ಉಪಚುನಾವಣೆಯಲ್ಲೂ ಬಿಜೆಪಿ ಜಯಭೇರಿ: ಮಧ್ಯಪ್ರದೇಶದಲ್ಲಿ ಚೌಹಾಣ್ ಸರ್ಕಾರ ಭದ್ರ

bjp flags1
Published on

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಜತೆಗೆ ನಡೆದ 11 ರಾಜ್ಯಗಳ 59 ವಿಧಾನಸಭಾ ಕ್ಷೇತ್ರ ಮತ್ತು ಒಂದು ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಕೂಡ ಪ್ರಕಟವಾಗಿದ್ದು, ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳ ಪೈಕಿ 9ರಲ್ಲಿ ಬಿಜೆಪಿ ಗೆದ್ದಿದೆ. 12ರಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ 6ರಲ್ಲಿ ಮತ್ತು ಬಿಎಸ್​ಪಿ ಒಂದು ಸ್ಥಾನದಲ್ಲಿ ಮುಂದಿದೆ. ಈ ಮೂಲಕ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಭದ್ರವಾಗಿದೆ. ಕಳೆದ ಮಾರ್ಚ್​ನಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದ ಸಮಯಲ್ಲಿ 25 ಶಾಸಕರು ರಾಜೀನಾಮೆ ನೀಡಿ ಅವರೊಟ್ಟಿಗೆ ಬಂದಿದ್ದರು. ಹೀಗಾಗಿ ಮಧ್ಯಪ್ರದೇಶದಲ್ಲಿ ಉಪಚುನಾವಣೆ ಸಿಂಧಿಯಾಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಇನ್ನು ಮೂರು ಕ್ಷೇತ್ರಗಳ ಶಾಸಕರು ನಿಧನರಾಗಿದ್ದರು.

ಮೂವರು ಮಂತ್ರಿಗಳಿಗೆ ಹಿನ್ನಡೆ : ಶಿವರಾಜ್ ಸಿಂಗ್ ಸಂಪುಟದಲ್ಲಿರುವ ಐದಳ ಸಿಂಗ್ ಕಂಸಾನಾ (ಸುಮಾವಲಿ), ಗಿರ್​ರಾಜ್ ದಂದೋತಿಯಾ (ದೀಮಾನಿ) ಒಪಿಎಸ್ ಭದೋರಿಯಾ (ಮೆಹಗಾಂವ್) ಹಿನ್ನಡೆಯಲ್ಲಿದ್ದಾರೆ. ಸಾಂಚಿ ಕ್ಷೇತ್ರದಲ್ಲಿ ಆರೋಗ್ಯ ಸಚಿವ ಡಾ.ಪ್ರಭುರಾಮ್ ಚೌಧರಿ ಜಯಗಳಿಸಿದ್ದಾರೆ. 229 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 107 ಸ್ಥಾನವನ್ನು ಹೊಂದಿದು, ಈಗ 21 ಕ್ಷೇತ್ರಗಳಲ್ಲಿ ಜಯಗಳಿಸಿದರೆ ಸಂಖ್ಯಾಬಲ 128ಕ್ಕೆ ಹೆಚ್ಚಾಗುತ್ತದೆ (ಸರಳ ಬಹುಮತ 116). ಇದರಿಂದ 9 ತಿಂಗಳ ಹಿಂದೆ ರಚನೆಯಾದ ಶಿವರಾಜ್ ಸಿಂಗ್ ಚೌಹಾಣ್​ರ ಸರ್ಕಾರ ಸುಭದ್ರವಾಗುತ್ತದೆ.

ಉಪಚುನಾವಣೆ ನಡೆದ 11 ರಾಜ್ಯಗಳು: ಮಧ್ಯಪ್ರದೇಶ 28, ಗುಜರಾತ್ 8, ಉತ್ತರ ಪ್ರದೇಶ 7, ಮಣಿಪುರ 5, ಕರ್ನಾಟಕ, ಒಡಿಶಾ, ಜಾರ್ಖಂಡ್, ನಾಗಾಲ್ಯಾಂಡ್ ತಲಾ 2 ಮತ್ತು ತೆಲಂಗಾಣ, ಛತ್ತೀಸ್​ಗಢ ಹಾಗೂ ಹರಿಯಾಣದ ತಲಾ ಒಂದು ಹಾಗೂ ಬಿಹಾರದ ವಾಲ್ಮೀಕಿನಗರ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು.

ರೂಪಾಣಿ ಸರ್ಕಾರ ಇನ್ನಷ್ಟು ಸುಭದ್ರ: ಗುಜರಾತ್​ನ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರರಲ್ಲಿ ಜಯಭೇರಿ ಬಾರಿಸಿದ್ದು, ಉಳಿದ ಐದರಲ್ಲಿ ಮುನ್ನಡೆಯಲ್ಲಿದೆ. ಇದರಿಂದ ವಿಜಯ್ ರೂಪಾಣಿ ನೇತೃತ್ವದ ಸರ್ಕಾರ ಮತ್ತಷ್ಟು ಸಬಲವಾಗಿದೆ.

ಬಿಜೆಪಿಯಿಂದ ಸ್ಪರ್ಧಿಸಿದ್ದ ಐವರು ಮಾಜಿ ಶಾಸಕರ ಪೈಕಿ, ಜೆ.ಕೆ. ಕಕಾಡಿಯಾ (ಧಾರಿ), ಮೆರ್ಜಾ (ಮೊರಬಿ), ಜಿತು ಚೌಧರಿ (ಕಪರಾಡಾ), ಅಕ್ಷಯ್ ಪಟೇಲ್ (ಕರ್ಜನ್), ಜಡೇಜಾ ( ಅಬದಾಸಾ)ಗಳಲ್ಲಿ ಜಯದ ಹಾದಿಯಲ್ಲಿ ಇದ್ದಾರೆ. ಇವೆರಲ್ಲರೂ ಹಿಂದೆ ಕಾಂಗ್ರೆಸ್​ನಿಂದ ಗೆದ್ದಿದ್ದರು. ದಾಂಗ, ಗಢಿಡಾ, ಲಿಂಬದಿ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳೇ ಮುಂದಿದ್ದಾರೆ. ಈ ಎಂಟೂ ಕ್ಷೇತ್ರಗಳಿಂದ 81 ಅಭ್ಯರ್ಥಿಗಳು ಕಣದಲ್ಲಿ ಇದ್ದರು. ಶೇ. 60.75 ಮತದಾನವಾಗಿತ್ತು. ಕಳೆದ ಜೂನ್​ನಲ್ಲಿ ರಾಜ್ಯಸಭಾ ಚುನಾವಣೆ ವೇಳೆ ಕಾಂಗ್ರೆಸ್​ನ ಐವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರು. ಇದರಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳ ಪೈಕಿ ಮೂರರಲ್ಲಿ ಬಿಜೆಪಿ ಜಯಗಳಿಸಲು ಸಾಧ್ಯವಾಯಿತು. 2017ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 99 ಮತ್ತು ಕಾಂಗ್ರೆಸ್ 77 ಸ್ಥಾನಗಳಿಸಿದ್ದವು. ಕಾಂಗ್ರೆಸ್ ಮುಳುಗುತ್ತಿರುವ ಹಡಗಾಗಿದ್ದು, ಎಲ್ಲಕಡೆ ಸೋಲನ್ನು ಅನುಭವಿಸಿದೆ. ಕಾಂಗ್ರೆಸ್​ನ ಅಪಪ್ರಚಾರ ಮತ್ತು ಕಟ್ಟ ಚಟುವಟಿಕೆಯನ್ನು ಜನರು ತಿರಸ್ಕರಿಸಿದ್ದಾರೆ ಎಂದು ಸಿಎಂ ವಿಜಯ್ ರೂಪಾಣಿ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಆರರಲ್ಲಿ ಬಿಜೆಪಿ: ಉತ್ತರ ಪ್ರದೇಶದ ಬುಲಂದಶಹರ, ತುಂದ್ಲಾ, ಬಂಗರಮವು, ಘಟಂಪುರ್, ದೇವರಿಯಾ, ನೌಗವಾನ್ ಸದಾತ್​ನಲ್ಲಿ ಬಿಜೆಪಿ ಹಾಗೂ ಮಲ್ಹಾನಿಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಮುನ್ನಡೆಯಲ್ಲಿದ್ದಾರೆ. ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅನರ್ಹಗೊಂಡ ಕಾರಣ ತೆರವಾದ ಬಂಗರಮವು ಸ್ಥಾನಕ್ಕೆ ಉಪಚುನಾವಣೆ ನಡೆಯಿತು.

ಬುಲಂದಶಹರ, ದೇವರಿಯಾ, ಮಲ್ಹಾನಿಗಳಲ್ಲಿ ಶಾಸಕರು ಸಾವನ್ನಪ್ಪಿದ ಕಾರಣ ಬೈಎಲೆಕ್ಷನ್ ಜರುಗಿದೆ. ನೌಗವಾನ್ ಸದಾತ್​ನ ಪ್ರತಿನಿಧಿಯಾಗಿದ್ದ ಸಚಿವ ಚೇತನ್ ಚೌಹಾಣ್ ಕರೊನಾ ಸೋಂಕಿನಿಂದ ಮೃತರಾಗಿದ್ದರು. ಘಟಂಪುರ್​ನಿಂದ ಜಯಗಳಿಸಿ ಮಂತ್ರಿಯಾಗಿದ್ದ ಕಮಲಾರಾಣಿ ವರುಣ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ತುಂದ್ಲಾದಿಂದ ಗೆದ್ದಿದ್ದ ಎಸ್​ಪಿ ಶಾಸಕ ಬಘೇಲ್ ಲೋಕಸಭೆಗೆ ಆಯ್ಕೆಯಾದ ಕಾರಣ ಈ ಕ್ಷೇತ್ರ ಖಾಲಿ ಉಳಿದಿತ್ತು.

ಉಳಿದ ರಾಜ್ಯಗಳ ಸ್ಥಿತಿಗತಿ

* ಹರಿಯಾಣದ ಬರೋದಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಇಂದು ರಾಜ್ ನರ್ವಾಲ್ 10 ಸಾವಿರಕ್ಕೂ ಅಧಿಕ ಮತಗಳಿಂದ ಬಿಜೆಪಿಯ ಯೋಗೇಶ್ವರ್ ದತ್​ರನ್ನು ಪರಾಭವಗೊಳಿಸಿದ್ದಾರೆ.

* ಜಾರ್ಖಂಡ್​ನ ದುಮ್ಕಾದಲ್ಲಿ ಸಿಎಂ ಸೋದರ ಬಸಂತ್ ಸೊರೇನ್ ಮತ್ತು ಬೆರ್ವೆದಲ್ಲಿ ಕಾಂಗ್ರೆಸ್​ನ ಕುಮಾರ ಜಯಮಂಗಲ ಗೆಲುವು ಸಾಧಿಸಿದ್ದಾರೆ. ಎರಡು ಸ್ಥಾನದಲ್ಲೂ ಗೆದ್ದಿದ್ದ ಸಿಎಂ ಹೇಮಂತ ಸೊರೇನ್, ದುಮ್ಕಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬೆರ್ವೆದ ಶಾಸಕ ನಿಧನರಾಗಿದ್ದ ಕಾರಣ ಈ ಚುನಾವಣೆ ನಡೆಯಿತು.

* ನಾಗಾಲ್ಯಾಂಡ್​ನ ದಕ್ಷಿಣ ಅಂಗಮಿ-1ದಲ್ಲಿ ಆಡಳಿತಾರೂಢ ಎನ್​ಡಿಪಿಪಿ ಅಭ್ಯರ್ಥಿ ಮತ್ತು ಪುಂಗ್ರೊ ಕಿಫೈರ್​ನಲ್ಲಿ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ. ಎರಡೂ ಕ್ಷೇತ್ರಗಳ ಶಾಸಕರು ನಿಧನರಾದ ಕಾರಣ ಈ ಉಪಚುನಾವಣೆ ಜರುಗಿತು.

* ಮಣಿಪುರದ ನಾಲ್ಕು ಕ್ಷೇತ್ರಗಳ ಪೈಕಿ ಮೂರರಲ್ಲಿ ಗೆದಿದ್ದು, ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಒಂದರಲ್ಲಿ ಜಯಗಳಿಸಿದ್ದಾರೆ. ಇನ್ನೊಂದು ಕ್ಷೇತ್ರದಲ್ಲೂ ಬಿಜೆಪಿ ಮುನ್ನಡೆಯಲ್ಲಿದೆ. ಐವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಈ ಕ್ಷೇತ್ರಳಲ್ಲಿ ಉಪಚುನಾವಣೆ ನಡೆದಿದೆ.

* ತೆಲಂಗಾಣದ ಡುಬ್ಬಕ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಟಿಆರ್​ಎಸ್​ನ ಶಾಸಕ ಸೋಲಿಪೇಟ ರೆಡ್ಡಿ ನಿಧನದಿಂದ ಈ ಕ್ಷೇತ್ರ ತೆರವಾಗಿತ್ತು.

* ಬಿಹಾರದ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿ ಸುನಿಲ್ ಕುಮಾರ್ 16 ಸಾವಿರ ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಜೆಡಿಯುವಿನ ಬೈದ್ಯನಾಥ ಮಹತೊ ನಿಧನದ ಕಾರಣ ಇಲ್ಲಿ ನಡೆದ ಉಪಚುನಾವಣೆಯಲ್ಲಿ ಅವರ ಪುತ್ರ ಸುನಿಲ್ ಕುಮಾರ್​ಗೆ ಜೆಡಿಯು ಟಿಕೆಟ್ ನೀಡಿತ್ತು.

* ಒಡಿಶಾದ ಬಾಲಾಸೋರ್ ಮತ್ತು ತಿತೋಲ್ ಕ್ಷೇತ್ರಗಳಲ್ಲಿ ಬಿಜೆಡಿ ಮುನ್ನಡೆಯಲ್ಲಿದೆ. ಈ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದ ಬಿಜೆಡಿ ಶಾಸಕರ ಸಾವನ್ನಪ್ಪಿದ ಕಾರಣ ಬೈಎಲೆಕ್ಷನ್ ನಡೆದಿದೆ.

* ಮಾಜಿ ಸಿಎಂ ಅಮಿತ್ ಜೋಗಿ ನಿಧನದಿಂದ ತೆರವಾದ ಛತ್ತೀಸ್​ಗಢದ ಮರವಾಹಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆಯಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net