

ಮೈಸೂರು: ಸಂಕಷ್ಟದಲ್ಲಿರುವ ರೈತರ ಆದಾಯ ಹೆಚ್ಚಿಸಲು ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು. ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ಕಬ್ಬು ಬೆಳೆಗಾರರ ಸಂಘದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ರೈತ ದಿನಾಚರಣೆ ಮತ್ತು ರೈತರ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದರು. ಕೃಷಿ ಮೂಲಕ ರೈತರಿಗೆ ಹೆಚ್ಚಿನ ಆದಾಯ ತರಲು ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಉದ್ಯೋಗ ಸೃಜನೆಗೆ ಪೂರಕವಾಗಿ ಸೆಕೆಂಡರಿ ಅಗ್ರಿಕಲ್ಚರ್ ಡೈರಕ್ಟೊರೇಟ್ (ನಿರ್ದೇಶನಾಲಯ) ಸ್ಥಾಪಿಸಲಾಗುವುದು. ಕೃಷಿ ಉತ್ಪನ್ನಗಳಿಂದ ಉಪ ಕೃಷಿ ಉತ್ಪನ್ನ ತಯಾರಿಸಲಾಗುವುದು. ಇದರಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ ಆಗುತ್ತದೆ. ಒಟ್ಟಾರೆ ರೈತರ ಆದಾಯ ಅಧಿಕವಾಗುತ್ತದೆ ಎಂದರು.
ರೈತರ ಮಕ್ಕಳ ಕಲಿಕೆಗೆ ಅನುಕೂಲ ಕಲ್ಪಿಸುವ ವಿದ್ಯಾನಿಧಿ ಯೋಜನೆಯನ್ನು ಗ್ರಾಮೀಣ ಭಾಗದ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೂ ವಿಸ್ತರಣೆ ಮಾಡಲಾಗುವುದು. ವಿದ್ಯಾನಿಧಿಯಿಂದ ಸದ್ಯ 2.40 ಲಕ್ಷ ರೈತರ ಮಕ್ಕಳಿಗೆ ಅನುಕೂಲವಾಗಿದ್ದು, ಈ ಸಂಖ್ಯೆ 2021-22ನೇ ಸಾಲಿನ ಶೈಕ್ಷಣಿಕ ವರ್ಷಾಂತ್ಯಕ್ಕೆ 5 ಲಕ್ಷ ತಲುಪಲಿದೆ ಎಂದು ತಿಳಿಸಿದರು.
ವಿಶ್ವ ವ್ಯಾಪಾರ ಸಂಘಟನೆಗೆ(ಡಬ್ಲ್ಯುಟಿಒ) ಸಹಿ ಹಾಕಿದ ಬಳಿಕ ರೈತರ ಹಣೆಬರಹವೇ ಬದಲಾಗಿದೆ. ಇದರಿಂದ ಜಾರಿಗೆ ಬಂದಿರುವ ಮುಕ್ತ ಮಾರುಕಟ್ಟೆಯಿಂದ ಬೆಲೆ ನಿಯಂತ್ರಣ ಹಕ್ಕನ್ನೇ ಕಳೆದುಕೊಂಡಿದ್ದು, ಎಪಿಎಂಸಿ ಕಾಯ್ದೆ ಜಾರಿಗೆ ತರುವ ಮುನ್ನವೇ 2007ರಲ್ಲಿ ರಿಲಾಯನ್ಸ್, ಮೆಟ್ರೋದಂತಹ 47 ದೈತ್ಯ ಕಂಪನಿಗಳು ಕೃಷಿ ಮಾರುಕಟ್ಟೆ ಪ್ರವೇಶಿಸಿವೆ. ಇದೆಲ್ಲ ಕೃಷಿ ಸಂಬಂಧಿಸಿದ ಅಂತಾರಾಷ್ಟ್ರೀಯ ಮಟ್ಟದ ಒಪ್ಪಂದಗಳಿಗೆ ಸಹಿ ಹಾಕಿದ ದೂರಗಾಮಿ ಪರಿಣಾಮವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ನಿಯಂತ್ರಣ ವ್ಯವಸ್ಥೆಯಿಂದ ಹೊರಬಂದರೆ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಹೇಳಿದರು.