ಮನೆಗಳಿಗೆ ನುಗ್ಗಿದ ಕೊಳಚೆ ನೀರು

11 njd news 01.
ನಂಜನಗೂಡು ತಾಲೂಕಿನ ಮಲ್ಲಹಳ್ಳಿ ಗ್ರಾಮದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಮನೆಗಳಿಗೆ ಕೊಳಚೆ ನೀರು ನುಗ್ಗಿದ ಹಿನ್ನೆಲೆ ಗ್ರಾಪಂ ಅಧ್ಯಕ್ಷ ಎಂ. ಶ್ರೀಧರ್ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ ಇತರರು ಇದ್ದರು.
Published on

ನಂಜನಗೂಡು: ತಾಲೂಕಿನ ದೊಡ್ಡ ಕವಲಂದೆ ಹೋಬಳಿಯ ಮಲ್ಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯ ಪರಿಣಾಮ ಮನೆಗಳಿಗೆ ಮಳೆ ನೀರಿನ ಜತೆಗೆ ಕೊಳಚೆ ನೀರು ನುಗ್ಗಿ ಗ್ರಾಮಸ್ಥರು ಪರದಾಡಿದರು.

ಗ್ರಾಮದ ದಲಿತರ ಕಾಲನಿಯ ರಂಗಸ್ವಾಮಿ, ಜವರಯ್ಯ, ಪುಟ್ಟಮಾದಯ್ಯ, ರಂಗಸ್ವಾಮಿ, ಕರಿಯಯ್ಯ ಅವರ ಮನೆ ಸೇರಿದಂತೆ ಗ್ರಾಮದ ಹತ್ತಾರು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ತಡರಾತ್ರಿ ನೀರು ಹೊರಹಾಕಲು ಪರದಾಡಿದ್ದಾರೆ. ಜತೆಗೆ ಮನೆಯಲ್ಲಿದ್ದ ಹಲವಾರು ವಸ್ತುಗಳು ನೀರಿನಲ್ಲಿ ತೊಯ್ದು ಹಾನಿಗೀಡಾಗಿವೆ.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಮಾತನಾಡಿ, ಕೊಳಚೆ ನೀರು ನುಗ್ಗುವ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಹಲವಾರು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಆಗಿಲ್ಲ. ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಗ್ರಾಪಂ ಅಧ್ಯಕ್ಷ ಭೇಟಿ, ಪರಿಶೀಲನೆ: ರಾತ್ರಿ ಸುರಿದ ಮಳೆಯಿಂದ ಉಂಟಾಗಿರುವ ಸಮಸ್ಯೆ ಬಗ್ಗೆ ಅರಿತ ಹೆಮ್ಮರಗಾಲ ಗ್ರಾಪಂ ಅಧ್ಯಕ್ಷ ಎಂ ಶ್ರೀಧರ್, ಗ್ರಾಪಂ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಸರಿಯಾದ ರೀತಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಸಮಸ್ಯೆ ಉದ್ಭವಿಸಿದೆ. ಈಗಾಗಲೇ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಸರ್ವೇ ಮಾಡಿಸುತ್ತಿದ್ದೇನೆ. ಮಳೆ ಮುಂದುವರಿಯುವ ಸಾಧ್ಯತೆ ಇರುವ ಕಾರಣ, ಇಂದು ತಾತ್ಕಾಲಿಕವಾಗಿ ಚರಂಡಿಯನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.

ಪರಿಶೀಲನೆಯಲ್ಲಿ ಗ್ರಾಪಂ ಪಿಡಿಒ ಪುಟ್ಟ ಸೋಮಾಚಾರ್, ಕಾರ್ಯದರ್ಶಿ ಚಿಕ್ಕ ಸ್ವಾಮಿ, ಶಿವಮೂರ್ತಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net