಬ ನಾಯರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net