ಬನವಾಸಿ ಅಭಿವೃದ್ಧಿಗೆ ಎಳ್ಳುನೀರು

22sirsi1
Published on

ರಾಜೇಂದ್ರ ಶಿಂಗನಮನೆ ಶಿರಸಿ
ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ಅಭಿವೃದ್ಧಿಗೆಂದು ರಚನೆಯಾಗಿದ್ದ ಬನವಾಸಿ ಅಭಿವೃದ್ಧಿ ಪ್ರಾಧಿಕಾರವು ನಾಮ್​ಕೆ-ವಾಸ್ಥೆ ಎಂಬಂತಾಗಿದೆ. ಪ್ರಾಧಿಕಾರದ ಮೂಲಕ ಐತಿಹಾಸಿಕ ತಾಣದ ಅಭಿವೃದ್ಧಿ ಸಾಕಾರಗೊಳ್ಳಬಹುದೆಂಬ ಇತಿಹಾಸ ಅಧ್ಯಯನಕಾರರಿಗೆ ನಿರಾಸೆಯಾಗಿದೆ.
ರಚನೆಯಾಗಿ ಏಳು ವರ್ಷಗಳಲ್ಲಿ ಪ್ರಾಧಿಕಾರಕ್ಕೆ ಕೇವಲ 5 ಕೋಟಿ ರೂ. ಮಾತ್ರ ಅನುದಾನ ದೊರೆತಿದೆ. 2014ರಲ್ಲಿ ಕದಂಬೋತ್ಸವದ ಉದ್ಘಾಟನೆಗೆ ಬನವಾಸಿಗೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಘೊಷಣೆ ಮಾಡಿದ್ದರು. ಆದರೆ, ಅದಾದ ನಂತರ 2017-18ನೇ ಸಾಲಿನ ಬಜೆಟ್​ನಲ್ಲಿ ಪ್ರಾಧಿಕಾರಕ್ಕೆ 5 ಕೋಟಿ ರೂ. ಅನುದಾನ ಘೊಷಣೆಯಾಗಿತ್ತು. ಪ್ರಾಧಿಕಾರವು ಅಧಿಕೃತ ಅನುಮೋದನೆ ಪಡೆಯುವಲ್ಲಿ ಆಗಿನ ಶಾಸಕರಾಗಿದ್ದ ಶಿವರಾಮ ಹೆಬ್ಬಾರ ವಿಶೇಷ ಶ್ರಮ ವಹಿಸಿದ್ದರು. ಆದರೆ, ಅಧಿಕೃತಗೊಂಡ ಪ್ರಾಧಿಕಾರಕ್ಕೆ ನಂತರದ ವರ್ಷಗಳಲ್ಲಿ ಬಿಡಿಗಾಸು ಬಿಡುಗಡೆ ಮಾಡಿಲ್ಲ ಎಂಬುದು ಸ್ಥಳೀಯರ ಆಕ್ಷೇಪ.
ಪ್ರಾಥಮಿಕವಾಗಿ ದೊರೆತಿರುವ ಅನುದಾನವನ್ನು ಧಾರ್ವಿುಕ ಕ್ಷೇತ್ರದ ಪ್ರಮುಖ ರಸ್ತೆಗಳು, ಚರಂಡಿಗಳ ಮರು ನಿರ್ವಣ, ಮಧುಕೇಶ್ವರ ದೇವಾಲಯಕ್ಕೆ ನಿತ್ಯ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕೆ ಶೌಚಗೃಹ, ಕುಡಿಯುವ ನೀರಿನ ಘಟಕ ನಿರ್ವಣದಂತಹ ಮೂಲ ಸೌಕರ್ಯ ಅಭಿವೃದ್ಧಿಗೆ ಮೀಸಲಿಡಲಾಗಿತ್ತು. ಅದರಲ್ಲಿ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆಯಾದರೂ ಇನ್ನೂ ಮೂಲ ಸೌಕರ್ಯಗಳ ಕೊರತೆ ಢಾಳಾಗಿಯೇ ಕಾಣುತ್ತಿದೆ ಎಂಬುದು ಬನವಾಸಿಗರ ನಿರಾಸೆಗೆ ಕಾರಣ.
ಒಮ್ಮೆ ದೊರೆತಿರುವ ಅನುದಾನ ಹೊರತುಪಡಿಸಿದರೆ, ಅಭಿವೃದ್ಧಿ ಪ್ರಾಧಿಕಾರಕ್ಕೆ ಯಾವುದೇ ಅನುದಾನ ಬಂದಿಲ್ಲ. ‘ಬನವಾಸಿಯೊಂದು ಬೆರಗು’ ಕಾರ್ಯಕ್ರಮ ಬಿಟ್ಟರೆ ಬೇರೆ ಯಾವ ಚಟುವಟಿಕೆ ಪ್ರಾಧಿಕಾರದ ಅಡಿಯಲ್ಲಿ ನಡೆದಿಲ್ಲ. ಅಧ್ಯಯನ ಕೇಂದ್ರ ಸ್ಥಾಪನೆ, ಉತ್ಖನನ, ಕದಂಬ ಪ್ರತಿಮೆ ನಿರ್ವಣ, ಗ್ರಂಥಾಲಯ ನಿರ್ವಣ, ವರದಾ ನೀರಿನ ವೈಜ್ಞಾನಿಕ ಸಂಗ್ರಹಣೆ ಹಾಗೂ ಕುಡಿಯುವ ನೀರು ಸರಬರಾಜು ವ್ಯವಸ್ಥೆ, ಬನವಾಸಿ ಅಭಿವೃದ್ಧಿ ಪ್ರಾಧಿಕಾರ ಕಚೇರಿ ನಿರ್ವಣ, ಮಯೂರವರ್ಮ ಬಯಲು ರಂಗ ಮಂದಿರ ನಿರ್ವಣ, ಪ್ರವಾಸಿ ತಾಣಗಳ ಮಾಹಿತಿ ಕೇಂದ್ರ ಸ್ಥಾಪನೆ, ಸಭಾಂಗಣ ನಿರ್ವಣ, ಐತಿಹಾಸಿಕ ಥೀಮ್ ಪಾರ್ಕ್ ನಿರ್ಮಾಣ ಸೇರಿ ಜಿಲ್ಲಾಡಳಿತ ಸಲ್ಲಿಸಿದ್ದ 100 ಕೋಟಿ ರೂ. ಪ್ರಸ್ತಾವಕ್ಕೆ ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ ಎಂಬುದು ಸ್ಥಳೀಯರಾದ ಬಸವರಾಜ ಗೌಡ ಅವರ ಆರೋಪವಾಗಿದೆ.

ಸಮ್ಮಿಶ್ರ ಸರ್ಕಾರದ ಬಜೆಟ್​ನಲ್ಲಿ 1 ಕೋಟಿ ರೂ. ಘೊಷಣೆಯಾಗಿದ್ದರೂ, ಅದು ಬಿಡುಗಡೆಯಾದ ಬಗ್ಗೆ ಮಾಹಿತಿಯಿಲ್ಲ. ಈ ಬಾರಿಯ ಬಜೆಟ್​ನಲ್ಲಿಯೂ ಅನುದಾನದ ಮಾಹಿತಿಯಿಲ್ಲ. ರಸ್ತೆ, ಗಟಾರ ಮೀರಿದ ಸಮಗ್ರ ಅಭಿವೃದ್ಧಿ ಪ್ರಾಧಿಕಾರದಿಂದ ಆಗಬೇಕು. ಪ್ರಾಧಿಕಾರ ರಚಿಸಿ ಮೂಗಿಗೆ ತುಪ್ಪ ಒರೆಸುವ ಬದಲಾಗಿ, ರಾಜಕೀಯ ಮೀರಿ ಕನ್ನಡದ ಪ್ರಥಮ ರಾಜಧಾನಿ ಅಭಿವೃದ್ಧಿ ಕಾಣಬೇಕು. ಸರ್ಕಾರಗಳು ಈ ಹಿಂದೆ ರಚಿಸಿರುವ ಅನೇಕ ಪ್ರಾಧಿಕಾರಗಳಂತೆ ಇದೂ ಒಂದಾಗಬಾರದು.| ಧೀರಜಕುಮಾರ, ಬನವಾಸಿ ನಾಗರಿಕಕರೊನಾ ಸಂದರ್ಭವಾದ್ದರಿಂದ ಅನುದಾನ ನೀಡುವಲ್ಲಿ ಹಿನ್ನಡೆಯಾಗಿದೆ. ಪ್ರಸ್ತುತ ಇರುವ ಕರೊನಾ ಆತಂಕ ನಿವಾರಣೆಯ ನಂತರ ಸರ್ಕಾರವೇ ಸೂಕ್ತ ನಿರ್ಣಯ ಕೈಗೊಂಡು ಬನವಾಸಿ ಅಭಿವೃದ್ಧಿಗೆ ಕೊಡುಗೆ ನೀಡಲಿದೆ.| ಶಿವರಾಮ ಹೆಬ್ಬಾರಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net