ಫಲಾನುಭವಿಗಳಿಗೆ ಸಹಾಯಧನ ಹಾದಿ ಸುಗಮ: ಬ್ಯಾಂಕ್‌ಗಳಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಸೂಚನೆ
ದಕ ಜಿಲ್ಲಾ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಪಂ ಸಭಾಂಗಣದಲ್ಲಿ ಜರುಗಿತು. ಜಿ.ಪಂ. ಸಿಇಒ ಡಾ. ಆನಂದ್, ಜಿಲ್ಲಾ ಕೈಗಾರಿಕಾ ಕೇಂದ್ರಗಳ ಸಹಾಯಕ ವ್ಯವಸ್ಥಾಪಕ ಅನಿಲ್‌ಕುಮಾರ್, ಆರ್‌ಬಿಐ ಎಜಿಎಂ ಅರುಣ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಮಂಗಳೂರು: ಸರ್ಕಾರದ ಸಹಾಯಧನ, ವಿವಿಧ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸುಲಭವಾಗಿ ತಲುಪಲು ಬ್ಯಾಂಕುಗಳು ಅಸ್ಥೆ ವಹಿಸಬೇಕು. ಜನರು ಬ್ಯಾಂಕುಗಳಿಗೆ ಪದೇಪದೇ ಅಲೆದಾಡುವ ಪರಿಸ್ಥಿತಿ ಎದುರಾಗಬಾರದು ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಸೂಚಿಸಿದ್ದಾರೆ. ದ.ಕನ್ನಡ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಥಳೀಯ ಭಾಷೆ, ಸಂಸ್ಕೃತಿಯ ಅರಿವು ಬ್ಯಾಂಕ್‌ಗಳು ತಮ್ಮ ಅಧಿಕಾರಿ ಹಾಗೂ ಸಿಬ್ಬಂದಿಗೆ ಸ್ಥಳೀಯ ಭಾಷೆ, ಸಂಸ್ಕೃತಿಯ ಬಗ್ಗೆ ಅರಿವು, ಗೌರವ ಇರುವುದನ್ನು ಖಾತರಿಪಡಿಸಬೇಕು. ಬ್ಯಾಂಕ್‌ಗಳು ತಮ್ಮ ಸಿಎಸ್‌ಆರ್ ಚಟುವಟಿಕೆಗಳಿಗೆ ಒತ್ತು ನೀಡಬೇಕು ಎಂದು ಅವರು ತಿಳಿಸಿದರು. ಮುದ್ರಾ ಯೋಜನೆಯಡಿ ಜಿಲ್ಲೆಯ ವಿವಿಧ ಬ್ಯಾಂಕ್‌ಗಳಿಗೆ ಪ್ರಸಕ್ತ ಸಾಲಿಗೆ ಒಟ್ಟು 1300 ಗುರಿ ನೀಡಲಾಗಿದ್ದರೂ ಈವರೆಗೆ ಕೇವಲ 8 ಅರ್ಜಿಗಳು ಮಾತ್ರ ಸ್ವೀಕೃತವಾಗಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಹಾಯಧನ ವಿಳಂಬ ಪ್ರಧಾನ ಮಂತ್ರಿಯವರ ಉದ್ಯೋಗ ಸೃಷ್ಟಿ ಕಾರ್ಯಕ್ರಮ (ಪಿಎಂಇಜಿಪಿ) ದಡಿ ಕಿರು ಮತ್ತು ಮಧ್ಯಮ ಕೈಗಾರಿಕಾ ಚಚುವಟಿಕೆಗಳಿಗೆ ಸಾಲ ಪಡೆದು ಮರುಪಾವತಿಸಿದ್ದರೂ ನೂರಾರು ಉದ್ದಿಮೆದಾರರಿಗೆ ಸಿಗಬೇಕಾಗಿರುವ ಸಬ್ಸಿಡಿ ಹಲವು ವರ್ಷಗಳಿಂದ ದೊರೆತಿಲ್ಲ ಎಂಬ ಮಾಹಿತಿ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. 2019ರಿಂದೀಚೆಗೆ ಪಿಎಂಇಜಿಪಿಯಡಿ ಸಾಲ ಪಡೆದವರು ಮರುಪಾವತಿ ಮಾಡಿದ್ದರೂ ಸಬ್ಸಿಡಿ ದೊರಕಿಲ್ಲ. ಇದರಿಂದಾಗಿ ಈ ಉದ್ದಿಮೆದಾರರು ಬೇರೆ ಯಾವುದೇ ರೀತಿಯ ಸಾಲ ಪಡೆಯಲು ಸಾಧ್ಯವಾಗದೆ ಉದ್ಯಮವನ್ನೇ ಮುಚ್ಚುವಂತಹ ಸ್ಥಿತಿಯೂ ಎದುರಾಗಿದೆ ಎಂದು ಸಭೆಯಲ್ಲಿ ಸಂಸದರ ಆಪ್ತ ಸಹಾಯಕರೊಬ್ಬರು ಮಾಹಿತಿ ನೀಡಿದರು. ಜೀವನ್‌ಜ್ಯೋತಿ ಬಿಮಾ ಯೋಜನೆ, ಪಿಎಂ ಸ್ವ ನಿಧಿ ಯೋಜನೆ ಬಗ್ಗೆ ಬಗ್ಗೆ ಗ್ರಾಹಕರಿಗೆ ಜಾಗೃತಿ ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯ ಪ್ರಯೋಜನ ಪಡೆಯಲು ಬ್ಯಾಂಕ್‌ಗಳು ಆಸಕ್ತಿ ವಹಿಸಬೇಕು ಎಂದು ಜಿ.ಪಂ. ಸಿಇಒ ಡಾ. ಆನಂದ್ ಅವರು ನಿರ್ದೇಶನ ನೀಡಿದರು.
ಥರ್ಡ್ ಪಾರ್ಟಿಯ ಪರಿಶೀಲನೆ ಸಾಲ ಪಡೆಯುವ ಉದ್ದಿಮೆದಾರರಿಗೆ ಅವರ ಖಾತೆಗೆ ಸಬ್ಸಿಡಿ ಹಣವನ್ನು ವರ್ಗಾಯಿಸಲಾಗುತ್ತದೆ. ಆದರೆ ಸಾಲ ಮರುಪಾವತಿ ಬಳಿಕ ಥರ್ಡ್ ಪಾರ್ಟಿಯ ಪರಿಶೀಲನೆ ಆಗಬೇಕಾಗುತ್ತದೆ. ಹಿಂದೆ ಜೆನೆಸಿಸ್ ಸಂಸ್ಥೆ ನಡೆಸುತ್ತಿದ್ದ ಪರಿಶೀಲನೆಯನ್ನು ಇದೀಗ ಕೇಂದ್ರ ಸರ್ಕಾರವು ಪೋಸ್ಟಲ್ ಇಲಾಖೆಗೆ ವರ್ಗಾಯಿಸಿದೆ. ಎಲ್ಲ ರಾಜ್ಯಗಳಲ್ಲೂ ಇದೀಗ ಈ ಬಗ್ಗೆ ಪ್ರಕ್ರಿಯೆಗಳು ನಡೆಯುತ್ತಿದ್ದು ಇದರಿಂದಾಗಿ ಸಬ್ಸಿಡಿ ವಿತರಣೆ ವಿಳಂಬವಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರಗಳ ಸಹಾಯಕ ವ್ಯವಸ್ಥಾಪಕ ಅನಿಲ್‌ಕುಮಾರ್ ಮಾಹಿತಿ ನೀಡಿದರು. ಪ್ರಧಾನ ಮಂತ್ರಿ ಜೀವನ್ ಬಿಮಾ ಯೋಜನೆಯಡಿ ಎಪ್ರಿಲ್ 2024ರಿಂದ ಜೂನ್ 2024ರವರೆಗೆ 6679 ಮಂದಿಯನ್ನು ನೋಂದಣಿ ಮಾಡಲಾಗಿದೆ. ಅಟಲ್ ಪಿಂಚಣಿ ಯೋಜನೆಯಡಿ ಈ ಅವಧಿಯಲ್ಲಿ 12761, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 18531 ಮಂದಿಯನ್ನು ನೋಂದಣಿ ಮಾಡಿರುವುದಾಗಿ ದ.ಕ. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಕವಿತಾ ಶೆಟ್ಟಿ ವಿವರ ನೀಡಿದರು. ಮುದ್ರಾ ಯೋಜನೆಯಡಿ ಈ ಅವಧಿಯಲ್ಲಿ 15239 ಖಾತೆಗಳಲ್ಲಿ 193.87 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. ಜನಧನ್ ಯೋಜನೆಯಡಿ 16163 ಖಾತೆಗಳನ್ನು ತೆರೆಯಲಾಗಿದೆ. ಪಿಎಂ ಸ್ವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಆಗಸ್ಟ್ 31ರವರೆಗೆ ಪ್ರಥಮ ಹಂತದಲ್ಲಿ 12209, ದ್ವಿತೀಯ ಹಂತದಲ್ಲಿ 3449 ಹಾಗೂ ತೃತೀಯ ಹಂತದಲ್ಲಿ 1340 ಮಂದಿಗೆ ಸಾಲ ಮಂಜೂರಾಗಿದೆ ಎಂದು ಅವರು ವಿವರ ನೀಡಿದರು. ಜಿ.ಪಂ. ಸಿಇಒ ಡಾ. ಆನಂದ್, ನಬಾರ್ಡ್ ಡಿಜಿಎಂ ಸಂಗೀತ, ಆರ್‌ಬಿಐ ಎಜಿಎಂ ಅರುಣ್ ಕುಮಾರ್ ಉಪಸ್ಥಿತರಿದ್ದರು.