ರಸ್ತೆ ಮೇಲೆಯೇ ಕೊಳಚೆ ನೀರು

ರಸ್ತೆ ಮೇಲೆಯೇ ಕೊಳಚೆ ನೀರು
Published on

ಹನೂರು: ಸಮರ್ಪಕ ಚರಂಡಿ ಹಾಗೂ ರಸ್ತೆ ಇಲ್ಲದ ಪರಿಣಾಮ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಅನೈರ್ಮಲ್ಯ ನಿರ್ಮಾಣವಾಗಿದೆ. ಇದರಿಂದ ತುಂಬ ತೊಂದರೆಯನ್ನು ಅನುಭವಿಸುತ್ತಿದ್ದೇವೆ ಎಂದು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಗುರುನಗರದ ನಿವಾಸಿಗಳು ದೂರಿದ್ದಾರೆ.

ಗುರುನಗರದಲ್ಲಿ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳಿದ್ದು, ಹಲವು ವರ್ಷಗಳಿಂದಲೂ ವಾಸಿಸುತ್ತಿದ್ದೇವೆ. ಈ ಹಿಂದೆ ಬಡಾವಣೆಯ ಅರ್ಧ ಭಾಗದವರೆಗೆ ಒಂದು ಬದಿಯಲ್ಲಿ ಮಾತ್ರ ಚರಂಡಿಯನ್ನು ನಿರ್ಮಿಸಲಾಗಿತ್ತು. ಆದರೆ ಕಳೆದ 2 ತಿಂಗಳದಿಂದೀಚೆಗೆ ಚರಂಡಿಯಲ್ಲಿ ಹೂಳು ತುಂಬಿದ್ದು, ಕೊಳಚೆ ನೀರು ಮಡುಗಟ್ಟಿ ನಿಂತಿದೆ. ಇತ್ತ ಇನ್ನೊಂದು ಬದಿಯಲ್ಲೂ ಚರಂಡಿ ಇಲ್ಲದ ಪರಿಣಾಮ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ಅನೈರ್ಮಲ್ಯ ಮನೆ ಮಾಡಿದೆ. ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ರೋಗ ರುಜಿನಗಳ ಭೀತಿ ನಮ್ಮನ್ನು ಕಾಡುತ್ತಿದೆ.

ಇನ್ನು ರಸ್ತೆಯಿಲ್ಲದ ಪರಿಣಾಮ ಮಳೆ ಬಂದ ವೇಳೆ ಕೆಸರುಮಯವಾಗುತ್ತದೆ. ಇದರಿಂದ ಓಡಾಡಲು ತೊಂದರೆಯಾಗಿದೆ. ಮಕ್ಕಳು ಹಾಗೂ ವೃದ್ಧರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ರಸ್ತೆ ಹಾಗೂ ಚರಂಡಿ ನಿರ್ಮಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ, ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ರಸ್ತೆ ಹಾಗೂ ಚರಂಡಿ ನಿರ್ಮಿಸುವುದರ ಮೂಲಕ ಅನುಕೂಲ ಕಲ್ಪಿಸುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net