ಸಮಾನತೆ ತಂದು ಕೊಟ್ಟ ಮಾನವತಾವಾದಿ

14 HANUR 3 A
Published on

ಹನೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ ಹಾಗೂ ಹೋರಾಟಕ್ಕೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ದೇಶದ ಸಮಾನತೆಗಾಗಿ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಮಹಾನ್ ಜ್ಞಾನಿ ಎಂದು ಶ್ರೀ ಮಲೆಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ತಿಳಿಸಿದರು.


ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಅಸ್ಪಶ್ಯತೆಯ ವಿರುದ್ಧ ಹೋರಾಡಿ ಸಮಾನತೆ ತಂದು ಕೊಟ್ಟ ಮಹಾ ಮಾನವತಾವಾದಿ ಡಾ.ಬಿ.ಆರ್ ಅಂಬೇಡ್ಕರ್. ದೇಶಕ್ಕೆ ಸಂವಿಧಾನವನ್ನು ನೀಡಿದ ಮಹಾನ್ ಜ್ಞಾನಿಯಾಗಿದ್ದು, ಇವರು ರಚಿಸಿದ ಸಂವಿಧಾನ ಅಡಿಯಲ್ಲಿ ಸರ್ಕಾರ ಆಡಳಿತ ನಡೆಸುತ್ತಿದೆ. ಹಾಗಾಗಿ ಇವರ ತತ್ವ, ಆದರ್ಶಗಳು ಎಲ್ಲರಿಗೂ ಅನುಕರಣೀಯ ಹಾಗೂ ಸ್ಫೂರ್ತಿದಾಯಕ ಎಂದು ತಿಳಿಸಿದರು.


ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ನೌಕರರಾದ ಜನಾರ್ದನ್, ಮಹೇಶ್, ಮಹದೇವಸ್ವಾಮಿ, ಸಿಬ್ಬಂದಿ, ದೇಗುಲದ ಅರ್ಚಕರು ಇದ್ದರು.
ಬೃಹನ್ಮಠದ ವಿದ್ಯಾಸಂಸ್ಥೆ: ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠ ಕೃಪಾ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಅಂಬೇಡರ್ ಜಯಂತಿಯನ್ನು ಆಚರಿಸಲಾಯಿತು. ಮುಖ್ಯ ಶಿಕ್ಷಕ ಕೆಂಪಸಿದ್ದ, ಸಂಸ್ಕೃತ ಪಾಠಶಾಲೆಯ ಮಹದೇವು, ವೇದ ಆಗಮ ಶಾಲೆಯ ಮಹೇಶ್ ಹಾಗೂ ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net