

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗಿ ಸಮಸ್ಯೆಗೆ ಸಿಲುಕುತ್ತಿರುವ ಉಪ್ಪಿನಂಗಡಿ ಪೇಟೆಯಲ್ಲಿ ಬಿಸಿಲಿನ ವಾತಾವರಣ ಕಂಡರೆ ಸಾಕು ಪರಿಸರವಿಡೀ ಧೂಳುಮಯವಾಗುತ್ತಿದೆ. ಇದರಿಂದಾಗಿ ಜನರಿಗೆ ಆರೋಗ್ಯ ಸಮಸ್ಯೆ ಭೀತಿ ಎದುರಾಗಿದೆ.
ಉಪ್ಪಿನಂಗಡಿಯಲ್ಲಿ ಚತುಷ್ಪಥ ರಸ್ತೆಯಲ್ಲಿ ಎತ್ತರಿಸಿದ ರಸ್ತೆ ನಿರ್ಮಿಸಲಾಗಿದ್ದು, ಅದರ ಪಾರ್ಶ್ವದಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಈ ಸರ್ವೀಸ್ ರಸ್ತೆಯ ಅಲ್ಲಲ್ಲಿ ಗುಂಡಿಗಳಿದ್ದು, ಅದನ್ನು ಮುಚ್ಚುವ ಸಲುವಾಗಿ ಜಲ್ಲಿ ಹುಡಿ ಹಾಕಲಾಗುತ್ತಿದೆ. ಆದರೆ ಹಾಕಲಾದ ಜಲ್ಲಿ ಹುಡಿಯು ಬಿಸಿಲಾವರಿಸಿದಾಕ್ಷಣ ಒಣಗಿ ಭಾರಿ ವಾಹನಗಳ ಸಂಚಾರದ ಸಮಯದಲ್ಲಿ ಧೂಳೆಬ್ಬಿಸುತ್ತಿದ್ದು, ಇದರಿಂದಾಗಿ ಪರಿಸರದಲ್ಲಿನ ಅಂಗಡಿ ಮುಂಗಟ್ಟುಗಳ ಜನ ಗಾಳಿಯೊಂದಿಗೆ ಧೂಳನ್ನೂ ಸೇವಿಸುವ ಸ್ಥಿತಿ ಉಂಟಾಗಿದೆ. ಹಲವರು ಆರೋಗ್ಯ ಸಂಬಂಧಿ ಸಮಸ್ಯೆಗೆ ಸಿಲುಕಿದ್ದು, ವ್ಯವಸ್ಥೆಯ ಲೋಪದಿಂದಾಗಿ ನಾವೆಲ್ಲಾ ಅನಾರೋಗ್ಯಪೀಡಿತರಾಗುವ ಸ್ಥಿತಿ ಉದ್ಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ವೀಸ್ ರಸ್ತೆಯನ್ನು ನಿಯಮಾನುಸಾರ ಕಾಂಕ್ರೀಟ್ ರಸ್ತೆಯನ್ನಾಗಿಸುವ ಮೂಲಕ ಈ ಭಾಗದ ಧೂಳಿನ ಸಮಸ್ಯೆ ಬಗೆಹರಿಸಬಹುದು.
ಹೆದ್ದಾರಿ ಸಂಪರ್ಕ ರಸ್ತೆಯಲ್ಲೂ ಗುಂಡಿ: ಉಪ್ಪಿನಂಗಡಿಯಲ್ಲಿ ನೇತ್ರಾವತಿ ಸೇತುವೆಯಿಂದ ಹೆದ್ದಾರಿ ಸಂಪರ್ಕದ ರಸ್ತೆಯಲ್ಲೂ ಹಲವಾರು ಗುಂಡಿಗಳು ನಿರ್ಮಾಣವಾಗಿದ್ದು, ಎಲ್ಲೆಡೆಯಿಂದಲೂ ಧೂಳು ಪಸರಿಸಿ ಉಪ್ಪಿನಂಗಡಿ ಪೇಟೆಗೆ ಸಂಕಷ್ಟ ಎದುರಾದಂತಿದೆ. ನೇತ್ರಾವತಿ ಸೇತುವೆಯಿಂದ ಹೆದ್ದಾರಿ ಸಂಪರ್ಕ ರಸ್ತೆಯ ಡಾಂಬರೀಕರಣಕ್ಕಾಗಿ ಪುತ್ತೂರು ಶಾಸಕರು 10 ಲಕ್ಷ ರೂ. ಅನುದಾನ ಒದಗಿಸಿ ಕಳೆದ ಮೇ ತಿಂಗಳಲ್ಲಿ ಶಿಲಾನ್ಯಾಸ ನೆರವೇರಿಸಿದ್ದರೂ ಬಳಿಕ ಸುರಿದ ಸತತ ಮಳೆಯಿಂದಾಗಿ ಕಾಮಗಾರಿ ನಡೆಸಲಾಗಿಲ್ಲ. ಇನ್ನಾದರೂ ಈ ಭಾಗದಲ್ಲಿ ಡಾಂಬರೀಕರಣ ಕಾಮಗಾರಿ ನಡೆಸಿ ಸುಗಮ ಸಂಚಾರಕ್ಕೆ ಅನುವು ಮತ್ತು ಧೂಳಿನ ಸಮಸ್ಯೆ ನಿವಾರಣೆಗೆ ಗಮನಹರಿಸಬೇಕಾಗಿದೆ.
ಕಾಮಗಾರಿಯನ್ನು ನಾನಾ ಕಾರಣಗಳನ್ನು ಮುಂದಿರಿಸಿ ವಿಳಂಬಿಸುತ್ತಿರುವುದರಿಂದ ಉಪ್ಪಿನಂಗಡಿ ಜನತೆ ಸಮಸ್ಯೆ ಅನುಭವಿಸುವಂತಾಗಿದೆ. ಧೂಳಿನ ಸಮಸ್ಯೆ ಎಂದು ಸಂಬಂಧಪಟ್ಟವರಿಗೆ ಪೋನಾಯಿಸಿದರೆ ಉಡಾಫೆಯ ಉತ್ತರ ಬರುತ್ತಿದೆ. ಧೂಳಿನಿಂದ ಆರ‌್ಯೋಗ ಕೆಟ್ಟರೆ ಯಾರಾದರೂ ಹೊಣೆ ಹೊರುತ್ತಾರೆಯೇ? ನಮ್ಮ ತಾಳ್ಮೆಗೂ ಮಿತಿ ಇದೆ. ಬೀದಿಗಿಳಿಯುವ ಮುನ್ನ ಧೂಳಿನ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟವರು ಗಮನಹರಿಸಬೇಕು. ರೂಪೇಶ್ ರೈ ಉಪ್ಪಿನಂಗಡಿ ಕೃಷಿ ಉತ್ಪನ್ನಗಳ ವ್ಯಾಪಾರಿ ನೇತ್ರಾವತಿ ಸೇತುವೆಯಿಂದ ಹೆದ್ದಾರಿ ಸಂಪರ್ಕ ರಸ್ತೆ ಡಾಂಬರೀಕರಣಕ್ಕಾಗಿ ಪುತ್ತೂರು ಶಾಸಕರು 10 ಲಕ್ಷ ರೂ. ಅನುದಾನ ಒದಗಿಸಿದ್ದು, ಮಳೆಯ ಕಾರಣಕ್ಕೆ ಕಾಮಗಾರಿ ಪ್ರಾರಂಭವಾಗಿಲ್ಲ. ಮಳೆ ಸುರಿದರೆ ಡಾಂಬರೀಕರಣದ ಕಾಮಗಾರಿ ಗುಣಮಟ್ಟಕ್ಕೆ ತೊಂದರೆಯಾಗುವುದರಿಂದ ಪೂರ್ಣಪ್ರಮಾಣದಲ್ಲಿ ಮಳೆ ನಿಲ್ಲುವವರೆಗೆ ಕಾದು ಬಳಿಕ ಕಾಮಗಾರಿ ಪ್ರಾರಂಭಿಸಲು ಶಾಸಕರು ಸೂಚಿಸಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಮಳೆ ನಿಂತಾಕ್ಷಣ ಈ ಭಾಗದಲ್ಲಿ ಡಾಂಬರೀಕರಣ ಕಾಮಗಾರಿ ನಡೆಯಲಿದ್ದು, ಬಳಿಕ ಈ ಭಾಗದಲ್ಲಿ ಧೂಳಿನ ಸಮಸ್ಯೆ ಕಾಣಿಸದು. ಯು.ಟಿ.ಮಹಮ್ಮದ್ ತೌಷಿಫ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀವ್ರ ಬಿಸಿಲ ಕಾರಣಕ್ಕೆ ಸರ್ವೀಸ್ ರೋಡಿಗೆ ಹಾಕಲಾದ ನೀರು ಆವಿಯಾಗಿ ಧೂಳು ಏಳುತ್ತಿದೆ. ಅಗತ್ಯ ಸಂಖ್ಯೆಯ ಟ್ಯಾಂಕರ್‌ಗಳನ್ನು ಉಪ್ಪಿನಂಗಡಿಯಲ್ಲಿ ನಿಯೋಜಿಸಲಾಗಿದೆ. ಧೂಳು ಪಸರಿಸದಂತೆ ಗರಿಷ್ಠ ಕಾಳಜಿ ವಹಿಸಲಾಗುತ್ತಿದೆ. ಆದಾಗ್ಯೂ ಈ ಭಾಗದ ಸರ್ವೀಸ್ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಲು ಮುಂದಿನ ವಾರದಿಂದ ಕಾಮಗಾರಿ ಪ್ರಾರಂಭಿಸಲಾಗುವುದು. ಟ್ರಾಫಿಕ್ ಸಮಸ್ಯೆಯಾಗದಂತೆ ಹಂತ ಹಂತವಾಗಿ ಕಾಂಕ್ರೀಟೀಕರಣ ನಡೆಸಲಾಗುವುದು. ರುನಾಥ್ ರೆಡ್ಡಿ, ಕೆಎನ್‌ಆರ್ ಸಂಸ್ಥೆಯ ಇಂಜಿನಿಯರ್