ಚರಂಡಿಗಳಲ್ಲಿ ಹೂಳು ತುಂಬಿಕೊಂಡು ಅವಾಂತರ

20-AUG-GPT-2A
Published on

 ಗುಂಡ್ಲುಪೇಟೆ: ಇತ್ತೀಚೆಗೆ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

ಪಟ್ಟಣದ ಪ್ರತಿಷ್ಠಿತ ಅಶ್ವಿನಿ ಬಡಾವಣೆ (ದ.ರಾ ಬೇಂದ್ರೆ ನಗರ)ಯಲ್ಲಿ ಹಲವು ದಿನಗಳಿಂದ ಹೂಳೆತ್ತಿಸದ ಪರಿಣಾಮ ಚರಂಡಿಗಳಲ್ಲಿ ಕೊಳಚೆ ನೀರು ತುಂಬಿ ಗಬ್ಬು ನಾರುತ್ತಿದೆ. ರಸ್ತೆ ಬದಿಗಳಲ್ಲಿ ಆಳೆತ್ತರ ಗಿಡಗಂಟಿಗಳು ಬೆಳೆದು ಸೊಳ್ಳೆ, ಹಾವು, ಚೇಳುಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ರಾತ್ರಿಯಾದರೆ ಹಾವು ಚೇಳುಗಳ ಭೀತಿಯಿಂದ ನಿವಾಸಿಗಳು ಹೊರಬರಲು ಹೆದರುತ್ತಿದ್ದಾರೆ. ಕಾಂಪೌಂಡ್ ಮತ್ತು ಮನೆ ಒಳಗೆ ಸದ್ದಿಲ್ಲದೆ ಕಾಣಿಸಿಕೊಳ್ಳುತ್ತಿರುವ ಹಾವುಗಳನ್ನು ಕಂಡು ಹಾವು ಹಿಡಿಯುವರ ಮೊರೆ ಹೋಗುವಂತಾಗಿದೆ.

ಜತೆಗೆ ಸೊಳ್ಳೆಗಳ ಕಾಟ ಮಿತಿ ಮೀರಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಈ ಬಗ್ಗೆ ವಾರ್ಡ್ ಸದಸ್ಯರು ಹಾಗೂ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಉಪಯೋಗವಾಗಿಲ್ಲ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕೆಲ ಮಕ್ಕಳಿಗೆ ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಂಡು ಪಾಲಕರ ಆತಂಕಕ್ಕೆ ಕಾರಣವಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟವರು ಚರಂಡಿಗಳ ಹೂಳೆತ್ತಿಸಿ ಬಡಾವಣೆಯಲ್ಲಿ ಶುಚಿತ್ವ ಕಾಪಾಡಲು ಕ್ರಮಕೈಗೊಳ್ಳಬೇಕು ಎಂದು ನಿವಾಸಿ ಬಸವಣ್ಣ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net