ರೇಷ್ಮೆ ಕೃಷಿ ಶೀಘ್ರ ವಿಮಾ ವ್ಯಾಪ್ತಿಗೆ!

26-04-rama-silk
Published on

* ಬೆಳೆಗಾರರಿಗೆ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ

ರಾಮನಗರ

ಪ್ರಕೃತಿ ವಿಕೋಪ, ಕೀಟ ಬಾಧೆ, ವಿವಿಧ ರೋಗಗಳಿಗೆ ತುತ್ತಾಗಿ ನಷ್ಟಕ್ಕೆ ಒಳಗಾಗುತ್ತಿದ್ದ ರೇಷ್ಮೆ ಬೆಳೆಗಾರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರೇಷ್ಮೆ ಕೃಷಿಯನ್ನು ವಿಮಾ ವ್ಯಾಪ್ತಿಗೆ ಒಳಪಡಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ದರ ಏರಿಳಿತದ ಹೊರತಾಗಿಯೂ ರೇಷ್ಮೆ ಬೆಳಗಾರರು ಸಾಕಷ್ಟು ಆರ್ಥಿಕ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ಪೂರ್ವದಲ್ಲಿ ಉಂಟಾಗುವ ನಷ್ಟ ಭರಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಹಿಂದಿನಿಂದಲೂ ಆಗ್ರಹ ಕೇಳಿ ಬರುತ್ತಲೇ ಇತ್ತು. ಈಗ ಈ ಬೇಡಿಕೆ ಈಡೇರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ರೇಷ್ಮೆ ಕೃಷಿಯನ್ನು ಬೆಳೆ ವಿಮೆ ವ್ಯಾಪ್ತಿಗೆ ಒಳಪಡಿಸುವ ನಿಟ್ಟಿನಲ್ಲಿ ರಾಜ್ಯದ ವಿವಿಧ ಭಾಗಗಳ ರೇಷ್ಮೆ ಬೆಳೆಗಾರರ ಪ್ರತಿನಿಧಿಯೊಂದಿಗೆ ಅಧಿಕಾರಿಗಳು ಬೆಂಗಳೂರಿನಲ್ಲಿ ಸಭೆ ನಡೆಸಿ, ಸಾಧಕ ಬಾಧಕ ಚರ್ಚೆ ನಡೆಸಿದ್ದಾರೆ.

ವಿವಿಧ ಹಂತದಲ್ಲಿ ವಿಮೆ

ರೇಷ್ಮೆ ಬೆಳೆ ವಿವಿಧ ಹಂತಗಳಲ್ಲಿ ನಡೆಯುವ ಬೆಳವಣಿಗೆ ಆಗಿರುವುದರಿಂದ ಹಿಪ್ಪು ನೇರಳೆ ತೋಟದಿಂದ ಆರಂಭಗೊಂಡು - ಗೂಡು ಕಟ್ಟುವ ಹಂತದವರೆಗೂ ವಿವಿಧ ಹಂತಗಳಲ್ಲಿ ವಿಮೆ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಹಿಪ್ಪು ನೇರಳೆ ತೋಟ, ರೈತರಿಂದ ರೇಷ್ಮೆ ಹುಳುಗಳ ಸಾಕಣೆ, ನೋಂದಾಯಿತ ರೇಷ್ಮೆ ಮೊಟ್ಟೆ ಉತ್ಪಾದಕರು, ನೋಂದಾಯಿತ ಚಾಕಿ ಸಾಕಣೆ ಕೇಂದ್ರಗಳನ್ನು ವಿಮೆ ವ್ಯಾಪ್ತಿಗೆ ಒಳಪಡಿಸಲು ಈ ಮೂಲಕ ವಿವಿಧ ಹಂತದಲ್ಲಿಯೂ ರೇಷ್ಮೆ ಬೆಳೆಗೆ ವಿಮೆ ಬಲ ಒದಗಿಸಲು ಚರ್ಚೆ ನಡೆಸಲಾಗಿದೆ.

ಪ್ರಸ್ತುತ ಸನ್ನಿವೇಶದಲ್ಲಿ ರೇಷ್ಮೆ ತೋಟಕ್ಕೆ ಥ್ರಿಪ್ಸ್, ಎಲೆ ಸುರಳಿ ರೋಗಕ್ಕೆ ಹೆಚ್ಚಾಗಿ ತುತ್ತಾಗುತ್ತಿವೆ. ಜತೆಗೆ ನೇರವಾಗಿ ಚಾಕಿ ಸಾಕಣೆ ಕೇಂದ್ರದಿಂದ ರೇಷ್ಮೆ ಹುಳುಗಳನ್ನು ಖರೀದಿ ಮಾಡಿ ತಂದರೂ ನಂತರ ಗಂಟು ರೋಗ, ಸುಣ್ಣಕಟ್ಟು ರೋಗ ಸೇರಿ ವಿವಿಧ ರೋಗಗಳಿಗೆ ತುತ್ತಾಗಿ ಬೆಳೆ ನಷ್ಟ ಉಂಟಾಗುತ್ತಿದೆ. ಇನ್ನು ಚಾಕಿ ಸಾಕಣೆ ಕೇಂದ್ರದಲ್ಲಿಯೂ ಮೊಟ್ಟೆ ಮತ್ತು ಚಾಕಿಗಳು ರೋಗಕ್ಕೆ ತುತ್ತಾಗಿ ಚಾಕಿ ಸಾಕಣೆಕಾದಾರರು ನಷ್ಟಕ್ಕೆ ಒಳಗಾಗುತ್ತಾರೆ. ಇವರೆಲ್ಲರಿಗೂ ವಿಮೆ ನಷ್ಟದ ಪ್ರಮಾಣ ಕಡಿಮೆ ಮಾಡಲಿದೆ.

ವಾರ್ಷಿಕ 5 ಬಾರಿ ವಿಮೆ

ಪ್ರಸ್ತುತ ರೇಷ್ಮೆ ಬೆಳೆ ವಿಮೆಯನ್ನು ವಾರ್ಷಿಕ 5 ಬಾರಿ ಪಡೆಯುವ ಅವಕಾಶ ನೀಡುವ ಸಂಬಂಧವೂ ಸಭೆಯಲ್ಲಿ ಚರ್ಚೆ ನಡೆದಿದೆ. ಒಮ್ಮೆ ವಾರ್ಷಿಕ ವಿಮೆಯ ಕಂತನ್ನು ರೈತರು ಪಾವತಿ ಮಾಡಿದರೆ ನೋಂದಣಿಯಾದರೆ 5 ಬಾರಿ ಬೆಳೆ ನಷ್ಟಕ್ಕೆ ಪರಿಹಾರ ಪಡೆದುಕೊಳ್ಳಬಹುದು. ಆದರೆ, ಇದಕ್ಕೆ ಇಲಾಖೆ ನಿಗದಿ ಮಾಡುವ ಮಾನದಂಡದಲ್ಲಿ ಪರಿಹಾರ ದೊರೆಯಲಿದೆ. ಆದರೆ, ವಿಮೆ ಪ್ರೀಮಿಯಂ ದರವನ್ನು ರೈತರ ಜೇಬಿಗೆ ಬಾರವಾಗದಂತೆ ಮಾಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ವಿವಿಧ ತಳಿ ಹಾಗೂ ಬೆಳೆಗಳು ಮತ್ತು ವಿವಿಧ ಹಂತಗಳಿಗೆ ಎಷ್ಟೆಲ್ಲ ವಿಮಾ ಕಂತನ್ನು ರೈತರು ಪಾವತಿ ಮಾಡಬೇಕು ಎನ್ನುವ ನಿರ್ಧಾರ ಶೀಘ್ರವೇ ಹೊರ ಬೀಳುವ ಸಾಧ್ಯತೆಯೂ ಇದೆ.

ಒಟ್ಟಾರೆಯಾಗಿ ರೇಷ್ಮೆ ಬೆಳೆಯೂ ವಿಮಾ ವ್ಯಾಪ್ತಿಗೆ ಒಳಪಡಿಸುವ ಪ್ರಯತ್ನ ಮೂರ್ತ ರೂಪಕ್ಕೆ ಬರುವುದು ಬಹುತೇಕ ನಿಚ್ಚಳವಾಗಿದ್ದು, ಶೀಘ್ರವೇ ಆದೇಶ ಹೊರ ಬೀಳುವ ಸಾಧ್ಯತೆ ಇದೆ.

ಪ್ರಕೃತಿ ವಿಕೋಪ ಸೇರಿ ವಿವಿಧ ಕಾರಣಗಳಿಗಾಗಿ ರೇಷ್ಮೆ ಬೆಳೆಗಾರರು ಸಾಕಷ್ಟು ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೇರೆ ಬೆಳೆಗಳಂತೆ ರೇಷ್ಮೆಯನ್ನೂ ವಿಮೆ ವ್ಯಾಪ್ತಿಗೆ ಒಳಪಡಿಸುವಂತೆ ಹಿಂದಿನಿಂದಲೂ ಬೇಡಿಕೆ ಇಡಲಾಗಿತ್ತು. ಈಗ ಇದಕ್ಕೆ ಚಾಲನೆ ದೊರೆತಿದ್ದು, ರೇಷ್ಮೆ ಬೆಳೆಗಾರರು ಸೇರಿ ವಿವಿಧ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದೆ. ಆದೇಶ ಶೀಘ್ರವೇ ದೊರೆಯುವ ಸಾಧ್ಯತೆ ಇದೆ. ಕೆ. ರವಿ, ರೇಷ್ಮೆ ಬೆಳೆಗಾರರ ಹಿತ ರಕ್ಷಣಾ ಸಮಿತಿ ಕಾರ್ಯದರ್ಶಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net