ಸರ್ವೀಸ್ ರಸ್ತೆ ನಿರ್ಗಮನ ಬಂದ್!

08-bidadi-4
??????????????
Published on

*ಬೆಂ -ಮೈ ಹೆದ್ದಾರಿ ಟೋಲ್ ತಪ್ಪಿಸುತ್ತಿದ್ದ ವಾಹನ ಸವಾರರಿಗೆ ಶಾಕ್

* ಲಕ್ಷ್ಮೀ ಸಾಗರ ಗೇಟ್ ಬಳಿ ಇದ್ದ ನಿರ್ಗಮನದ ದ್ವಾರ ಮುಚ್ಚಿದ ಪ್ರಾಧಿಕಾರ

ಚೇತನ್ ಚಕ್ಕೆರೆ ಬಿಡದಿ

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುತ್ತಿದ್ದ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ.

ಹೆದ್ದಾರಿಯಲ್ಲಿ ಬಂದು ಟೋಲ್ ಕಟ್ಟುವುದನ್ನು ತಪ್ಪಿಸಿಕೊಳ್ಳುತ್ತಿದ್ದ ವಾಹನಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೆದ್ದಾರಿಯಿಂದ ಬಂದು ಸರ್ವೀಸ್ ರಸ್ತೆಗೆ ನಿರ್ಗಮನ ಆಗುವುದಕ್ಕೆ ಬ್ರೇಕ್‌ಹಾಕಲಾಗಿದೆ.

ಹೌದು.. ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ಮೈಸೂರು ಕಡೆಯಿಂದ ಬಂದು ಶೇಷಗಿರಿಹಳ್ಳಿ ಬಳಿ ಇರುವ ಟೋಲ್ ತಪ್ಪಿಸಲು ಲಕ್ಷ್ಮೀ ಸಾಗರ ಗೇಟ್ ಬಳಿ ಇದ್ದ ನಿರ್ಗಮನದ ಮೂಲಕ ಸರ್ವೀಸ್ ರಸ್ತೆಗೆ ಬಂದು ಬೆಂಗಳೂರಿಗೆ ಹೋಗಲಾಗುತಿತ್ತು. ಈಗ ಹೆದ್ದಾರಿಯಿಂದ ನಿರ್ಗಮನ ಪಡೆಯುತ್ತಿದ್ದ ಮಾರ್ಗವನ್ನು ಸಿಮೆಂಟ್ ಬ್ಯಾರಿಕೇಡ್ ಹಾಕಿ ಮುಚ್ಚಿ ಹೆದ್ದಾರಿಯಲ್ಲಿ ಬರುವ ವಾಹನಗಳು ನೇರವಾಗಿ ಶೇಷಗಿರಿಹಳ್ಳಿಯ ಟೋಲ್ ಕೇಂದ್ರಕ್ಕೆ ಹೋಗುವಂತೆ ಮಾಡಲಾಗಿದೆ.

ಸಂಚಾರ ದಟ್ಟಣೆ :

ಮೈಸೂರು, ಮಂಡ್ಯ, ಚನ್ನಪಟ್ಟಣ, ರಾಮನಗರದಿಂದ ದಶಪಥ ಹೆದ್ದಾರಿಯಲ್ಲಿ ಬಂದು ಶೇಷಗಿರಿಹಳ್ಳಿಯ ಟೋಲ್ ಕೇಂದ್ರ ಒಂದು ಕಿಲೋ ಮೀಟರ್ ಇರುವಾಗಲೆ ಟೋಲ್ ಕಡಿತವಾಗುವುದನ್ನು ತಪ್ಪಿಸಲು ಲಕ್ಷ್ಮೀ ಸಾಗರ ಗೇಟ್ ಬಳಿಯ ನಿರ್ಗಮನದ ಮೂಲಕ ಸರ್ವೀಸ್ ರಸ್ತೆಗೆ ಬರಲಾಗುತಿತ್ತು. ಈಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆ ಜಾಗವನ್ನು ಮುಚ್ಚಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಹೆದ್ದಾರಿಯಿಂದ ನಿರ್ಗಮನ ಪಡೆಯಲು ಪರದಾಡುತ್ತಿದ್ದಾರೆ. ಅತ್ತ ಹಿಂದೆಯೂ ಹೋಗಲು ಆಗದೆ-ಮುಂದೆಯೂ ಹೋಗಲು ಆಗದೆ ಹೆದ್ದಾರಿಯಲ್ಲೆ ವಾಹನ ನಿಲ್ಲಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ಟೋಲ್ ನಷ್ಟದ ನೆಪ

ಮದ್ದೂರಿನ ನಿಡಘಟ್ಟ ಬಳಿಯಿಂದ ಬೆಂಗಳೂರಿನ ನೈಸ್ ರಸ್ತೆವರೆಗಿನ ಮೊದಲ ಹಂತದ ಹೆದ್ದಾರಿಗೆ ಶೇಷಗಿರಿಹಳ್ಳಿ ಬಳಿ ಟೋಲ್ ಕೇಂದ್ರ ಸ್ಥಾಪಿಸಲಾಗಿದೆ. ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ ಕಡೆಯಿಂದ ದಶಪಥ ಹೆದ್ದಾರಿಯಲ್ಲಿ ಬರುವ ವಾಹನಗಳು ಶೇಷಗಿರಿಹಳ್ಳಿ ಬಳಿಯ ಟೋಲ್ ಕೇಂದ್ರದಲ್ಲಿ ಹಣ ಕಟ್ಟಿ ಬೆಂಗಳೂರಿಗೆ ಹೋಗಬೇಕಾಗಿತ್ತು. ಆದರೆ, ವಾಹನಗಳ ಸವಾರರು ಟೋಲ್ ಕೇಂದ್ರ ಒಂದು ಕಿಮೀ ಇದ್ದಗಾಲೆ ನಿರ್ಗಮನವಾಗಿ ಸರ್ವೀಸ್ ರಸ್ತೆಗೆ ಹೋಗುತ್ತಿದ್ದ ಪರಿಣಾಮವಾಗಿ ಟೋಲ್ ಸಂಗ್ರಹಣೆಯಲ್ಲಿ ಬಾರಿ ಇಳಿಕೆಯಾಗಿತ್ತು. ಹಾಗಾಗಿ ನಷ್ಟ ಉಂಟಾಗುತ್ತಿದೆ ಎಂಬ ನೆಪ ಹೇಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಸ್ಸಿಟ್ ಜಾಗ ಬಂದ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಸಿಬ್ಬಂದಿ ನೇಮಕ

ಲಕ್ಷ್ಮೀಸಾಗರ ಗೇಟ್ ಬಳಿ ನಿರ್ಗಮನದ ಪಾಯಿಂಟ್ ಮುಚ್ಚಿ, ಬೆಂಗಳೂರು ಕಡೆಗೆ ಹೆದ್ದಾರಿ ಮೂಲಕ ಹೋಗುವ ಅವಕಾಶ ಮಾಡಿಕೊಟ್ಟು ಪ್ರವೇಶದ ಪಾಯಿಂಟ್ ಮಾತ್ರ ಬಿಟ್ಟಿದ್ದಾರೆ. ಹೆದ್ದಾರಿಯಲ್ಲಿ ಬಂದು ಸರ್ವೀಸ್ ರಸ್ತೆಗೆ ಹೋಗಲು ನಿರ್ಗಮನದ ಜಾಗ ಇಲ್ಲದೆ ಮತ್ತೆ ಹಿಂದಕ್ಕೆ ಹೋಗುವ ಪ್ರಯತ್ನ ಮಾಡುತ್ತಿದ್ದರೆ ಮತ್ತಷ್ಟು ಸವಾರರು ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ಪ್ರವೇಶ ಪಡೆಯಲು ಬಿಟ್ಟಿರುವ ಜಾಗದಲ್ಲಿ ಹೊರ ಹೋಗಲು ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆ ಸ್ಥಳದಲ್ಲಿ ಸಿಬ್ಬಂದಿ ನಿಯೋಜಿಸಿದೆ. ಸ್ಥಳೀಯ ಪೊಲೀಸರ ಸಹಾಯ ಪಡೆದು ಪ್ರವೇಶ ಜಾಗದಲ್ಲಿ ವಾಹನಗಳು ಹೊರ ಹೋಗುವುದನ್ನು ತಡೆದು ಟೋಲ್ ಕೇಂದ್ರದತ್ತ ಹೋಗುವಂತೆ ನೋಡಿಕೊಳ್ಳುತ್ತಿದ್ದಾರೆ.

ದಾಸಪ್ಪನದೊಡ್ಡಿ ಬಳಿಯೇ ನಿರ್ಗಮನ

ಲಕ್ಷ್ಮೀಸಾಗರ ಗೇಟ್ ಬಳಿ ಇದ್ದ ಹೆದ್ದಾರಿ ನಿರ್ಗಮನವನ್ನು ಮುಚ್ಚಿರುವ ಕಾರಣದಿಂದಾಗಿ ಟೋಲ್ ಕಟ್ಟುವುದನ್ನು ತಪ್ಪಿಸಿಕೊಳ್ಳಲು ವಾಹನ ಸವಾರರು ಬಿಡದಿ ಪಟ್ಟಣದ ಹಿಂದೆಯೇ, ಅಂದರೆ ದಾಸಪ್ಪನದೊಡ್ಡಿ ಬಳಿ ಇರುವ ನಿರ್ಗಮನದ ಮೂಲಕ ಬಿಡದಿ ಪಟ್ಟಣಕ್ಕೆ ಬಂದು ಅಲ್ಲಿಂದ ಸರ್ವೀಸ್ ರಸ್ತೆ ಮೂಲಕ ಬೆಂಗಳೂರು ಸೇರಬೇಕಾಗಿದೆ. ಈಗಾಗಲೇ ಹಲವು ವಾಹನಗಳು ದಾಸಪ್ಪನದೊಡ್ಡಿ ಬಳಿಯೇ ನಿರ್ಗಮನವಾಗುತ್ತಿವೆ.

ಲಕ್ಷ್ಮೀಸಾಗರ ಗೇಟ್ ಬಳಿ ದಶಪಥ ಹೆದ್ದಾರಿಯಿಂದ ನಿರ್ಗಮನ ಪಡೆಯಲಾಗುತಿತ್ತು. ಸಾಮಾನ್ಯ ಜನರು ದುಬಾರಿ ಟೋಲ್ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಈಗ ಏಕಾಏಕಿ ಯಾವುದೇ ಮುನ್ಸೂಚನೆ ನೀಡದೆ ನಿರ್ಗಮನದ ಜಾಗ ಬಂದ್ ಮಾಡಲಾಗಿದೆ. ಈ ಬಗ್ಗೆ ಜನ ಪ್ರತಿನಿಧಿಗಳು ಗಮನಕೊಟ್ಟು ಈ ಹಿಂದೆ ಇದ್ದ ಹಾಗೆ ನಿರ್ಗಮನ ಜಾಗಕ್ಕೆ ಅನುವು ಮಾಡಿಕೊಡಬೇಕಿದೆ.ಮಹೇಶ್, ಕಾರು ಚಾಲಕ, ಶೀಘ್ರ ಮಂಚನಬೆಲೆ ಎಡದಂಡೆ ನಾಲೆಗೆ ನೀರು!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net