ಡಿಕೆಶಿಗೆ ಮುಖಭಂಗ; ಕಾಂಗ್ರೆಸ್​ಗೆ ರಸಭಂಗ

DKS
Published on

ಶ್ರೀಕಾಂತ್ ಶೇಷಾದ್ರಿ ಬೆಂಗಳೂರು : ಉಪ ಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ, ಈ ಎರಡು ಕ್ಷೇತ್ರಗಳಲ್ಲಿನ ಗೆಲುವು ದೊಡ್ಡ ಕಿಕ್​ಸ್ಟಾರ್ಟ್ ನೀಡುತ್ತದೆ ಎಂಬ ಭಾವಿಸಿದ್ದ ಕಾಂಗ್ರೆಸ್​ಗೆ ರಸಭಂಗವಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​ಗೆ ಬಿಟ್ಟುಕೊಟ್ಟಿದ್ದ ಶಿರಾ ಕ್ಷೇತ್ರವನ್ನು ಮರಳಿ ಪಡೆಯುವ ಅತಿಯಾದ ಆತ್ಮವಿಶ್ವಾಸ ಹೊಂದಿದ್ದ ಕಾಂಗ್ರೆಸ್​ಗೆ ಫಲಿತಾಂಶ ಆಘಾತ ತಂದಿದೆ. ರಾಜರಾಜೇಶ್ವರಿ ನಗರದಲ್ಲಿ ಫೋಟೋ ಫಿನಿಶ್ ಫಲಿತಾಂಶ ನಿರೀಕ್ಷಿಸಿದ್ದ ನಾಯಕರ ಲೆಕ್ಕಾಚಾರ ಪಲ್ಟಿ ಹೊಡೆದಿದೆ.

ಎಚ್ಚರಿಕೆ ಗಂಟೆ ದಿನದಿಂದ ದಿನಕ್ಕೆ ಪಕ್ಷದ ಸಂಘಟನೆ ತಳಮಟ್ಟದಲ್ಲಿ ಸಡಿಲಗೊಳ್ಳುತ್ತಿರುವುದು ಈ ಚುನಾವಣೆಯಲ್ಲಿ ಗೋಚರವಾಗಿದೆ. ಬಿಜೆಪಿ ಹೊಸ ಕಾರ್ಯಕರ್ತರನ್ನು ಸೃಷ್ಟಿಸಿಕೊಳ್ಳುತ್ತಿರುವಾಗಿ ಕಾಂಗ್ರೆಸ್ ಹೊರ ಕ್ಷೇತ್ರದಿಂದ ಕಾರ್ಯಕರ್ತರನ್ನು ಪ್ರಚಾರಕ್ಕೆ ಕರೆ ತರುವ ಇಕ್ಕಟ್ಟಿನ ಪರಿಸ್ಥಿತಿ ಸೃಷ್ಟಿಕೊಂಡಿದೆ. ಕೇಡರ್ ಆಧಾರಿತ ಪಕ್ಷ ಮಾಡುತ್ತೇವೆಂಬ ಡಿ.ಕೆ.ಶಿವಕುಮಾರ್ ಮಾತು ಕೃತಿಗೆ ಇಳಿಯುತ್ತಿಲ್ಲ. ಮುಂದಿನ ಉಪ ಚುನಾವಣೆಗಳು, ಗ್ರಾಮ ಪಂಚಾಯಿತಿ ಚುನಾವಣೆ, ಬಿಬಿಎಂಪಿ ಚುನಾವಣೆಗೂ ಮುನ್ನ ಚುನಾವಣೆ ತಂತ್ರಗಾರಿಕೆ ಬದಲಾಗಬೇಕಿದೆ. ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಕೈಗೆತ್ತಿಕೊಳ್ಳುವ ವಿಷಯಗಳು, ಪಕ್ಷದ ಸಂಘಟನೆಗೆ ಗಮನ ಕೊಡುವ ಅಗತ್ಯತೆ ಎಷ್ಟಿದೆ ಎಂಬುದನ್ನು ಕಾಂಗ್ರೆಸ್​ಗೆ ಈ ಚುನಾವಣೆ ಫಲಿತಾಂಶ ತೋರಿಸಿಕೊಟ್ಟಿದೆ.

ಎರಡೂ ಕ್ಷೇತ್ರಕ್ಕೂ ಅಭ್ಯರ್ಥಿ ವಿಚಾರದಲ್ಲೇ ಪಕ್ಷದಲ್ಲಿ ಸಹಮತ ಇರಲಿಲ್ಲ. ಶಿರಾದಲ್ಲಿ ಟಿ.ಬಿ.ಜಯಚಂದ್ರ ರಾಜ್ಯ ನಾರ್ಯಕರಿಗೆ ಅರ್ಹ ಅಭ್ಯರ್ಥಿ ಎನಿಸಿದ್ದರೂ, ಹೈಕಮಾಂಡ್​ಗೆ ಇಷ್ಟವಾಗಲಿರಲಿಲ್ಲ. ‘ಎಂಟು ಬಾರಿ ಕಣಕ್ಕಿಳಿದವರಿಗೆ ಈ ಬಾರಿ ಹೆಸರು ಶಿಫಾರಸು ಮಾಡಿದ್ದೀರಲ್ಲ, ನಿಮಗೆ ಕಾಮನ್​ಸೆನ್ಸ್ ಇಲ್ಲವೇ. ಈಗಲಾದರೂ ರಾಜೇಶ್ ಗೌಡ ಹೆಸರು ಕಳಿಸಿ ತಕ್ಷಣ ಒಪ್ಪಿಗೆ ಸೂಚಿಸುತ್ತೇವೆ’ ಎಂದು ಪಕ್ಷದ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೆವಾಲ ರಾಜ್ಯಾಧ್ಯಕ್ಷರಿಗೆ ಹೇಳಿದ್ದ ಗುಟ್ಟು ಅವರದೇ ಬಾಯಲ್ಲಿ ಹೊರಬಿದ್ದಿತ್ತು.

ರಾಜರಾಜೇಶ್ವರಿ ನಗರದಲ್ಲಿ ಕುಸುಮಾ ಎಲ್ಲ ನಾಯಕರಿಗೆ ಸಹ್ಯವೆನಿಸಿರಲಿಲ್ಲ. ಜೆಡಿಎಸ್​ನಲ್ಲಿದ್ದ ಹನುಮಂತರಾಯಪ್ಪ ಮಗಳಿಗೆ ಟಿಕೆಟ್ ಕೊಡುವುದರಿಂದ ಪಕ್ಷಕ್ಕೆ ಲಾಭವಿಲ್ಲ, ಅವರು ಚುನಾವಣೆಯಲ್ಲಿ ಸೋತರೆ ಪಕ್ಷದಲ್ಲೇ ಇರುತ್ತಾರೆಂಬ ಖಾತ್ರಿ ಏನು? ನಿನ್ನೆ ಪಕ್ಷಕ್ಕೆ ಸೇರಿದವರಿಗೆ ಇಂದು ಟಿಕೆಟ್ ನೀಡುವುದೇ? ಎಂಬಿತ್ಯಾದಿ ಪ್ರಶ್ನೆಗಳು ಕಾರ್ಯಕರ್ತರ ವಲಯದಿಂದ ತೂರಿಬಂದಿತ್ತು.

ಕರೊನಾ ನಿರ್ವಹಣೆ, ಆರ್ಥಿಕ ಪರಿಸ್ಥಿತಿ, ಭ್ರಷ್ಟಾಚಾರದ ಆರೋಪವನ್ನು ಕಾಂಗ್ರೆಸ್ ಚುನಾವಣೆ ಪ್ರಚಾರದ ವಿಷಯವಾಗಿ ಮಾಡಿಕೊಂಡಿತ್ತು. ಇದ್ಯಾವುದೂ ಮತದಾರನ ಮೇಲೆ ಪರಿಣಾಮ ಬೀರಿಲ್ಲ. ಜಾತಿ ಲೆಕ್ಕಾಚಾರದಲ್ಲಿ ರಾಜರಾಜೇಶ್ವರಿ ನಗರದಲ್ಲಿ ಒಕ್ಕಲಿಗರು ಕೈಹಿಡಿಯುತ್ತಾರೆಂದು ಡಿಕೆಶಿ ನಂಬಿಕೊಂಡಿದ್ದರು. ಜತೆಗೆ ಶಿರಾದಲ್ಲಿ ಕೂಡ ಸಣ್ಣ ಸಮುದಾಯಗಳನ್ನು ಒಟ್ಟುಮಾಡಿ ಹಿಡಿದಿಟ್ಟುಕೊಳ್ಳುವಲ್ಲಿ ಪಕ್ಷದ ನಾಯಕರು ವಿಫಲವಾಗಿರುವುದು ಎದ್ದುಕಾಣಿಸಿದೆ. ಬಿಜೆಪಿಯದ್ದೇ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಇಲ್ಲದ ಶಿರಾವನ್ನು ಸೋಲಲು ಪಕ್ಷದ ನಾಯಕರ ತಂತ್ರಗಾರಿಕೆಯ ವಿಫಲತೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net