ಅಂತರ್ಜಲ ಮರುಪೂರಣಕ್ಕೆ ಶಹಬ್ಬಾಸ್‌ಗಿರಿ

FotoJet (3)
Published on

ಘನತ್ಯಾಜ್ಯ ವಿಲೇವಾರಿಗೆ ಬೇಸರ ಶಿಡ್ಲಘಟ್ಟಕ್ಕೆ ಕೇಂದ್ರ ತಂಡ ಭೇಟಿ

ಶಿಡ್ಲಘಟ್ಟ: ಕೇಂದ್ರದ ಏರ್ ಕಮೋಡೋರ್ ಸುಧೀರ್ ಯಾದವ್ ಮತ್ತವರ ಅಧಿಕಾರಿಗಳ ತಂಡ ಜಿಲ್ಲೆಯಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದು ಶಿಡ್ಲಘಟ್ಟದ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ, ಆನೂರು ಗ್ರಾಮದ ಮಾದರಿ ಅಂಗನವಾಡಿ, ಡಿಜಿಟಲ್ ಲೈಬ್ರರಿಗೆ ಗುರುವಾರ ಭೇಟಿ ನೀಡಿತ್ತು.

ರೇಷ್ಮೆಗೂಡು ಮಾರುಕಟ್ಟೆಯಲ್ಲಿನ ಇ-ಹರಾಜು, ಇ-ತೂಕ ಹಾಗೂ ಇ-ಬಟವಾಡೆ ವ್ಯವಸ್ಥೆ, ಮಾದರಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸಿಗುವ ಸವಲತ್ತು, ಡಿಜಿಟಲ್ ಲೈಬ್ರರಿಯಲ್ಲಿ ಓದುಗರಿಗೆ ಸಿಗುತ್ತಿರುವ ಅನುಕೂಲಗಳ ಕುರಿತು ತಂಡ ಮಾಹಿತಿ ಪಡೆಯಿತು.

ಕೇಂದ್ರ ಸರ್ಕಾರಕ್ಕೆ ಜಿಲ್ಲಾಮಟ್ಟದ ಆಡಳಿತ ವರದಿ ನೀಡಲು ಆಗಮಿಸಿದ್ದ ತಂಡಕ್ಕೆ ಇಲ್ಲಿನ ಮಾರುಕಟ್ಟೆಯಲ್ಲಿನ ಇ-ಆಡಳಿತ ವ್ಯವಸ್ಥೆ ಕುರಿತು ರೇಷ್ಮೆಗೂಡು ಮಾರುಕಟ್ಟೆಯ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು ದಾಖಲೆಗಳೊಂದಿಗೆ ಮಾಹಿತಿ ನೀಡಿದರು. ಮಾರುಕಟ್ಟೆಗೆ ಆವಕವಾಗುವ ರೇಷ್ಮೆಗೂಡಿನ ಪ್ರಮಾಣಕ್ಕೆ ತಕ್ಕಂತೆ ಜಾಲರಿಗಳನ್ನು ನೀಡಿ ಪ್ರತಿ ಲಾಟಿಗೂ ಸರಣಿ ಕ್ರಮಸಂಖ್ಯೆ ನೀಡಲಾಗುತ್ತದೆ. ಇ-ಹರಾಜು ಮೂಲಕ ರೀಲರುಗಳು ತಮಗೆ ಬೇಕಾಗುವ ರೇಷ್ಮೆಗೂಡಿಗೆ ಬಿಡ್ ನೀಡುತ್ತಾರೆ. ಹೆಚ್ಚಿನ ಬಿಡ್ ಮಾಡುವವರಿಗೆ ಇಷ್ಟಪಟ್ಟ ರೇಷ್ಮೆಗೂಡು ಲಾಟು ಸಿಗುತ್ತದೆ. ಒಂದೊಮ್ಮೆ ರೈತನಿಗೆ ಬೆಲೆ ಸಮಾಧಾನ ತರದಿದ್ದಲ್ಲಿ ಬಿಡ್ ರದ್ದುಪಡಿಸುವ ಅವಕಾಶವಿರುತ್ತದೆ. ಹಾಗೂ ತೂಕ, ಹರಾಜಾದ ನಂತರ ಹಣ ಪಾವತಿ ಕುರಿತು ರೇಷ್ಮೆಗೂಡು ಮಾರಾಟ ಪ್ರಕ್ರಿಯೆ ಬಗ್ಗೆ ಸವಿವರವಾಗಿ ಕೇಂದ್ರ ತಂಡಕ್ಕೆ ತಿಳಿಸಿದರು.

ಆನೂರಿನ ಮಾದರಿ ಅಂಗನವಾಡಿ, ಡಿಜಿಟಲ್ ಗ್ರಂಥಾಲಯವನ್ನು ಸುಧೀರ್ ಯಾದವ್ ಮತ್ತವರ ತಂಡ ವೀಕ್ಷಿಸಿತು. ಸರ್ಕಾರದ ಭೂಮಿ, ನರೇಗಾ, ಸಕಾಲ, ಸ್ವಚ್ಛ ಭಾರತ್ ಯೋಜನೆ, ಗ್ರಾಮ ಪಂಚಾಯಿತಿ ಕಾರ್ಯಕ್ರಮಗಳು, ನಗರ ಮತ್ತು ಗ್ರಾಮೀಣ ಭಾಗದಲ್ಲಿನ ಪ್ರಮುಖ ಅಭಿವೃದ್ದಿ ಕಾರ್ಯಗಳ ಯೋಜನೆಗಳನ್ನು ವೀಕ್ಷಿಸಿ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಮುಖ್ಯವಾಗಿ ಜಿಲ್ಲೆಯಲ್ಲಿ ಅಂತರ್ಜಲ ಮರುಪೂರಣಕ್ಕಾಗಿ ಕೈಗೊಂಡ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಇತರ ಕಡೆಯಲ್ಲಿಯೂ ಇದೇ ಮಾದರಿ ಕ್ರಮ ಅನುಸರಿಸಲು ಸೂಚಿಸುವುದಾಗಿ ತಿಳಿಸಿದರು. ಆದರೆ, ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿರದ ಬಗ್ಗೆ ಬೇಸರ ವ್ಯಕ್ತಪಡಿಸಿ, ಆಯಾ ದಿನವೇ ಘನ ತ್ಯಾಜ್ಯ ವಿಲೇವಾರಿ ಆಗುವಂತೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ತಹಸೀಲ್ದಾರ್ ಬಿ.ಕೆ.ಶ್ವೇತಾ, ಜಿಲ್ಲಾ ಪಂಚಾಯಿತಿ ನರೇಗಾ ಸಂಯೋಜಕ ಜಿ.ಎನ್.ಮಧು ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net