ಸಿಎಂಗೆ ಅವಾಚ್ಯವಾಗಿ ನಿಂದಿಸಿದ್ದ ಶಾಬಾಜ್‌ ಖಾನ್ ಕೊನೆಗೂ ಪೊಲೀಸ್ ವಶಕ್ಕೆ..

Shabaz Khan
Published on

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಶಾಬಾಜ್ ಉಲ್ಲಾ ಖಾನ್ ಎಂಬಾತನನ್ನು ಎಸ್‌.ಜಿ.ಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಈತ 3-4 ದಿನಗಳ ಹಿಂದೆ ಸಿಎಂ ವಿರುದ್ಧ ಕೆಟ್ಟದಾಗಿ ಮಾತನಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದ. ಅದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಂತರ ಈತ ತಲೆಮರೆಸಿಕೊಂಡಿದ್ದ.

ಈತನ ವಿಡಿಯೋವನ್ನು ದಿಗ್ವಿಜಯ ನ್ಯೂಸ್ ಪ್ರಸಾರ ಮಾಡಿದ ಸಂದರ್ಭದಲ್ಲಿ ಫೋನ್ ಮೂಲಕ ವಾಹಿನಿಯೊಂದಿಗೆ ಲೈವ್ ಸಂಪರ್ಕ ಸಾಧಿಸಿದ್ದ ಈತ, ಅಲ್ಲಿಯೂ ಸ್ವಲ್ಪ ಹೊತ್ತು ತನ್ನ ಮೊಂಡುವಾದ ಮುಂದುವರಿಸಿದ್ದ. ನನ್ನ ಮುಸ್ಲಿಂ ಜನಾಂಗದವರಿಗೆ ನೋವಾಗಿರುವುದರಿಂದ ಸಿಎಂಗೆ ಹೀಗೆಲ್ಲ ಪ್ರಶ್ನೆ ಮಾಡಿದ್ದೇನೆ ಎಂದು ಹೇಳಿದ್ದ. ಸಿಎಂ ಪ್ರಶ್ನೆ ಮಾಡೋದು ಸರಿ, ಅವಾಚ್ಯ ಪದಗಳನ್ನು ಬಳಸಿದ್ದು ಸರಿಯೇ ಎಂದು ಪ್ರಶ್ನಿಸಿದಾಗ, ಆತನ ಬಳಿ ಸೂಕ್ತ ಉತ್ತರವಿರಲಿಲ್ಲ.

ನಿಮ್ಮ ಮದರಸಾಗಳಲ್ಲಿ ಇದನ್ನೇ ಕಲಿಸುತ್ತಾರೆಯೇ ಎಂದು ಪ್ರಶ್ನಿಸಿದಾಗ, ನಾನು ಮದ್ಯಪಾನ ಮಾಡಿ ಹಾಗೆಲ್ಲ ಅವಾಚ್ಯವಾಗಿ ಮಾತನಾಡಿದ್ದೇನೆ. ಇದನ್ನೆಲ್ಲ ಮದರಸಾಗಳಲ್ಲಿ ಕಲಿಸುವುದಿಲ್ಲ. ಈ ವಿಷಯದಲ್ಲಿ ಮದರಸಾಗಳನ್ನು ಎಳೆದುತರಬೇಡಿ ಎಂದು ವಾದಿಸಿದ್ದ. ಇದೀಗ ಈತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net